ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷ್ಣರಾಜ ಕ್ಷೇತ್ರವನ್ನು ಮಧುಮೇಹ ಮುಕ್ತವಾಗಿಸಲು ನೆರವು ನೀಡಲು ಕೇಂದ್ರಕ್ಕೆ ಮನವಿ

ಕೇಂದ್ರ ಆರೋಗ್ಯ ಸಚಿವರೊಂದಿಗೆ ಶಾಸಕ ರಾಮದಾಸ್ ಚರ್ಚೆ
Published : 12 ಫೆಬ್ರುವರಿ 2023, 9:13 IST
ಫಾಲೋ ಮಾಡಿ
Comments

ಮೈಸೂರು: ಕೃಷ್ಣರಾಜ ಕ್ಷೇತ್ರವನ್ನು ಐದು ವರ್ಷಗಳಲ್ಲಿ ಮಧುಮೇಹ ಸಮಸ್ಯೆ ಮುಕ್ತಗೊಳಿಸಲು ಅಗತ್ಯ ನೆರವು ನೀಡುವಂತೆ ಶಾಸಕ ಎಸ್.ಎ.ರಾಮದಾಸ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಜಿ.ಮನ್ಸುಖ್ ಮಾಂಡವಿಯಾ ಅವರಿಗೆ ದೆಹಲಿಯಲ್ಲಿ ಈಚೆಗೆ ಮನವಿ ಸಲ್ಲಿಸಿದ್ದಾರೆ.

ಕ್ಷೇತ್ರದಲ್ಲಿ ಜನರನ್ನು ಮಧುಮೇಹದಿಂದ ದೂರವಿಡಲು ಬೇಕಾದ ಕಾರ್ಯಕ್ರಮಗಳ ಅನುಷ್ಠಾನದ ಸಂಕಲ್ಪ ಮಾಡಿರುವ ಹಾಗೂ ರೂಪಿಸಿರುವ ಯೋಜನೆಗಳ ಬಗ್ಗೆ ಸಚಿವರಿಗೆ ವಿವರಿಸಿದ್ದಾರೆ. ಕ್ಷೇತ್ರದಲ್ಲಿ ಪ್ರತ್ಯೇಕ ಮಧುಮೇಹ ಕೇಂದ್ರ ಪ್ರಾರಂಭಿಸಲು ಕೋರಿದ್ದಾರೆ.

‘ವಯಸ್ಕರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ವಿಶೇಷವಾಗಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಂಡಗಳ ಮೂಲಕ 30 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದೇವೆ’ ಎಂದು ದಾಖಲೆಗಳ ಸಮೇತ ಮನವರಿಕೆ ಮಾಡಿದ್ದಾರೆ.

‘ಆರೋಗ್ಯ, ಆಯುಷ್ ಇಲಾಖೆ ಹಾಗೂ ನ್ಯಾಚುರೋಪತಿ ಇಲಾಖೆಗಳ ಸಹಯೋಗದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಿ ಥೀಮ್ ಆಧಾರಿತ ಉದ್ಯಾನ ಅಭಿವೃದ್ಧಿಪಡಿಸುವ ಮೂಲಕ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು, ಓಪನ್ ಜಿಮ್‌, ವಾಕಿಂಗ್ ಪಾತ್‌ಗಳನ್ನು ಮಾಡುವುದು, ಮಧುಮೇಹಕ್ಕೆ ಸಂಬಂಧಿಸಿದ ಹೋರ್ಡಿಂಗ್‌ಗಳನ್ನು ಹಾಕುವುದಕ್ಕೆ ಆದ್ಯತೆ ಕೊಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಮಧುಮೇಹ ಕುರಿತು ಇತ್ತೀಚೆಗೆ ಮನೆ ಮನೆ ಸಮೀಕ್ಷೆ ನಡೆಸಲಾಗಿದ್ದು, ಈವರೆಗೆ 24,313 ಮಂದಿಗೆ ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ. ಪತ್ತೆಯಾದವರಿಗೆ ಔಷಧಿಗಳ ನಿಯಮಿತ ಪೂರೈಕೆ ಒಂದೆಡೆಯಾದರೆ, ನಿಯಂತ್ರಣಕ್ಕಾಗಿ ಕುಟುಂಬದ ಸದಸ್ಯರಿಗೂ ಸಲಹೆ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.

‘19 ವಾರ್ಡ್‌ಗಳಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ 400 ಮಂದಿಗೆ ಕಣ್ಣಿನ ಪೊರೆ ಸಮಸ್ಯೆ ಕಂಡುಬಂದಿದ್ದು, ದಿನಕ್ಕೆ 30 ಜನರಿಗೆ ಎಸ್.ಎಂ.ಟಿ. ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಸರ್ಕಾರದ ಯೋಜನೆಗಳ ಸದ್ಬಳಕೆಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ವಹಿಸಲಾಗಿದೆ. ಕೊಳವೆಬಾವಿ ನೀರನ್ನು ಉದ್ಯಾನಗಳಿಗೆ ಉಪಯೋಗಿಸಿ, ನದಿ ನೀರನ್ನು ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT