ಮೈಸೂರು: ನಾಡಹಬ್ಬ ಮೈಸೂರು ದಸರೆಗೆ ಪ್ರತಿಯಾಗಿ ‘ಮಹಿಷ ದಸರಾ ಆಚರಣೆ ಸಮಿತಿ’ಯಿಂದ ಇಲ್ಲಿನ ಪುರಭವನದ ಆವರಣದಲ್ಲಿ ಭಾನುವಾರ ‘ಮಹಿಷ ಮಂಡಲೋತ್ಸವ’ದ ಹೆಸರಿನಲ್ಲಿ ‘ಮಹಿಷ ದಸರಾ’ ಆಚರಿಸಲಾಯಿತು. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ‘ಪುಷ್ಪಾರ್ಚನೆ’ ಮಾಡಲು ಜಿಲ್ಲಾಡಳಿತ ಅವಕಾಶ ಕೊಡಲಿಲ್ಲ. ಇದರಿಂದ ಆಕ್ರೋಶಗೊಂಡ ಸಮಿತಿಯು, ‘ದಸರಾ ಉದ್ಘಾಟನೆ ಹಾಗೂ ಮೆರವಣಿಗೆಯನ್ನು ಹೇಗೆ ನಡೆಸುತ್ತೀರಿ ನೋಡುತ್ತೇವೆ’ ಎಂದು ಸವಾಲು ಹಾಕಿದೆ.
‘ಅ.12ರಂದು ನಡೆಯಲಿರುವ ವಿಜಯದಶಮಿ ಮೆರವಣಿಗೆಯಂದು ಅಶೋಕಪುರಂ ಉದ್ಯಾನದಿಂದ ಅಶೋಕ ಚಕ್ರವರ್ತಿಯ ಪ್ರತಿಮೆ ಮೆರವಣಿಗೆ ಮಾಡುತ್ತೇವೆ. ನಮ್ಮ ಧಾರ್ಮಿಕ ಭಾವನೆಯನ್ನೂ ಗೌರವಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಎದುರಿಸಿ’ ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸರ್ಕಾರಕ್ಕೆ ಸವಾಲು ಹಾಕಿದರು.
‘ಸಮುದಾಯದ ಭಾವನೆಗಳಿಗೆ ಸಂವಿಧಾನದ ಅನುಸಾರ ಸಮಾನ ಪ್ರಾಶಸ್ತ್ಯ ನೀಡುತ್ತಿಲ್ಲ. ನಮ್ಮ ಆಚರಣೆ ತಡೆದಿದ್ದೀರಿ. ದಸರಾ ಹೇಗೆ ಉದ್ಘಾಟಿಸುತ್ತೀರಿ ನೋಡೋಣ. ಅಂದು ರಾಜ್ಯದೆಲ್ಲೆಡೆ ರಸ್ತೆ, ರೈಲು, ಬಸ್ ತಡೆ ನಡೆಸಿ ಬಿಸಿ ಮುಟ್ಟಿಸುತ್ತೇವೆ. ವಿಜಯದಶಮಿಯಂದು ಅಶೋಕ ಚಕ್ರವರ್ತಿ ಶಸ್ತ್ರತ್ಯಾಗ ಮಾಡಿ ಬೌದ್ಧ ಧರ್ಮ ಸ್ವೀಕರಿಸಿದ್ದ. ಹೀಗಾಗಿ, ಆತನ ಪ್ರತಿಮೆ ಮೆರವಣಿಗೆ ನಡೆಸಲಿದ್ದೇವೆ’ ಎಂದು ತಿಳಿಸಿದರು.
ಪ್ರಚೋದಿಸುವವರ ಬಿಟ್ಟು
‘ಬೌದ್ಧರು ಶಾಂತಿ ಪ್ರಿಯರು, ಎಲ್ಲರನ್ನೂ ಗೌರವಿಸುತ್ತೇವೆ. ನಮ್ಮನ್ನು ವಿರೋಧಿಸುವವರು ಮನೆಯಲ್ಲಿ ಕುಳಿತು ಹೇಡಿಗಳಂತೆ ಮಾತನಾಡಬೇಡಿ. ಸವಾಲು ಸ್ವೀಕರಿಸಿ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.
‘ಮಹಿಷ ದಸರಾ ಸಂಭ್ರಮಾಚರಣೆ ದೊಡ್ಡ ಮಟ್ಟದಲ್ಲಿ ಆಗಬೇಕಿತ್ತು. ನಾವು ಆಯ್ಕೆ ಮಾಡಿದ ಸರ್ಕಾರವೇ ಸಮುದಾಯಕ್ಕೆ ದ್ರೋಹ ಮಾಡಿದೆ. ಮಹಿಷನನ್ನು ಪೂಜಿಸಲು ಯಾರ ಅಪ್ಪಣೆಯೂ ಬೇಕಿಲ್ಲ’ ಎಂದರು.
ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಪ್ರಚೋದಿಸುವವರ ವಿರುದ್ಧ ಕಾನೂನು ಕ್ರಮ ವಹಿಸುವ ಬದಲಿಗೆ ಮಹಿಷ ಪ್ರತಿಮೆಗೆ ನಮಿಸಿ ಶಾಂತಿಯಿಂದ ಬರಲು ಹೊರಟಿದ್ದವರ ವಿರುದ್ಧ ಸರ್ಕಾರ ನಿಂತಿದೆ. ಬಾಬಾಸಾಹೇಬರ ಸಂವಿಧಾನ ಸತ್ತು ಹೋಗಿದೆ. ನಿಮ್ಮ ದಸರೆಗೆ ನಾವು ತೊಂದರೆ ಕೊಟ್ಟಿಲ್ಲ. ನಮಗೇಕೆ ತೊಂದರೆ ಕೊಡುತ್ತಿದ್ದೀರಿ? ಚಾಮುಂಡಿ ಬೆಟ್ಟವನ್ನು ಬೇರೆ ಯಾರ ಹೆಸರಿಗಾದರೂ ಖಾತೆ ಮಾಡಿಕೊಟ್ಟಿದ್ದೀರಾ, ದಸರಾ ಮೆರವಣಿಗೆಯಲ್ಲಿ ನಂದಿಧ್ವಜ ಪೂಜೆ ಹೇಗೆ ಮಾಡುತ್ತೀರಾ ನೋಡುತ್ತೇವೆ’ ಎಂದರು.
ಬಿಗುವಿನ ವಾತಾವರಣ
ಪುರಭವನದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆಯೋಜಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಬೆಟ್ಟಕ್ಕೆ ತೆರಳಲು ಅವಕಾಶ ಕೊಡುವಂತೆ ಮುಖಂಡರು ಪಟ್ಟು ಹಿಡಿದರು. ಕರೆದೊಯ್ಯವುದಾಗಿ ವಾಹನ ಹತ್ತಿಸಿಕೊಂಡ ಪೊಲೀಸರು, ಅವರನ್ನು ಅಶೋಕಪುರಂನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಕರೆದೊಯ್ದರು! ಅಲ್ಲಿ, ಮುಖಂಡರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪುರಭವನ ಹೊರತುಪಡಿಸಿ ಚಾಮುಂಡಿಬೆಟ್ಟ ಸೇರಿದಂತೆ ನಗರದ ಎಲ್ಲಿಯೂ ಮಹಿಷ ದಸರಾ ಪರ ಅಥವಾ ವಿರೋಧ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ; ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.