ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಗೆ ಮರುಳಾಗದೆ ಯೋಚಿಸಿ ಮತ ನೀಡಿ: ಯತೀಂದ್ರ ಸಿದ್ದರಾಮಯ್ಯ ಮನವಿ

ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ರೋಡ್‌ ಶೋ ನಡೆಸಿ ಯತೀಂದ್ರ ಮತಯಾಚನೆ
Published 8 ಏಪ್ರಿಲ್ 2024, 12:59 IST
Last Updated 8 ಏಪ್ರಿಲ್ 2024, 12:59 IST
ಅಕ್ಷರ ಗಾತ್ರ

ನಂಜನಗೂಡು: ‘ದೇಶದ ಆಡಳಿತ ಚುಕ್ಕಾಣಿ ಯಾರ ಕೈಗೆ ಕೊಡಬೇಕು ಎಂದು ನಿರ್ಧರಿಸುವ ಮಹತ್ವದ ಚುನಾವಣೆಯಲ್ಲಿ ಬಿಜೆಪಿಗೆ ಮರುಳಾಗದೆ, ಸುಳ್ಳುಗಳಿಗೆ ಬಲಿಯಾಗದೆ ಯೋಚಿಸಿ ಮತ ನೀಡಿ’ ಎಂದು ವರುಣ ಆಶ್ರಯ ಸಮಿತಿ ಅಧ್ಯಕ್ಷ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ತಾಲ್ಲೂಕಿನ ವರುಣ ಕ್ಷೇತ್ರದ ತುಂಬುನೆರಳೆ, ಎಸ್.ಹೊಸಕೋಟೆ, ಮೂಡಹಳ್ಳಿ, ಹದಿನಾರು, ಹುಳಿಮಾವು, ತಾಂಡವಪುರ, ಮರಳೂರು, ರಾಂಪುರದಲ್ಲಿ ಸೋಮವಾರ ರೋಡ್‍ ಶೋ ನಡೆಸುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಮತಯಾಚನೆ ಮಾಡಿದರು.

‘ಹತ್ತು ವರ್ಷ ದೇಶದ ಆಳಿತ ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ ₹15 ಲಕ್ಷ ಹಾಕುತ್ತೇನೆ, 2 ಕೋಟಿ ಉದ್ಯೋಗ ನೀಡುತ್ತೇನೆ, ರೈತರ ಆದಾಯ ದ್ವಿಗುಣಗೊಳಿಸುತ್ತೇನೆ ಎಂದು ನೀಡಿದ ಭರವಸೆ ಹುಸಿಯಾಗಿವೆ. ದೇಶದ ಎಚ್.ಎ.ಎಲ್‌, ಬಿ.ಇ.ಎಂ.ಎಲ್‌ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ್ದಾರೆ’ ಎಂದು ದೂರಿದರು.

‘ರೈತ ವಿರೋಧಿ ಕೃಷಿ ನೀತಿಯನ್ನು ರೈತರು 1 ವರ್ಷ ಸತತ ಹೋರಾಟ ನಡೆಸಿದ ಪರಿಣಾಮ ವಾಪಸ್‌ ಪಡೆದರು. ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಏರಿಕೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎರಡು ಬಾರಿಯೂ ಸಹ ಜನರಿಗೆ ನೀಡದ್ದ ಭರವಸೆಗಳನ್ನು ಈಡೇರಿಸಿದೆ. ಈ ಹಿಂದೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಲಾಗಿತ್ತು, ಇದೀಗ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್‌ ನುಡಿದಂತೆ ನಡೆದಿದೆ’ ಎಂದು ನುಡಿದರು.

‘ಕಾಂಗ್ರೆಸ್ ಬಡವರ ಪರ ಕಾಳಜಿ ಹೊಂದಿರುವ ಪಕ್ಷ ಎಂದು ಸಾಬೀತು ಮಾಡಿದೆ. ಬಿಜೆಪಿ ಶ್ರೀಮಂತರ ಪಕ್ಷ. ಶ್ರೀಮಂತ ಉದ್ಯಮಿಗಳ ಮೇಲಿನ ತೆರಿಗೆಯನ್ನು ಶೇ10 ರಷ್ಟು ಕಡಿಮೆ ಮಾಡಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಲು ಮೀನಾ-ಮೇಷ ಎಣಿಸುವ ಬಿಜೆಪಿ ಉದ್ಯಮಿಗಳ ₹125 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಬಡವರ ಪರವಾಗಿ ಯೋಜನೆಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರಿಗೆ ಮತ ನೀಡಿ, ಜಯಶೀಲರನ್ನಾಗಿ ಮಾಡಬೇಕು’ ಎಂದು ಮನವಿ ಮಾಡಿದರು.

ಎಸ್.ಸಿ.ಬಸವರಾಜು, ತಗಡೂರು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹಾಡ್ಯರಂಗಸ್ವಾಮಿ, ಲತಾಸಿದ್ದಶೆಟ್ಟಿ, ಮುಖಂಡರಾದ ಸರ್ವೇಶ್, ದಕ್ಷಿಣಮೂರ್ತಿ, ಇಂಧನ್‌ ಬಾಬು,ಕೆಂಪಣ್ಣ, ಹೊಸಕೋಟೆ ಬಸವರಾಜು, ಗೋಣಹಳ್ಳಿಕುಮಾರ್, ಚಿನ್ನಂಬಳ್ಳಿರಾಜು, ಕೆಂಪಣ್ಣ, ಆರ್.ಮಹದೇವು, ಮುದ್ದುಮಾದೇಗೌಡ, ಗುರುಪಾದಸ್ವಾಮಿ, ಆಲಂಬೂರು ಮೋಹನ್‍ಕುಮಾರ್, ಗಾರ್ಡನ್‍ ಮಹೇಶ್, ಸಿ.ಆರ್.ಮಹದೇವು, ಜಗದೀಶ್, ಚಾಮರಾಜು, ಚೋಳರಾಜು, ಎನ್.ಟಿ.ಗಿರೀಶ್‌, ಪದ್ಮನಾಭ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT