ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಜೆಐ ಮನೆಯಲ್ಲಿ ಪ್ರಧಾನಿ ಮೋದಿ ಪೂಜೆ; ತಪ್ಪೇನಿದೆ?: ಸಚಿವ ವಿ.ಸೋಮಣ್ಣ

Published : 13 ಸೆಪ್ಟೆಂಬರ್ 2024, 7:06 IST
Last Updated : 13 ಸೆಪ್ಟೆಂಬರ್ 2024, 7:06 IST
ಫಾಲೋ ಮಾಡಿ
Comments

ಮೈಸೂರು: ‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣಪತಿ ಚತುರ್ಥಿ ಹಬ್ಬದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರಲ್ಲಿ ತಪ್ಪೇನಿದೆ?’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಅವರಿಬ್ಬರೂ ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು. ಇಬ್ಬರೂ ಸೇರಿ ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕುತ್ತೀರಾ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ’ ಎಂದರು.

‘ಅವರಿಬ್ಬರೂ ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ. ಅದನ್ನೇ ದೊಡ್ಡ ವಿಚಾರ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಸಿಜೆಐ ದೇಶದ ಸಂಪತ್ತು. ನರೇಂದ್ರ ಮೋದಿ ಅವರನ್ನು ಇಡೀ ಜಗತ್ತೇ ಇಷ್ಟಪಡುತ್ತಿದೆ. ಅವರಿಬ್ಬರೂ ಒಂದೆಡೆ ಸೇರುವುದೇ ಬೇಡ ಎನ್ನುವುದಾದರೆ ಹೇಗೆ?’ ಎಂದು ಕೇಳಿದರು.

‘ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದಾಗ ಏನು ನಡೆದಿತ್ತು ಎಂಬುದನ್ನು ವಿರೋಧ ಪಕ್ಷದವರು ನೋಡಲಿ. ಸಣ್ಣ–ಪುಟ್ಟದ್ದನ್ನು ದೊಡ್ಡದು ಮಾಡುವುದು ಬೇಡ. ಗಣೇಶನ ಪೂಜೆಗೆ ಪ್ರಧಾನಿ ಹೋಗಿದ್ದನ್ನು ಅಭಿನಂದಿಸಬೇಕು. ಇದನ್ನು ಬಿಟ್ಟು ಅದನ್ನು ಹಾದಿ ಬೀದಿಯಲ್ಲಿ‌ ಮಾತನಾಡುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

ನಾಗಮಂಗಲ ಗಲಭೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರೇ ತಪ್ಪು ಮಾಡಿದ್ದರೂ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಗೃಹ ಸಚಿವ ಜಿ. ಪರಮೇಶ್ವರ್‌ ಹಿರಿಯರಿದ್ದಾರೆ; ಅನುಭವಿಯೂ ಹೌದು. ಅದು ಸಣ್ಣ ಘಟನೆ ಎಂದು ಯಾವ ಕಾರಣಕ್ಕಾಗಿ ಹೇಳಿದ್ದಾರೆಯೋ ನನಗೆ ಗೊತ್ತಾಗುತ್ತಿಲ್ಲ. ಮತಗಳ ಓಲೈಕೆ ರಾಜಕಾರಣವನ್ನು ಬಿಡಬೇಕು’ ಎಂದರು.

‘ಎಲ್ಲದಕ್ಕಿಂತ ದೇಶ ಮುಖ್ಯ. ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರ ವಹಿಸಬೇಕು. ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ. ಆ ಮೂರ್ತಿಗಳ ವಿಸರ್ಜನೆ ಮೆರವಣಿಗೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಗಲಭೆಗೆ ಕಾರಣರಾದವರ ಮೇಲೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‘ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ನನಗೆ ದೊಡ್ಡ ಸ್ಥಾನ ಸಿಕ್ಕಿದೆ. ಜನರ ಜೊತೆ ಸದಾ ಇರುವವರಿಗೆ ಒಂದಲ್ಲಾ ಒಂದು ದಿನ ಒಳ್ಳೆಯದೇ ಆಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ಇಲ್ಲಿಗೆ ಬಂದಾಗ ಜನರಿಂದ ದೊರೆತ ಸ್ವಾಗತ ನೋಡಿ ಮನಸ್ಸು ತುಂಬಿ ಬಂದಿದೆ’ ಎಂದು ಹೇಳಿದರು.

ಮಾಜಿ ಸಂಸದ ಪ್ರತಾಪ ಸಿಂಹ, ವಿಧಾನಪರಿಷತ್ ಸದಸ್ಯ ಕೆ.ಆರ್. ಮಲ್ಲಿಕಾರ್ಜುನಪ್ಪ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜ್‌, ಮಾಜಿ ಮೇಯರ್‌ ಸಂದೇಶ್ ಸ್ವಾಮಿ, ಮುಖಂಡ ಪ್ರತಾಪ ದೇವನೂರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT