ಮೈಸೂರು: ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಸಿಎಸ್‌ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಹಾಸ್ಪಿಟಲ್ (ಮಿಷನ್ ಆಸ್ಪತ್ರೆ) ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.
ಹಳೆಯ ಹಾಲಿನ ಡೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ‘ಮಿಷನ್ ಆಸ್ಪತ್ರೆಯಲ್ಲಿ 300ಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಇಲ್ಲಿನ ನೌಕರರು 46 ವರ್ಷದಿಂದ ಎಐಟಿಯುಸಿ ನೇತೃತ್ವದಲ್ಲಿ ಸಂಘಟಿತರಾಗಿ ಕಾರ್ಮಿಕರ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಬಂದಿದ್ದೇವೆ. ಆದರೆ, ಕಳೆದ 7 ವರ್ಷಗಳ ಹಿಂದೆ ನೇಮಕವಾಗಿರುವ ಆಡಳಿತಾಧಿಕಾರಿ ವಿನ್ಸಂಟ್ ಪಾಲ್ ಆಸ್ಪತ್ರೆಯನ್ನು ದುಸ್ಥಿತಿಗೆ ತಳ್ಳಿದ್ದಾರೆ. ಅವರ ದುರಾಡಳಿತದಿಂದ ಆಸ್ಪತ್ರೆ ಸೊರಗುತ್ತಾ ಬಂದಿದೆ. ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದಲ್ಲದೆ ವೇತನ ಪರಿಷ್ಕರಣೆ ಮುಂತಾದ ಯಾವುದೇ ಸೌಲಭ್ಯ ನೀಡಿಲ್ಲ’ ಎಂದು ಆರೋಪಿಸಿದರು.
‘ಕಾರ್ಮಿಕರಿಗೆ ಏಪ್ರಿಲ್ ತಿಂಗಳಿಂದ ವೇತನ ನೀಡಿಲ್ಲ. ಸಮಸ್ಯೆ ಪರಿಹಾರಕ್ಕಾಗಿ ಕಾನೂನು ಅನ್ವಯ ಮುಷ್ಕರದ ನೋಟಿಸ್ ನೀಡಿ ಜುಲೈ 15ರಿಂದ ಮುಷ್ಕರ ನಡೆಸಲಾಗುತ್ತಿದೆ. ಆದರೆ, ಆಡಳಿತ ಮಂಡಳಿಯು ಮುಷ್ಕರ ನಿರತ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಬದಲು ಸುಳ್ಳು ಆರೋಪ ಮಾಡಿ ಹೋರಾಟದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸಹಾಯಕ ಕಾರ್ಮಿಕ ಆಯುಕ್ತರು ಕರೆದಿರುವ ಸಭೆಗಳಿಗೆ ಆಡಳಿತ ಮಂಡಳಿಯ ಅಧಿಕಾರಿ ಭಾಗವಹಿಸಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ಆಡಳಿತ ಮಂಡಳಿಯು ಬಾಕಿ ಉಳಿಸಿಕೊಂಡಿರುವ 4 ತಿಂಗಳ ವೇತನ ಕೂಡಲೇ ಪಾವತಿಸಬೇಕು. ವೇತನ ಪರಿಷ್ಕರಣೆಯನ್ನು ನಿರ್ದಿಷ್ಟ ಅವಧಿಯೊಳಗೆ ಬಗೆಹರಿಸಬೇಕು. ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು. 2017ರಿಂದ ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆ ಅನ್ವಯ ನಿವೃತ್ತಿ ವಯಸ್ಸು 61ಕ್ಕೆ ಏರಿಕೆ ಮಾಡಿ ಹೊರಡಿಸಿರುವ ಆದೇಶ ಜಾರಿ ಮಾಡಬೇಕು. ಈಗಾಗಲೇ ನಿವೃತ್ತರಾದ ಕಾರ್ಮಿಕರಿಗೆ ಗ್ರಾಚ್ಯುಟಿ ಪಾವತಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ದಯಾಪ್ರಕಾಶ್, ಶಂಕರ್ ಸಿ, ವಿಲ್ಸನ್ ಪ್ರಭಾಕರ್, ಪಾಲ್ ಡೇವಿಡ್, ಆರ್.ಸಿದ್ದರಾಜು, ಜೋಸೆಫ್ ಮಾನ್ಯುವಲ್ ಆರ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.