ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ: ಮತದಾರರ ಮನ ಗೆಲ್ಲಲು ಕಸರತ್ತು

Published 20 ಮೇ 2024, 8:56 IST
Last Updated 20 ಮೇ 2024, 8:56 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಮರಿತಿಬ್ಬೇಗೌಡ 5ನೇ ಬಾರಿಗೆ ಕಣದಲ್ಲಿದ್ದಾರೆ. ಈ ಬಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಕೆ.ವಿವೇಕಾನಂದ ಸ್ಪರ್ಧಿಸಿದ್ದಾರೆ. ಇವರಿಬ್ಬರೂ ಮಂಡ್ಯ ಜಿಲ್ಲೆಯವರೆ. ಅವರೊಂದಿಗೆ ಪಕ್ಷೇತರರಾದ ವಾಟಾಳ್ ನಾಗರಾಜ್‌, ಕೆ.ಸಿ. ಪುಟ್ಟಸಿದ್ದಶೆಟ್ಟಿ ಸೇರಿ ಒಟ್ಟು 13 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್‌ ಪಡೆಯಲು ಮೇ 20 (ಸೋಮವಾರ) ಕೊನೆಯ ದಿನವಾಗಿದೆ.

ಜೆಡಿಎಸ್‌ ಅಭ್ಯರ್ಥಿ ಘೋಷಣೆಗೂ ಮುನ್ನವೇ ಬಿಜೆಪಿ ತನ್ನ ಅಭ್ಯರ್ಥಿ ಹೆಸರನ್ನು ಪ್ರಕಟಿಸಿತ್ತು. ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜ್‌ ಗೌಡ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ‘ಬಿ ಫಾರಂ’ ಸಲ್ಲಿಸದೇ ಇರುವುದರಿಂದ ಅವರನ್ನು ಚುನಾವಣಾಧಿಕಾರಿಯು ‘ಸ್ವತಂತ್ರ ಅಭ್ಯರ್ಥಿ’ ಎಂದು ಪರಿಗಣಿಸಿದ್ದಾರೆ. ‘ನಾಮಪತ್ರ ವಾಪಸ್ ಪಡೆದು, ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ’ ಎಂದು ನಿಂಗರಾಜ್‌ ತಿಳಿಸಿದ್ದಾರೆ. ಅವರು ಸೋಮವಾರ ನಾಮಪತ್ರ ವಾಪಸ್ ಪಡೆಯುವ ನಿರೀಕ್ಷೆ ಇದೆ. ಇದರೊಂದಿಗೆ, ಕಾಂಗ್ರೆಸ್‌–ಎನ್‌ಡಿಎ ಅಭ್ಯರ್ಥಿ ನಡುವೆ ನೇರ ಹಣಾಹಣಿ ಕಂಡುಬಂದಿದೆ.

ಗೊಂದಲದಿಂದ ಯಾರಿಗೆ ಅನುಕೂಲ: ಮತ್ತೊಮ್ಮ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಮನವೊಲಿಸುವಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಆ ಪಕ್ಷದ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ, ಜಿ.ಟಿ. ದೇವೇಗೌಡ ಮೊದಲಾದವರು ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅವರ ಬೆಂಬಲಿಗರ ಅಸಮಾಧಾನ ನಿವಾರಣೆಯಾಗಿಲ್ಲ! ‘ಎನ್‌ಡಿಎ ಅಭ್ಯರ್ಥಿ ಘೋಷಣೆ’ ವಿಷಯದಲ್ಲಾದ ಗೊಂದಲ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಚರ್ಚೆ ನಡೆಯುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಮೈಸೂರು ಜಿಲ್ಲೆಯನ್ನು ಒಳಗೊಂಡಿರುವ ಈ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಗಂಭೀರ ಪ್ರಯತ್ನ ನಡೆಸಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಮರಿತಿಬ್ಬೇಗೌಡರನ್ನು ಪಕ್ಷಕ್ಕೆ ಕರೆ ತಂದು ಕಣಕ್ಕಿಳಿಸಿದೆ. ಇನ್ನೊಂದೆಡೆ, ಬಿಜೆಪಿ– ಜೆಡಿಎಸ್‌ ಲೋಕಸಭೆ ಚುನಾವಣೆಯಲ್ಲಿ ಮಾಡಿಕೊಂಡಂತೆ ಈಗಲೂ ಮೈತ್ರಿ ಮಾಡಿಕೊಂಡು ಮುಂದುವರಿದಿದೆ.

ಈ ಕ್ಷೇತ್ರದಲ್ಲಿ ಸತತ ಎರಡು ಬಾರಿ ಜೆಡಿಎಸ್ ಗೆದ್ದಿತ್ತು. ಆಗ ಜೆಡಿಎಸ್‌ನಲ್ಲಿದ್ದ ಮರಿತಿಬ್ಬೇಗೌಡ ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ವರ್ಷದಿಂದಲೂ ಅವರು ಪ್ರಚಾರ ನಡೆಸಿದ್ದರು. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಕ್ಷೇತ್ರಕ್ಕೆ ಹೊಸ ಮುಖ. ಅವರೂ ತಮ್ಮದೇ ಆದ ‘ಜಾಲ’ದ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ.

ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ 10,355 ಪುರುಷರು, 8,022 ಮಹಿಳೆಯರು ಹಾಗೂ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 18,379 ಮಂದಿ ಮತದಾರರಿದ್ದಾರೆ. ಜೂನ್‌ 3ರಂದು ಮತದಾನ ನಡೆಯಲಿದ್ದು, ಜೂನ್‌ 6ರಂದು ಮತ ಎಣಿಕೆ ಪ್ರಕ್ರಿಯೆ ನಿಗದಿಯಾಗಿದೆ. ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ; ಪ್ರಾಶಸ್ತ್ಯ ಮತದಾನ ನಡೆಯಲಿದೆ. ಮತಗಟ್ಟೆ ಹಾಗೂ ಅವುಗಳ ವ್ಯಾಪ್ತಿಯ ಪ್ರದೇಶಗಳ ಮಾಹಿತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.

ಕೆ.ವಿವೇಕಾನಂದ
ಕೆ.ವಿವೇಕಾನಂದ
ಕಾಂಗ್ರೆಸ್‌ ಪಕ್ಷಕ್ಕೆ ಪ್ರತಿಷ್ಠೆ ಬಿಜೆಪಿ–ಜೆಡಿಎಸ್‌ ಮೈತ್ರಿ ಮುಂದುವರಿಕೆ ನಾಮಪತ್ರ ವಾಪಸ್‌ಗೆ ಕಡೆಯ ದಿನ ಇಂದು
ತಲುಪಲು ಪ್ರಯತ್ನ
ಪ್ರೌಢಶಾಲೆಗಳ ಶಿಕ್ಷಕರು ಪಿಯು ಕಾಲೇಜು ಉಪನ್ಯಾಸಕರು ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಬೋಧಕರು ನೋಂದಾಯಿಸಿದ ಅತಿಥಿ ಉ‍ಪನ್ಯಾಸಕರು ಕ್ಷೇತ್ರದ ಮತದಾರರಾಗಿದ್ದಾರೆ. ಅವರನ್ನು ಮನವೊಲಿಸಿಕೊಳ್ಳಲು ಶಿಕ್ಷಕರು ಉಪನ್ಯಾಸಕರು ಬೋಧಕರ ವಿವಿಧ ಸಂಘಗಳ ಪದಾಧಿಕಾರಿಗಳ ಮೂಲಕ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಮೊಬೈಲ್ ಫೋನ್‌ಗೆ ಕರೆ ಮಾಡುವುದು ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಮನವಿ ಸಣ್ಣ ಸಣ್ಣ ಸಭೆಗಳು ಮೊದಲಾದವುಗಳ ಮೂಲಕ ಅವರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಪಕ್ಷಗಳಿಂದ ಅಲ್ಲಲ್ಲಿ ಜಾತಿವಾರು ಸಭೆಗಳು ಕೂಡ ನಡೆಯುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣವನ್ನೂ ಬಳಸಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಡೆದ ಸಭೆ ಬಿಟ್ಟರೆ ದೊಡ್ಡ ದೊಡ್ಡ ಪ್ರಚಾರ ಕಾರ್ಯಕ್ರಮಗಳು ಇಲ್ಲಿ ಇನ್ನೂ ಆರಂಭಗೊಂಡಿಲ್ಲ.
ರಜೆ ಇರುವುದರಿಂದ...
ಆಯಾ ಪಕ್ಷದ ಕಾರ್ಯಕರ್ತರು ಅಥವಾ ಬೆಂಬಲಿಗರ ಮೂಲಕವೂ ಫೋನ್‌ ಕರೆ ಮಾಡಿಸಿ ಮತ ಕೇಳುವುದು ನಡೆಯುತ್ತಿದೆ. ಮತದಾರರ ವಿಳಾಸಕ್ಕೆ ಪತ್ರಗಳು ಬರುತ್ತಿವೆ. ಪ್ರಮುಖ ಅಭ್ಯರ್ಥಿಗಳು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ಪಿಯು ಪ್ರೌಢಶಾಲೆಗಳ ಬಳಿಗೆ ಭೇಟಿ ನಿಡುವುದು ನಡೆಯುತ್ತಿದೆ. ಸದ್ಯ ಪ್ರೌಢಶಾಲೆಗಳಿಗೆ ಬೇಸಿಗೆ ರಜೆ ಇರುವುದರಿಂದ ಸಾಮೂಹಿಕವಾಗಿ ಮತ ಯಾಚಿಸುವುದಕ್ಕೆ ಅಡ್ಡಿಯಾಗಿದೆ. ಮೇ 29ರಿಂದ ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿದ್ದು ಪ್ರಚಾರ ಕಣ ರಂಗೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT