ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಬಿಜೆಪಿಯಲ್ಲಿ ಅಸಮಾಧಾನದ ಹೊಗೆ

ಸ್ವಪಕ್ಷೀಯರ ವಿರುದ್ಧವೇ ಸಂಸದರ ‘ಪ್ರತಾಪ’: ಯದುವೀರ್‌ ವಿರುದ್ಧವೂ ಪರೋಕ್ಷ ವಾಗ್ದಾಳಿ
Published 13 ಮಾರ್ಚ್ 2024, 0:15 IST
Last Updated 13 ಮಾರ್ಚ್ 2024, 0:15 IST
ಅಕ್ಷರ ಗಾತ್ರ

ಮೈಸೂರು: ಅಭ್ಯರ್ಥಿ ಘೋಷಣೆಗೆ ಮುನ್ನವೇ ಮೈಸೂರಿನ ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಹೊಗೆ ಎದ್ದಿದ್ದು, ಹಾಲಿ ಸಂಸದ ಪ್ರತಾಪ ಸಿಂಹ ತಮ್ಮ ಪಕ್ಷದ ನಾಯಕರ ವಿರುದ್ದವೇ ಹರಿಹಾಯ್ದಿದ್ದಾರೆ.

ಮೈಸೂರು–ಕೊಡಗು ಕ್ಷೇತ್ರದಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ದಟ್ಟವಾಗುತ್ತಲೇ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಲವು ರಾಜ್ಯ ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಪಕ್ಷದ ಸಂಭಾವ್ಯ ಅಭ್ಯರ್ಥಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಹೊಗಳುತ್ತಲೇ ಕಾಲೆಳೆದರು.

ನಂತರ ನಗರದ ಬೋಗಾದಿಯಲ್ಲಿ ನಡೆದ ಪಕ್ಷದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲೂ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ ಸಿಂಹ, ಮಾತು ಮುಗಿಸುತ್ತಲೇ ವೇದಿಕೆಯಿಂದ ನಿರ್ಗಮಿಸಿದರು. ಬಿಜೆಪಿಯ ಕರ್ನಾಟಕ ಉಸ್ತುವಾರಿ ರಾಧಾಮೋಹನ್‌ ದಾಸ್ ಅಗರವಾಲ್‌ ಭೇಟಿಗೆಂದು ಬೆಂಗಳೂರಿಗೆ ತೆರಳಿದರು.

‘ನನಗೆ ಈ ಕ್ಷಣಕ್ಕೂ ಟಿಕೆಟ್‌ ಸಿಗುವ ವಿಶ್ವಾಸವಿದೆ. ಸಂಘಟನೆ ಹಾಗೂ ಸಿದ್ದಾಂತಕ್ಕೆ ನಾನು ನಿಂತಿರುವ ರೀತಿ ಪರಿಗಣಿಸಿ ನನಗೆ ಟಿಕೆಟ್ ಕೊಡಬೇಕು. ಬಿಜೆಪಿಯ 25 ಹಾಲಿ ಸಂಸದರಲ್ಲಿ ಹಿಂದುತ್ವದ ಬದ್ಧತೆಯಲ್ಲಿ ನನಗೆ ಸಮನಾದ ಮತ್ತೊಬ್ಬ ಸಂಸದರಿಲ್ಲ’ ಎಂದರು.

‘ಈ ಹಿಂದೆ ಇಲ್ಲಿ ಬಿಜೆಪಿಯಿಂದ ಗೆದ್ದವರು ಹೇಗೆ ಪಕ್ಷ ಕಟ್ಟಿದ್ದರೆಂಬುದು ಗೊತ್ತಿದೆ. ನಿಮ್ಮ ಮನೆ ಕಾಯುವವರಿಗೆ ಟಿಕೆಟ್‌ ಕೊಡಬೇಕೇ ಹೊರತು ನಾವೇ ಅವರ ಮನೆ ಕಾಯುವಂತೆ ಆಗಬಾರದು’ ಎಂದು ಎಚ್ಚರಿಸಿದರು.

ಯದುವೀರ್‌ ವಿರುದ್ಧ ವಾಗ್ದಾಳಿ:
‘ಎ.ಸಿ. ಕೋಣೆಯಲ್ಲಿ, ಸುಖದ ಸುಪ್ಪತ್ತಿಗೆಯಲ್ಲಿರುವವರು ಜನರ ಭಾವನೆಯನ್ನು ಹಂಚಿಕೊಳ್ಳುತ್ತೇವೆಂದು ಬಂದಾಗ ಖಂಡಿತ ಸ್ವಾಗತಿಸಬೇಕು. ಇಂತಹ ಉದಾರ ಮನಸ್ಸನ್ನು ಹೊಂದಿರುವ ಯದುವೀರ್ ಸ್ಪರ್ಧೆಯನ್ನು ಸ್ವಾಗತಿಸುವೆ. ಅದಕ್ಕಾಗಿ ಪಕ್ಷದ ರಾಜ್ಯ ನಾಯಕರನ್ನು ಅಭಿನಂದಿಸುವೆ’ ಎಂದು ಲೇವಡಿ ಮಾಡಿದರು.

‘ಅರಮನೆಯಲ್ಲಿ ಆರಾಮವಾಗಿ ಇರುವಂತಹ ವ್ಯಕ್ತಿಯು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕರಪತ್ರ ಹಿಡಿದು ಪ್ರತಿಭಟನೆ ಮಾಡುತ್ತಾ, ಸಾಮಾನ್ಯ ಕಾರ್ಯಕರ್ತರ ಜೊತೆ ಕುಳಿತು ಘೋಷಣೆ ಕೂಗಲು ಸಿದ್ಧರಾಗಿದ್ದಾರೆ ಎನ್ನುವುದಾದರೆ ಅದನ್ನು ಶ್ಲಾಘಿಸಲೇಬೇಕಾಗುತ್ತದೆ’ ಎಂದು ಮೂದಲಿಸಿದರು.

‘ಬಾಹುಬಲಿ ಸಿನಿಮಾದಲ್ಲಿ ರಾಜಮಾತೆ ಅರಮನೆಯಿಂದ ಹೊರಹಾಕಿದ ಬಳಿಕ ಅಮರೇಂದ್ರ ಬಾಹುಬಲಿ ಜನಸಾಮಾನ್ಯರ ಜೊತೆ ಬಂದು ಸೇರಿಕೊಂಡ. ಆದರೆ ಇವರು ಸ್ವ ಇಚ್ಛೆಯಿಂದ ಬರುತ್ತಿದ್ದಾರೆ ಎಂದರೆ ನಾವು ಖುಷಿ ಪಡಬೇಕು’ ಎಂದರು.

‘ಮೈಸೂರು ರಾಜರು ಮೈಸೂರು ಅರಮನೆ, ವಸ್ತುಪ್ರದರ್ಶನ ಪ್ರಾಧಿಕಾರ ಮೈದಾನ, ಇಲ್ಲಿನ ವಿವಿಧ ಬಡಾವಣೆ ಸೇರಿದಂತೆ ಅನೇಕ ಸಾರ್ವಜನಿಕ ಆಸ್ತಿಗಳ ಮೇಲೆ ದಾವೆ ಹೂಡಿ ತಮ್ಮ ಆಸ್ತಿ ಎಂದು ಆದೇಶ ತಂದಿದ್ದಾರೆ. ಈಗ ಪ್ರಜೆಗಳ ಪ್ರತಿನಿಧಿ ಎಂದಾದ ಮೇಲೆ ಜನರ ನೋವಿಗೆ ಸ್ಪಂದಿಸಬೇಕಾಗುತ್ತದೆ. ಯದುವೀರ್ ಅವರು ಈ ಎಲ್ಲ ಆಸ್ತಿಯನ್ನು ಜನರಿಗೆ ಬಿಟ್ಟುಕೊಡುತ್ತಾರೆ. ಇದರಿಂದ ಮೈಸೂರಿಗೆ ಅನುಕೂಲ ಆಗುತ್ತದೆ’ ಎಂದು ವ್ಯಂಗ್ಯವಾಡಿದರು.

ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ. ಯದುವೀರ್ ಅವರಿಗೆ ಸಿಕ್ಕರೆ ನಾನು ಕಾರ್ಯಕರ್ತರ ಜೊತೆಗೂಡಿ ಪಕ್ಷದ ಬ್ಯಾನರ್ ಬಟ್ಟಿಂಗ್‌ ಕಟ್ಟುತ್ತೇನೆ
ಪ್ರತಾಪ ಸಿಂಹ ಬಿಜೆಪಿ ಸಂಸದ
ಟಿಕೆಟ್‌ ಘೋಷಣೆಗೂ ಮುನ್ನವೇ ಸಂಸದ ಪ್ರತಾಪಸಿಂಹ ವಿಚಲಿತರಾಗಿ ಮಾತನಾಡುವುದು ಬೇಡ. ಅವರಿಗೇ ಟಿಕೆಟ್ ಸಿಗಬಹುದು
ಟಿ.ಎಸ್. ಶ್ರೀವತ್ಸ ಕೆ.ಆರ್‌. ಕ್ಷೇತ್ರದ ಶಾಸಕ
ಮಹಾರಾಜರು ಸಂಸ್ಥಾನದ ಅಭಿವೃದ್ಧಿಗೆ ಸರ್ವಸ್ವವನ್ನೂ ಅರ್ಪಿಸಿದ್ದಾರೆ. ಈಗ ಯದುವೀರ ಬಗ್ಗೆ ಹಗುರವಾಗಿ ಮಾತನಾಡಬಾರದು
ಎಲ್‌. ನಾಗೇಂದ್ರ ಬಿಜೆಪಿ ಮೈಸೂರು ನಗರ ಘಟಕ ಅಧ್ಯಕ್ಷ
ನಾಲ್ಕು ಬಾರಿ ಶಾಸಕನಾಗಿದ್ದ ನನಗೇ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಡಲಿಲ್ಲ. ಕಾರ್ಯಕರ್ತರ ಸಭೆಯಲ್ಲಿ ಪ್ರತಾಪಸಿಂಹ ನನಗೆ ಆಡಿದ ಮಾತುಗಳನ್ನು ನೆನಪಿಸಿಕೊಳ್ಳಲಿ
ಎಸ್.ಎ. ರಾಮದಾಸ್ ಬಿಜೆಪಿ ಮುಖಂಡ
ಬಿಜೆಪಿ ನಾಯಕರ ಆಕ್ಷೇಪ 
ಪ್ರತಾಪ ಸಿಂಹ ಹೇಳಿಕೆ ಖಂಡಿಸಿ ಮಧ್ಯಾಹ್ನ ಬಿಜೆಪಿ ಮುಖಂಡರಾದ ಎಸ್‌.ಎ. ರಾಮದಾಸ್‌ ಎಲ್‌. ನಾಗೇಂದ್ರ ಸುದ್ದಿಗೋಷ್ಠಿ ನಡೆಸಿದರು. ‘ಪಕ್ಷ ಸೂಚಿಸಿದ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಅಭ್ಯರ್ಥಿ ಘೋಷಣೆಗೆ ಮುನ್ನವೇ ಹೀಗೆ ಟೀಕಿಸುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿಕ್ರಿಯೆಗೆ ಸಿಗದ ಯದುವೀರ್‌
ರಾಜವಂಶಸ್ಥ ಯದುವೀರ್‌ ಅವರೇ ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ಪಡೆಯಲು ಅವರು ಮಾಧ್ಯಮಗಳಿಗೆ ಲಭ್ಯವಾಗಿಲ್ಲ. ಸ್ಪರ್ಧೆ ಬಗ್ಗೆ ಎಲ್ಲಿಯೂ ಅವರು ಹೇಳಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT