ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಠ್ ಕೊಡುಗೆ ಹೆಚ್ಚು, ಹರೀಶ್‌ ಕಳಪೆ ಸಾಧನೆ!

ಲೋಕಸಭಾ ಚುನಾವಣೆ: ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಪ್ರದರ್ಶನ ಹೇಗಿದೆ?
Published 8 ಜೂನ್ 2024, 6:55 IST
Last Updated 8 ಜೂನ್ 2024, 6:55 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯು ಮೂರು ಲೋಕಸಭಾ ಕ್ಷೇತ್ರಗಳೊಂದಿಗೆ ಬೆಸೆದುಕೊಂಡಿದೆ. ಇಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, ಮೈಸೂರು–ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿವೆ. ಇವುಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಶಾಸಕರು ‘ಲೀಡ್’ ಕೊಡಿಸಿದ್ದಾರೆಯೇ ಇಲ್ಲವೇ ಎಂಬ ಚರ್ಚೆ ನಡೆಯುತ್ತಿದೆ. ತನ್ವೀರ್‌ ಸೇಠ್‌ ಕ್ಷೇತ್ರದಲ್ಲಿ ಗರಿಷ್ಠ ‘ಕೊಡುಗೆ’ ಸಿಕ್ಕಿದ್ದರೆ, ಚಾಮರಾಜದಲ್ಲಿ ಕಳಪೆ ಸಾಧನೆ ಮಾಡಲಾಗಿದೆ.

‘ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲಿ ನಮಗೆ ಲೀಡ್ ದೊರೆಯುವಂತೆ ನೋಡಿಕೊಳ್ಳಬೇಕು. ವ್ಯಾಪಕ ಪ್ರಚಾರ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಟಾರ್ಗೆಟ್ ನೀಡಿದ್ದರು. ಎಲ್ಲಿ, ಏಕೆ ಉತ್ತಮ ಸಾಧನೆ ತೋರಲು ಸಾಧ್ಯವಾಗಿಲ್ಲ ಎಂಬ ಚರ್ಚೆ–ವಿಶ್ಲೇಷಣೆ ಪಕ್ಷದ ಮಟ್ಟದಲ್ಲಿ ನಡೆಯುತ್ತಿದೆ.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚು ಮುನ್ನಡೆಯನ್ನು (76,597 ಮತ) ಕೊಡಿಸುವಲ್ಲಿ ಅಲ್ಲಿನ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ತನ್ವೀರ್‌ ಸೇಠ್‌ ಯಶಸ್ವಿಯಾಗಿದ್ದಾರೆ. ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಇನ್ನೂ ‘ಗಟ್ಟಿಯಾಗಿವೆ’ ಎಂಬುದನ್ನು ಇದು ಸಾಬೀತುಪಡಿಸಿದೆ. ಇಲ್ಲಿ ಪಕ್ಷದಿಂದ 90 ಸಾವಿರಕ್ಕೂ ಹೆಚ್ಚಿನ ಲೀಡ್ ನಿರೀಕ್ಷಿಸಲಾಗಿತ್ತು. ಅದಕ್ಕಿಂತ ಪ್ರಮಾಣ ಕೊಂಚ ಕಡಿಮೆಯಾಗಿದೆ. ‘ಆದರೆ, ಅಲ್ಲಿ ದೊಡ್ಡ ಮಟ್ಟದ ಲೀಡ್ ದೊರೆಯದೇ ಹೋಗಿದ್ದರೆ ಕಾಂಗ್ರೆಸ್‌ ಅಭ್ಯರ್ಥಿ ಎಂ. ಲಕ್ಷ್ಮಣ ಮತ್ತಷ್ಟು ಹೀನಾಯ ಸ್ಥಿತಿ ತಲುಪಬೇಕಾಗುತ್ತಿತ್ತು’ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲಿ ಬಿಜೆಪಿಯಿಂದಲೂ ಹಲವು  ಬಾರಿ ರೋಡ್ ಶೋ ನಡೆಸಿ ಮತ ಯಾಚಿಸಲಾಗಿತ್ತು.

ನಿರೀಕ್ಷೆ ಹುಸಿ: ನಗರ ಪ್ರದೇಶವನ್ನು ಒಳಗೊಂಡಿರುವ ಚಾಮರಾಜ ಕ್ಷೇತ್ರವನ್ನು ಇದೇ ಮೊದಲ ಬಾರಿಗೆ ಪ್ರತಿನಿಧಿಸುತ್ತಿರುವ ಕೆ.ಹರೀಶ್‌ ಗೌಡ ಕಾಂಗ್ರೆಸ್‌ಗೆ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ. ಅಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕಾಂಗ್ರೆಸ್‌ ಅಭ್ಯರ್ಥಿಗಿಂತ ಬರೋಬ್ಬರಿ 56,397 ಮತಗಳನ್ನು ಹೆಚ್ಚಾಗಿ ಗಳಿಸಿದ್ದಾರೆ. ‘ಕೈ ಪಾಳಯ’ದಿಂದ ನಿರೀಕ್ಷಿಸಿದ್ದಕ್ಕಿಂತಲೂ ‘ಗಳಿಕೆಯಲ್ಲಿ ಕುಸಿತ’ ಅಲ್ಲಿ ಕಂಡುಬಂದಿದೆ!

ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್‌ ಪ್ರತಿನಿಧಿಸುವ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಿಕ್ಕಿರುವುದು 11,744 ಮತಗಳ ಮುನ್ನಡೆಯಷ್ಟೆ. ಅಲ್ಲಿ 40ಸಾವಿರ ಲೀಡ್ ಅನ್ನು ಪಕ್ಷದಿಂದ ನಿರೀಕ್ಷಿಸಲಾಗಿತ್ತು.

ಕೆ.ಆರ್.ನಗರದಲ್ಲಿ ಬದಲಾದ ಪರಿಸ್ಥಿತಿ: ಜಿಲ್ಲೆಯ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಆ ಕ್ಷೇತ್ರದಲ್ಲಿ  ಡಿ.ರವಿಶಂಕರ್‌ ಇದೇ ಮೊದಲ ಬಾರಿಗೆ ಗೆದ್ದಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್‌ ಚಂದ್ರು (ವೆಂಕಟರಮಣೇಗೌಡ) ಹಾಗೂ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಅಲ್ಲಿ 6,847 ಮತಗಳ ಮುನ್ನಡೆ ಸಿಕ್ಕಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ತವರು ಜಿಲ್ಲೆ ಹಾಸನಕ್ಕೆ ಹೊಂದಿಕೊಂಡಿರುವ ಕೆ.ಆರ್. ನಗರದಲ್ಲಿ ಜೆಡಿಎಸ್‌ ಪ್ರಾಬಲ್ಯ ವೃದ್ಧಿಯಾಗಿದೆ. ಮಾಜಿ ಸಚಿವರಾದ ಸಾ.ರಾ. ಮಹೇಶ್, ಎಚ್‌.ವಿಶ್ವನಾಥ್ ಯೋಗದಾನ ನೀಡಿದ್ದಾರೆ. ಆದರೆ, ಹಾಲಿ ಶಾಸಕರಿಗೆ ತಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸಲು ಸಾಧ್ಯವಾಗಿಲ್ಲ. ಬಹಳ ವರ್ಷಗಳ ನಂತರ ಅಲ್ಲಿ ಜೆಡಿಎಸ್‌ಗೆ ಲೀಡ್ ಸಿಕ್ಕಿದೆ.

ಕೆ.ಹರೀಶ್‌ ಗೌಡ
ಕೆ.ಹರೀಶ್‌ ಗೌಡ
ಸಿದ್ದರಾಮಯ್ಯ
ಸಿದ್ದರಾಮಯ್ಯ
ದರ್ಶನ್ ಧ್ರುವನಾರಾಯಣ
ದರ್ಶನ್ ಧ್ರುವನಾರಾಯಣ
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ
ಡಿ.ರವಿಶಂಕರ್
ಡಿ.ರವಿಶಂಕರ್
ಅನಿಲ್‌ ಚಿಕ್ಕಮಾದು
ಅನಿಲ್‌ ಚಿಕ್ಕಮಾದು
ಕೆ. ವೆಂಕಟೇಶ್
ಕೆ. ವೆಂಕಟೇಶ್

ಮೂರು ಲೋಕಸಭಾ ಕ್ಷೇತ್ರಗಳಿಗೆ ಹಂಚಿ ಹೋಗಿರುವ ಜಿಲ್ಲೆ ಕೆಲವೆಡೆ ನಿರೀಕ್ಷೆಗೂ ಮೀರಿ ಕಳಪೆ ಸಾಧನೆ ಲಕ್ಷ್ಮಣಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಷ್ಟೆ ಲೀಡ್

ವರುಣದಲ್ಲಿ ಉತ್ತಮ ಲೀಡ್ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ ಎಚ್‌.ಡಿ.ಕೋಟೆ ನಂಜನಗೂಡು ವರುಣ ಹಾಗೂ ತಿ.ನರಸೀಪುರ ಕ್ಷೇತ್ರಗಳು ಬರುತ್ತವೆ. ಅಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್‌ನ ಸುನಿಲ್ ಬೋಸ್ ಗೆದ್ದಿದ್ದಾರೆ. ಬಿಜೆಪಿಯ ಎಸ್. ಬಾಲುರಾಜು ಸೋಲನುಭವಿಸಿದ್ದಾರೆ. ವರುಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಕ್ಷೇತ್ರ. ಅಲ್ಲಿ ಕಾಂಗ್ರೆಸ್‌ಗೆ 33352 ಮತಗಳ ಲೀಡ್ ದೊರೆತಿದೆ. ಅಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸಾಕಷ್ಟು ಪ್ರಚಾರ ಮಾಡಿದ್ದರು.

ತಿ.ನರಸೀಪುರದಲ್ಲಿ ಹೇಳಿಕೊಳ್ಳುವಂತಹ ಕೊಡುಗೆ ಇಲ್ಲ! ತಿ. ನರಸೀಪುರವನ್ನು ಬೋಸ್ ತಂದೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಎಚ್‌.ಸಿ. ಮಹದೇವಪ್ಪ ಪ್ರತಿನಿಧಿಸುತ್ತಾರೆ. ಅಲ್ಲಿ ಲೀಡ್‌ ಸಿಕ್ಕಿರುವುದು 2921 ಮತಗಳಷ್ಟೆ. ಬೋಸ್ ಅಲ್ಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಮಿತಿ ಸದಸ್ಯರಾಗಿ ವ್ಯಾಪಕ ಪ್ರಚಾರ ಮಾಡಿದ್ದರು. ಆದರೆ ಅದರಿಂದ ದೊಡ್ಡ ಪ್ರಮಾಣದ ಮುನ್ನಡೆಯನ್ನೇನೂ ಅವರು ಕಂಡಿಲ್ಲ. ಇದು ತಂದೆ–ಮಗನಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ದರ್ಶನ್‌ ಧ್ರುವನಾರಾಯಣ ತಮ್ಮ ಕ್ಷೇತ್ರ ನಂಜನಗೂಡಿನಲ್ಲಿ ಪಕ್ಷಕ್ಕೆ 20829 ಮತಗಳ ಲೀಡ್ ಸಿಗುವಂತೆ ನೋಡಿಕೊಂಡಿ‌ದ್ದಾರೆ. ಅವರೂ ಬಹಳಷ್ಟು ಪ್ರಚಾರವನ್ನು ಮಾಡಿದ್ದರು. ಅನಿಲ್‌ ಚಿಕ್ಕಮಾದು ಪ್ರತಿನಿಧಿಸುವ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 23738 ಮತಗಳ ಮುನ್ನಡೆ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT