ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಮೈಸೂರು–ಕೊಡಗು: ಏ.26ಕ್ಕೆ ಮತದಾನ

ಸಾರ್ವತ್ರಿಕ ಚುನಾವಣೆಗೆ ಸಕಲ ಸಿದ್ಧತೆ, ಹೊಸ ಡಿಸಿ ಕಚೇರಿಯಲ್ಲಿ ನಾಮಪತ್ರ ಸ್ವೀಕಾರ: ಕೆ.ವಿ.ರಾಜೇಂದ್ರ ಮಾಹಿತಿ
Published 17 ಮಾರ್ಚ್ 2024, 6:38 IST
Last Updated 17 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಏ.26ರಂದು ಮತದಾನ ಹಾಗೂ ಜೂನ್‌ 4ರಂದು ಮತಎಣಿಕೆ ನಡೆಯಲಿದೆ. ಮಾದರಿ ನೀತಿಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ’ ಎಂದು ಜಿಲ್ಲಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

‘ನಾಮಪತ್ರಗಳನ್ನು ಸಿದ್ಧಾರ್ಥ ನಗರದ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದಲ್ಲಿರುವ ಹೊಸ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಲಾಗುವುದು. ಚುನಾವಣಾ ಅಧಿಕಾರಿ ಕಚೇರಿ ಅಲ್ಲಿಯೇ ಕಾರ್ಯನಿರ್ವಹಿಸಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಹೋದ ಚುನಾವಣೆಯಲ್ಲಿ ಶೇ 70.39ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 75ರಷ್ಟನ್ನಾದರೂ ದಾಟಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಮುಕ್ತ, ನ್ಯಾಯಸಮ್ಮತ ಹಾಗೂ ನೈತಿಕ ಚುನಾವಣೆಗಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.

ಈಗಲೇ ಖಾತ್ರಿಪಡಿಸಿಕೊಳ್ಳಿ:

‘ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಹಳೆಯ ಗುರುತಿನ ಚೀಟಿ ಉಳ್ಳವರು ಹೊಸದಾಗಿ ಪಡೆದುಕೊಳ್ಳಲು ಅವಕಾಶವಿದೆ. ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ ಎಂದು ಮತದಾನದ ದಿನದಂದು ಬಂದು ಕೇಳಿದರೆ ಸಹಾಯ ಮಾಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘5879 ಬ್ಯಾಲೆಟ್‌ ಯುನಿಟ್‌, 4,186 ಕಂಟ್ರೋಲ್‌ ಯುನಿಟ್, 4,434 ವಿವಿಪ್ಯಾಟ್‌ಗಳನ್ನು ಪೂರೈಸಲಾಗಿದೆ. ಇವುಗಳನ್ನು ಮೊದಲ ಹಂತದ ಪರಿಶೀಲನೆ ನಡೆಸಲಾಗಿದೆ. ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಅಗತ್ಯ ಮತಗಟ್ಟೆ ಅಧಿಕಾರಿ ಹಾಗೂ ಮೀಸಲು ಸಿಬ್ಬಂದಿ ನೇಮಕ ಮತ್ತು ಕೇಂದ್ರ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ಅಬ್‌ಸರ್ವರ್‌ಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ಹಾಸಿಗೆ ಹಿಡಿದಿರುವ 85 ವರ್ಷ ಮೇಲಿನವರು ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದ ವಿಶೇಷ ವ್ಯಕ್ತಿಗಳಿಗೆ ಆಯೋಗದ ನಿರ್ದೇಶನದಂತೆ ಮನೆಯಲ್ಲೇ ಮತದಾನಕ್ಕೆ ಅವಕಾಶವಿರಲಿದೆ’ ಎಂದರು.

ಪ್ರಮಾಣಪತ್ರ ಕಡ್ಡಾಯ:

‘ಯಾವುದೇ ಚುನಾವಣಾ ಕರಪತ್ರಗಳು, ಪೋಸ್ಟರ್, ಬಿಲ್‍ಗಳಲ್ಲಿ ಪ್ರಕಾಶಕರು ಮತ್ತು ಪ್ರಕಾಶನ ಸಂಸ್ಥೆಯ ಮಾಹಿತಿಯನ್ನು ಕಡ್ಡಾಯವಾಗಿ ಮುದ್ರಿಸಬೇಕು. ಅಭ್ಯರ್ಥಿಯ ಪರವಾಗಿ ಯಾವುದೇ ಜಾಹೀರಾತನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಮುನ್ನ ಆ ಜಾಹೀರಾತು ವಿವರವನ್ನು ಚುನಾವಣಾ ಎಂ.ಸಿ.ಎಂ.ಸಿ. ತಂಡದ ಗಮನಕ್ಕೆ ತಂದು ಪ್ರಮಾಣಪತ್ರ ಪಡೆದುಕೊಳ್ಳುವುದು ಕಡ್ಡಾಯ’ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಎಸ್ಪಿ ಸೀಮಾ ಲಾಟ್ಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜು ಹಾಗೂ ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜ್ ಹಾಜರಿದ್ದರು.

ವೇಳಾಪಟ್ಟಿ

ಮೈಸೂರು–ಕೊಡಗು ಕ್ಷೇತ್ರಕ್ಕೆ ಸೇರುವ ವಿಧಾನಸಭಾ ಕ್ಷೇತ್ರಗಳು

ಮತಗಟ್ಟೆಗಳು

ಮತಗಟ್ಟೆಗಳಲ್ಲಿ ಸೌಕರ್ಯ

‘ಮತಗಟ್ಟೆಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ಅಂಗವಿಕಲ ಮತದಾರರಿಗೆ ಮತಗಟ್ಟೆಗಳಲ್ಲಿ ರ‍್ಯಾಂಪ್‌ ವ್ಹೀಲ್‌ ಚೇರ್ ಬೂತಗನ್ನಡಿಗಳ ವ್ಯವಸ್ಥೆ ಮಾಡಲಾಗುವುದು. ದೃಷ್ಟಿದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಕೂಡಡ ನೀಡಲಾಗುವುದು’ ಎಂದು ರಾಜೇಂದ್ರ ತಿಳಿಸಿದರು. ‘85 ವರ್ಷ ವಯಸ್ಸಿನ ಮೇಲಿನ ಹಿರಿಯ ನಾಗರಿಕರಿಗೆ (ಈ ಹಿಂದಿನ ಚುನಾವಣೆಯಲ್ಲಿ 80 ವರ್ಷ ಮೇಲಿನವರಿಗೆ ನೀಡಲಾಗುತ್ತಿದ್ದ ಅಂಚೆ ಮತಪತ್ರ ಸೇವೆಯನ್ನು 80 ವರ್ಷದಿಂದ 85 ವರ್ಷಕ್ಕೆ ಚುನಾವಣಾ ಆಯೋಗವು ಮಾರ್ಪಡಿಸಿ ಆದೇಶಿಸಿದೆ) ವಿಶೇಷಚೇತನ ಕೋವಿಡ್ ಶಂಕಿತ ಅಥವಾ ದೃಡಪಟ್ಟ ಮತದಾರರಿಗೆ ಅಗತ್ಯ ಸೇವೆಗಳ ಇಲಾಖೆಗಳ ಕಾರ್ಯನಿರತ ಅಧಿಕಾರಿ ಅಥವಾ ಸಿಬ್ಬಂದಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶವಿದೆ. ಅಂಚೆ ಮತಪತ್ರಕ್ಕೆ ನಮೂನೆ ‘12ಡಿ’ಯಲ್ಲಿ ನಾಮಪತ್ರ ಸಲ್ಲಿಸಲು ಪ್ರಾರಂಭವಾದ ದಿನಾಂಕದಿಂದ ಐದು ದಿನಗಳ ಒಳಗೆ  ಚುನಾವಣಾ ಅಧಿಕಾರಿಗೆ ಸಲ್ಲಿಸಬಹುದಾಗಿದೆ’ ಎಂದು ವಿವರಿಸಿದರು.

ಮಹಿಳಾ ಮತದಾರರು ಹೆಚ್ಚು

‘ಜಿಲ್ಲೆಯಲ್ಲಿ 1017120 ಪುರುಷರು 1055035 ಮಹಿಳೆಯರು 182 ಇತರರು ಸೇರಿದಂತೆ ಒಟ್ಟು 2072332 ಮತದಾರರಿದ್ದಾರೆ. ಇದೇ ವರ್ಷದ ಜ.21ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ್ದಾಗ 1009385 ಪುರುಷರು 1044975 ಮಹಿಳೆಯರು 178 ಇತರರು ಸೇರಿದಂತೆ ಒಟ್ಟು 2054538 ಮತದಾರರಿದ್ದರು. ಜ.21ರಿಂದ ಮಾರ್ಚ್‌ 15ರವರೆಗೆ 17799 ಮಂದಿ ಸೇರ್ಪಡೆಯಾಗಿದ್ದಾರೆ. ಅಂತೆಯೇ 37957 ಯುವ ಮತದಾರರಿದ್ದರು. ಮತದಾರರ ಪಟ್ಟಿ ಪರಿಷ್ಕರಣೆಯ ನಂತರ 3188 ಮಂದಿ ಸೇರ್ಪಡೆಯಾಗಿದ್ದು ಈಗ 41145 ಮಂದಿ ಇದ್ದಾರೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ‘ಸಖಿ ಯುವ ಮತದಾರರು ಅಂಗವಿಕಲರು ಥೀಮ್‌ ಆಧಾರಿತ ಮತ್ತು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾನದ ದಿನದಂದು ಮತದಾರರಿಗೆ ಸಹಾಯಕ ಆಗುವಂತೆ ಪ್ರತಿ ಮತಗಟ್ಟೆಯಲ್ಲೂ ಆಯಾ ಮತಗಟ್ಟೆಯ ಬಿಎಲ್‌ಒಗಳು ಹಾಗೂ ಇತರ ಸಿಬ್ಬಂದಿ ‘ಮತದಾರ ಸಹಾಯಕ ಬೂತ್’ ಸ್ಥಾಪನೆಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ವಿವಿಧ ತಂಡಗಳ ರಚನೆ

‘ಮಾದರಿ ನೀತಿಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದೆ. 241 ಸೆಕ್ಟರ್‌ ಅಧಿಕಾರಿಗಳು 50 ಫ್ಲೈಯಿಂಗ್ ಸ್ಕ್ವಾಡ್ 42 ಸ್ಟಾಟಿಕ್ ಸರ್ವೇಲೆನ್ಸ್‌ ತಂಡ 23 ವಿಡಿಯೊ ತಂಡಗಳು 12 ವಿಡಿಯೊ ವೀವಿಂಗ್ ತಂಡ 11 ಲೆಕ್ಕಪತ್ರ ತಂಡ ಹಾಗೂ 15 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್‌ನವರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನದಲ್ಲಿ ಸಂಚರಿಸಿ ಮಾದರಿ ನೀತಿಸಂಹಿತೆ ಜಾರಿಯ ಕಾರ್ಯನಿರ್ವಹಣೆ ಸಿ-ವಿಜಿಲ್ ದೂರುಗಳಿಗೆ ಸಂಬಂಧಿಸಿದ ಕಾರ್ಯನಿಹಿಸುವುದು ಹಾಗೂ ವರದಿ ಸಲ್ಲಿಸ ಕೆಲಸ ಮಾಡಲಿದ್ದಾರೆ. ಎಲ್ಲ ಕಾರ್ಯಕ್ರಮಗಳ ವಿಡಿಯೊ ಮಾಡಲು ತಂಡ ರಚಿಸಲಾಗಿದೆ’ ಎಂದು ರಾಜೇಂದ್ರ ವಿವರಿಸಿದರು.

ಮಾಹಿತಿ ಪಡೆಯಲು ವ್ಯವಸ್ಥೆ

‘ಆಯೋಗದ ಸೂಚನೆಯಂತೆ ಜಿಲ್ಲೆಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮತದಾರ ಸೌಲಭ್ಯ ಕೇಂದ್ರ ಸ್ಥಾಪಿಸಲಾಗಿದೆ. ಸಹಾಯವಾಣಿ 1950ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಈ ಕೇಂದ್ರವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ’ ಎಂದು ರಾಜೇಂದ್ರ ತಿಳಿಸಿದರು. ‘ನೀತಿಸಂಹಿತೆ ಹಾಗೂ ಚುನಾವಣಾ ವೆಚ್ಚದ ಉಲ್ಲಂಘನೆ ಬಗ್ಗೆ ನಾಗರಿಕರು ಮೊಬೈಲ್‌ ಫೋನ್‌ ಆ್ಯಪ್‌ ಸಿ–ವಿಜಿಲ್‌ ಮೂಲಕ ದೂರು ದಾಖಲಿಸಬಹುದಾಗಿದೆ. ಇದನ್ನು ಬಳಸಿಕೊಳ್ಳಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT