ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪ್ರಚಾರದಲ್ಲಿ ಕಾಣದ ‘ತಾರೆ’ಯರು!

Published 19 ಏಪ್ರಿಲ್ 2024, 4:49 IST
Last Updated 19 ಏಪ್ರಿಲ್ 2024, 4:49 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಕಣದಲ್ಲಿ ಆಯಾ ರಾಜಕೀಯ ಪಕ್ಷಗಳ ನಾಯಕರಷ್ಟೆ ‘ಸ್ಟಾರ್‌ ಪ್ರಚಾರಕ’ರಾಗಿದ್ದಾರೆ. ಚಲನಚಿತ್ರ ನಟ–ನಟಿಯರು ಯಾರ ಪರವಾಗಿಯೂ ಮತ ಯಾಚನೆಗೆ ಇನ್ನೂ ‘ರಂಗಪ್ರವೇಶ’ ಮಾಡಿಲ್ಲ.

ಅವರನ್ನು ಸಂಪರ್ಕಿಸುವ ಅಥವಾ ಆಹ್ವಾನಿಸುವ ಕೆಲಸವನ್ನೂ ಪಕ್ಷದವರು ಮಾಡಿಲ್ಲ. ಆ ಕಾರ್ಯಕ್ರಮಕ್ಕೆ ಆಗುವ ‘ಖರ್ಚು–ವೆಚ್ಚ’ವನ್ನು ಚುನಾವಣಾ ಆಯೋಗದವರು ಆಯಾ ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುತ್ತಾರೆಂಬ ಭಯ ಪಕ್ಷದವರನ್ನು ಕಾಡುತ್ತಿರುವುದು ಇದಕ್ಕೆ ಕಾರಣವಾಗಿದೆ!

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಂ.ಲಕ್ಷ್ಮಣ ಹಾಗೂ ಬಿಜೆಪಿಯಿಂದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೇರಿದಂತೆ 18 ಮಂದಿ ಕಣದಲ್ಲಿದ್ದಾರೆ. ಇವರ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಮಾತ್ರವೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯಕ್ರಮ ನಡೆಯುತ್ತಿರುವುದು ಕಂಡುಬಂದಿದೆ. ಆದರೆ, ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಹಿಂದಿನ ಚುನಾವಣೆಗಳಲ್ಲಿ ಕಂಡು ಬಂದಿದ್ದಂತೆ ಸಿನಿತಾರೆಯರು ಬರುತ್ತಿಲ್ಲ.

ಸಿದ್ದರಾಮಯ್ಯ ಪರವಾಗಿ: ಕ್ಷೇತ್ರಕ್ಕೆ ಏ.26ರಂದು ಮತದಾನ ನಡೆಯಲಿದೆ. ಅಂದರೆ, ಬಹಿರಂಗ ಪ್ರಚಾರಕ್ಕೆ ಕೆಲವೇ ದಿನಗಳಷ್ಟೆ ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲೂ ಚಲನಚಿತ್ರ ನಟ–ನಟಿಯರು ಬರುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ.

2023ರಲ್ಲಿ ನಡೆದಿದ್ದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಿನಿಮಾ ನಟ–ನಟಿಯರು ಪ್ರಚಾರದಲ್ಲಿ ಭಾಗಿಯಾಗಿದ್ದರು. ತಮ್ಮಿಷ್ಟದ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಮತ ಕೇಳಿದ್ದರು.

ಸಿದ್ದರಾಮಯ್ಯ ಅವರ ಪರವಾಗಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಚಲನಚಿತ್ರ ನಟರಾದ ಶಿವರಾಜ್‌ ಕುಮಾರ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ರಮ್ಯಾ, ನಿಶ್ವಿಕಾ ನಾಯ್ಡು, ಸಾಧುಕೋಕಿಲ, ಚಲನಚಿತ್ರ ನಿರ್ಮಾಪಕ ರಾಜೇಂದ್ರ ಸಿಂಗ್‌ ಬಾಬು ಮೊದಲಾದವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ, ಈ ಬಾರಿ ಈವರೆಗೆ ಕಾಂಗ್ರೆಸ್‌ನಲ್ಲಾಗಲಿ, ಬಿಜೆಪಿಯಲ್ಲಾಗಲಿ ಅಂತಹ ಪ್ರಯತ್ನ ನಡೆದಿಲ್ಲ.

ನಾಯಕರಿಂದ ಮತ ಯಾಚನೆ: ಈವರೆಗೆ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಪರವಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಪ್ರಚಾರ ಮಾಡಿದ್ದಾರೆ. ಅವರೊಂದಿಗೆ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ, ಡಿ.ವಿ. ಸದಾನಂದ ಗೌಡ ಮೊದಲಾದ ಪ್ರಮುಖರು ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್‌ ಪರವಾಗಿ ರಾಜ್ಯ ನಾಯಕರಷ್ಟೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್, ಸತೀಶ ಜಾರಕಿಹೊಳಿ ಮೊದಲಾದವರು ಮತ ಯಾಚನೆಯಲ್ಲಿ ತೊಡಗಿದ್ದಾರೆ. 

‘ಸ್ಟಾರ್‌ ಪ್ರಚಾರಕ’ರು ಬಂದರೆ ದೊಡ್ಡ ಮಟ್ಟದಲ್ಲಿ ಸಮಾವೇಶ ಆಯೋಜಿಸಬೇಕಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಬೇಕಾಗುತ್ತದೆ. ಅದಕ್ಕೆ ಸಾಕಷ್ಟು ವೆಚ್ಚವೂ ಆಗುತ್ತದೆ. ಅದನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸಿದರೆ ಕಷ್ಟವಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಕಸರತ್ತು ನಡೆಸುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸುತ್ತಾರೆ ರಾಜಕೀಯ ಪಕ್ಷದ ಮುಖಂಡರು.

‘ಪ್ರಚಾರ ಕಾರ್ಯಕ್ಕೆ ಅಭ್ಯರ್ಥಿಗೆ ₹95 ಲಕ್ಷ ವೆಚ್ಚ ಮಾಡಲು ಅನುಮತಿ ಇದೆ. ಅವರ ಪರವಾಗಿ ಮಾಡುವ ವೆಚ್ಚವನ್ನೂ ಅಭ್ಯರ್ಥಿಯ ವೆಚ್ಚಕ್ಕೇ ಸೇರಿಸಲಾಗುತ್ತದೆ. ಪರವಾಗಿ ಮಾಡಿದ ವೆಚ್ಚಕ್ಕೆ ಅಭ್ಯರ್ಥಿಯ ಅನುಮತಿ ಇರಬೇಕಾಗುತ್ತದೆ. ಇಲ್ಲದಿದ್ದಲ್ಲಿ ಪ್ರಚಾರ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಚುನಾವಣಾ ಆಯೋಗ ಹೇಳಿದೆ.‌

ಈ ಬಾರಿ ಸಿನಿಮಾ ನಟರಾರೂ ಪ್ರಚಾರಕ್ಕೆ ಬರುತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಈಗಾಗಲೇ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದಾರೆ
- ಬಿ.ಜೆ. ವಿಜಯ್‌ಕುಮಾರ್ ಅಧ್ಯಕ್ಷ ಗ್ರಾಮಾಂತರ ಜಿಲ್ಲಾ ಸಮಿತಿ
- ಏ.20ರಂದು ಸಂಸದೆ ಸುಮಲತಾ ಪ್ರಚಾರ ಮಾಡಲಿದ್ದಾರೆ. ಯೋಗಿ ಆದಿತ್ಯನಾಥ್ ಅವರನ್ನು ಕೊಡಗಿಗೆ ಕರೆಸಲು ಪ್ರಯತ್ನಿಸಲಾಗುತ್ತಿದೆ. ಸಿನಿಮಾ ನಟರಿಂದ ಪ್ರಚಾರ ನಿಗದಿಯಾಗಿಲ್ಲ
ಕೆ.ವಸಂತಕುಮಾರ್‌, ವಕ್ತಾರ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕ

‘ಲೆಕ್ಕ’ಕ್ಕೆ ಸೇರಿಸುವುದು ತ‍ಪ್ಪಿಸಲು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜ ಹುಣಸೂರು ಹಾಗೂ ಪಿರಿಯಾಪಟ್ಟಣದಲ್ಲಿ ನಡೆಸಿದ ಪ್ರಚಾರ ಸಭೆಗಳಲ್ಲಿ ಅಭ್ಯರ್ಥಿ ಲಕ್ಷ್ಮಣ ಪಾಲ್ಗೊಂಡಿರಲಿಲ್ಲ. ‘ಪ್ರಜಾಧ್ವನಿ–2’ ಹೆಸರಿನಲ್ಲಿ ನಡೆಸಲಾಯಿತು. ಆ ಸಮಾವೇಶಗಳಿಗೆ ತಗುಲುವ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುವುದನ್ನು ತಪ್ಪಿಸಿಕೊಳ್ಳಲೆಂದು ಈ ತಂತ್ರವನ್ನು ಅನುಸರಿಸಲಾಯಿತು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT