ಮಂಗಳವಾರ, ಜನವರಿ 31, 2023
27 °C
ತಿಂಗಳ ಅಂತರದಲ್ಲೇ ಇಬ್ಬರು ಸಾವು; ಹೆಚ್ಚಿದ ಆತಂಕ

ಮೈಸೂರು | ಚಿರತೆ ಸಂಚಾರ; ನೆಮ್ಮದಿಗೆ ಸಂಚಕಾರ

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ ಅಲ್ಲಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದು ಹಾಗೂ ಆ ಪ್ರಾಣಿಯು ತಿಂಗಳ ಅಂತರದಲ್ಲೇ ಇಬ್ಬರನ್ನು ಸಾಯಿಸಿರುವುದು ಆತಂಕಕ್ಕೆ ಜನರ ಕಾರಣವಾಗಿದೆ.

ತಿ.ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಚಿರತೆಯು ದಾಳಿ ನಡೆಸಿ ಯುವಕನನ್ನು ಅ.31ರಂದು ಕೊಂದಿತ್ತು. ಎಂ.ಎಲ್‌.ಹುಂಡಿ ಗ್ರಾಮದ ಚನ್ನಮಲ್ಲು ಎಂಬುವರ ಪುತ್ರ ಮಂಜುನಾಥ್ (22) ಮೃತಪಟ್ಟಿದ್ದರು. ಅದೇ ತಾಲ್ಲೂಕಿನ ಎಸ್‌.ಕೆಬ್ಬೆಹುಂಡಿ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಮೇಘನಾ (22) ಎಂಬ ಯುವತಿಯನ್ನು ಡಿ.1ರಂದು ಸಾಯಿಸಿದೆ. ಇದು, ಆ ಭಾಗದ ಜನರಲ್ಲಿ  ಭೀತಿಯನ್ನು ಹೆಚ್ಚಿಸಿದೆ.

ಎಲ್ಲೆಲ್ಲಿ?: ಕೆ.ಆರ್.ನಗರ ಪಟ್ಟಣದ ಮುಳ್ಳೂರು ರಸ್ತೆಯಲ್ಲಿ ನ.4ರಂದು ಕಾಣಿಸಿಕೊಂಡಿದ್ದ ಚಿರತೆಯು ಅರಣ್ಯ ಇಲಾಖೆಯ ಅಧಿಕಾರಿ ಸೇರಿದಂತೆ ನಾಲ್ವರನ್ನು ಗಾಯಗೊಳಿಸಿ ಜನರಲ್ಲಿ ಬಹಳಷ್ಟು ಆತಂಕ ಸೃಷ್ಟಿಸಿತ್ತು. ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಗಾಯಗೊಂಡಿದ್ದರು. ಅರಣ್ಯ, ಪೊಲೀಸ್, ಅಗ್ನಿಶಾಮಕ ದಳ ಹಾಗೂ ಪಶುವೈದ್ಯ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದಿದ್ದರು. ಮೈಸೂರು ತಾಲ್ಲೂಕಿನ ರಟ್ಟನಹಳ್ಳಿ ಸೇರಿದಂತೆ ವಿವಿಧೆಡೆ ಚಿರತೆಗಳು ಬೋನಿಗೆ ಬಿದ್ದಿವೆ.

ವರುಣಾ ಭಾಗದಲ್ಲೂ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿರುದು ಅಲ್ಲಿನ ಜನರಲ್ಲಿ ಭೀತಿ ಉಂಟು ಮಾಡಿದೆ. ನಗರದ ಆರ್‌ಬಿಐ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನೆರೆಯ ಪ್ರಖ್ಯಾತ ಪ್ರವಾಸಿ ತಾಣ ಕೆಅರ್‌ಎಸ್‌ನಲ್ಲಿ ಚಿರತೆ ಕಾಣಿಸಿಕೊಂಡು ಅಲ್ಲಿಗೆ ಪ್ರವೇಶವನ್ನೇ ನಿಷೇಧಿಸಲಾಗಿತ್ತು. ಇತ್ತೀಚೆಗೆ ಅವಕಾಶ ಕೊಡಲಾಗಿದೆಯಾದರೂ, ಚಿರತೆಯ ಭೀತಿ ನಿವಾರಣೆಯಾಗಿಲ್ಲ. ಮೈಸೂರು ತಾಲ್ಲೂಕು, ಎಚ್‌.ಡಿ.ಕೋಟೆ, ಹುಣಸೂರು ತಾಲ್ಲೂಕಲ್ಲೂ ಕಾಣಿಸಿಕೊಳ್ಳುತ್ತಿದೆ. ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯೂ ನಡೆಯುತ್ತಿದೆ.

ಸಭೆಯಲ್ಲೂ ಪ್ರತಿಧ್ವನಿಸಿತ್ತು: ‘ದೇವಲಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಯ ವಿವಿಧೆಡೆ ಚಿರತೆಗಳ ಹಾವಳಿ ಇದೆ. ಬಹಳಷ್ಟು ಕುರಿ–ಮೇಕೆಗಳನ್ನು ಕೊಂದಿವೆ. ಇದರಿಂದ ಜನರಿಗೆ ನಷ್ಟ ಆಗುತ್ತಿರುವುದಲ್ಲದೇ ಆತಂಕವೂ ಎದುರಾಗಿದೆ. ಆದರೆ, ಅರಣ್ಯ ಇಲಾಖೆಯವರು ಕ್ರಮ ಕೈಗೊಂಡಿಲ್ಲ’ ಎಂಬ ಅಸಮಾಧಾನವು ಸೆ.17ರಂದು ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ವ್ಯಕ್ತವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಸಿಎಫ್ ಕಮಲಾ ವಿ.ಕರಿಕಾಳನ್ ‘ಚಿರತೆ ಕಾಣಿಸಿಕೊಂಡ ಮಾಹಿತಿ ಬಂದ ಕೂಡಲೇ ಬೋನುಗಳನ್ನು ಇಟ್ಟು ಸೆರೆಗೆ ಕ್ರಮ ವಹಿಸಲಾಗುತ್ತಿದೆ. ಚಿರತೆಗಳನ್ನು ಹಿಡಿದು ಬಂಡೀಪುರಕ್ಕೆ ಬಿಟ್ಟಿದ್ದೇವೆ. ಇತ್ತೀಚೆಗೆ ಅವುಗಳ ಓಡಾಟ ಹೆಚ್ಚಾಗಿದೆ’ ಎಂದು ಡಿಸಿಎಫ್‌ ಕಮಲಾ ವಿ. ಕರಿಕಾಳನ್ ಪ್ರತಿಕ್ರಿಯಿಸಿದ್ದರು.

ಬಳಿಕವೂ ಜಿಲ್ಲೆಯ ಹಲವೆಡೆ ಚಿರತೆಗಳು ಕಾಣಿಸಿಕೊಂಡಿವೆ. ಇಬ್ಬರು ಬಲಿಯೂ ಆಗಿದ್ದಾರೆ. ಚಿರತೆ–ಮಾನವ ಸಂಘರ್ಷ ಮುಂದುವರಿದಿದೆ. ಇದು, ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಚಿರತೆಗಳನ್ನು ಸೆರೆ ಹಿಡಿದು ಆತಂಕ ನಿವಾರಿಸಬೇಕು, ದಾಳಿ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಕಬ್ಬು ಬೇಗ ಕಟಾವು ಮಾಡಿ

‘ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆಗಳ ಚಲನವಲನವಿರುವ ಕಡೆಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಗೆ 14 ತಂಡಗಳನ್ನು ರಚಿಸಲಾಗಿದೆ. ಮಲ್ಲಿಕಾಚಲ ಬೆಟ್ಟದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿರತೆ ಕಾಣಿಸಿದ್ದು, ಅಲ್ಲಿ 8 ತಂಡಗಳಿಂದ ಕೂಂಬಿಂಗ್ ಮಾಡಲಾಗುತ್ತಿದೆ. ಗುಡ್ಡದ ಪ್ರದೇಶವಾದ್ದರಿಂದ ಚಿರತೆಗೆ ಸಹಕಾರಿಯಾಗಿದೆ. ಬೀದಿ ನಾಯಿಗಳು, ಕುರಿ, ಮೇಕೆಯಂತ ಆಹಾರ ಸಿಕ್ಕಿದೆ. ತಪ್ಪಿಸಿಕೊಳ್ಳುವುದಕ್ಕೆ ಆ ಜಾಗ ಸುರಕ್ಷಿತವಾಗಿದೆ’ ಎನ್ನುತ್ತಾರೆ’ ಡಿಸಿ‍ಎಫ್ ಕಮಲಾ ಕರಿಕಾಳನ್.

‘ಆ ಭಾಗದಲ್ಲಿ ಎಲ್ಲ ಕಡೆಯೂ ಕಬ್ಬಿನ ಗದ್ದೆಗಳಿವೆ. ವಂಶಾಭಿವೃದ್ಧಿಯ ಸಮಯ ಇದಾದ್ದರಿಂದ, ಚಿರತೆಯು ಕಬ್ಬಿನ ಗದ್ದೆಗಳನ್ನು ಸೇರಿಬಿಡುತ್ತದೆ. ಹೀಗಾಗಿ, 23 ಗ್ರಾಮ  ಪಂಚಾಯಿತಿಗಳ ವ್ಯಾಪ್ತಿಯ 40 ಹಳ್ಳಿಗಳ ಭಾಗದಲ್ಲಿ ಕಬ್ಬು ಕಟಾವು ಮಾಡಿದರೆ ಚಿರತೆ ಸೆರೆಗೆ ಸಹಕಾರಿಯಾಗುತ್ತದೆ. ಅಲ್ಲಲ್ಲಿ ಬೋನುಗಳನ್ನೂ ಇಡಲಾಗಿದೆ’ ಎಂದು ಹೇಳಿದರು.

‘ಆ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದೆ. ಮುಂದಿನ ವಾರ ಕಟಾವು ನಿಗದಿಯಾಗಿತ್ತು. ಅದನ್ನು ಮುಂಚಿತವಾಗಿಯೇ ಮಾಡಿಸುವಂತೆ ಜಿಲ್ಲಾಡಳಿತವನ್ನು ಕೋರಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ 16 ಚಿರತೆ ಸೆರೆ

ಇಲಾಖೆಯಿಂದ ಜಿಲ್ಲೆಯಲ್ಲಿ ಹೋದ ವರ್ಷ 24 ಚಿರತೆಗಳನ್ನು ಸೆರೆ ಹಿಡಿಯಲಾಗಿತ್ತು. ಈ ವರ್ಷದ ಏಪ್ರಿಲ್‌ನಿಂದೀಚೆಗೆ 16 ಚಿರತೆಗಳು ಬೋನಿಗೆ ಬಿದ್ದಿವೆ.

ತಿ.ನರಸೀಪುರ ತಾಲ್ಲೂಕಿನ ಮಲ್ಲಿಕಾರ್ಜುನ, ರಂಗನಾಥಸ್ವಾಮಿ ಬೆಟ್ಟದ ಪ್ರದೇಶದಲ್ಲಿ ಚಿರತೆಗಳಿವೆ. ಆದರೆ, ಅವು ಮಾನವನ ಮೇಲೆ ದಾಳಿ ಮಾಡಿರಲಿಲ್ಲ. ತಿಂಗಳ ಅಂತರದಲ್ಲೇ ಇಬ್ಬರು ಚಿರತೆ ದಾಳಿಗೆ ಬಲಿಯಾಗಿರುವುದು ಕಂಗಾಲಾಗುವಂತೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು