ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯ ಜೀವನದ ಬಗ್ಗೆ ಪುಸ್ತಕ: ಶ್ರೀನಿವಾಸ ಪ್ರಸಾದ್

Published 26 ಜನವರಿ 2024, 14:10 IST
Last Updated 26 ಜನವರಿ 2024, 14:10 IST
ಅಕ್ಷರ ಗಾತ್ರ

ಮೈಸೂರು: ‘ನನ್ನ ರಾಜಕೀಯ ಜೀವನದ ಬಗ್ಗೆ ಪುಸ್ತಕ ಬರೆದಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನನ್ನದು ಹೋರಾಟದ ರಾಜಕಾರಣ. ಈ ಕ್ಷೇತ್ರಕ್ಕೆ ಬಂದು ಇದೇ ಮಾರ್ಚ್‌ 17ಕ್ಕೆ 50 ವರ್ಷವಾಗುತ್ತದೆ. ಈ ಪಯಣವನ್ನು ಕೃತಿಯಲ್ಲಿ ದಾಖಲಿಸಿದ್ದೇನೆ’ ಎಂದು ಹೇಳಿದರು.

‘ಅಭಿನಂದನಾ ಗ್ರಂಥವೂ ಬಿಡುಗಡೆ ಆಗಲಿದೆ. ಚುನಾವಣೆ ರಾಜಕೀಯದ ನೆನಪುಗಳನ್ನು ಬರೆದಿದ್ದೇನೆ. ಅನೇಕರ ಲೇಖನಗಳೂ ಇವೆ. ಪಾರ್ಲಿಮೆಂಟ್‌ನಲ್ಲಿ ನಾನು ಮಾತನಾಡಿರುವ ವಿಚಾರಗಳನ್ನೂ ದಾಖಲಿಸಲಾಗಿದೆ’ ಎಂದರು.

‘ರಾಜಕಾರಣವೆಂದರೆ ಸುಮ್ಮನೆ ಅಲ್ಲ. ನನಗೂ ಸಾಕಾಗಿದೆ. ವಿಶ್ರಾಂತಿ ಅಗತ್ಯವಿದೆ. ಕೇಂದ್ರ ಮತ್ತು ರಾಜ್ಯದ ಸಚಿವನಾಗಿ ಕೆಲಸ ಮಾಡಿದ್ದೇನೆ. ಎಲ್ಲ ಪಕ್ಷಗಳಿಗೂ ದುಡಿದಿದ್ದೇನೆ. ಚಾಮರಾಜನಗರ ಜಿಲ್ಲೆಗೂ– ನನಗೂ ಅವಿನಾಭಾವ ಸಂಬಂಧವಿದೆ. ಜನರು ಬೆಂಬಲಿಸಿದ್ದಾರೆ. ನಾನು ಯಾರನ್ನು ಬೆಂಬಲಿಸಿದೆನೋ ಅವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಧ್ರುವನಾರಾಯಣ ಅವರನ್ನು ಅಭ್ಯರ್ಥಿ ಮಾಡಿ ಗೆಲ್ಲಿಸಿದ್ದೆ’ ಎಂದು ತಿಳಿಸಿದರು.

‘ಸಂಸದರಿಗೆ ಪ್ರತಿ ವರ್ಷ ₹ 5ಕೋಟಿ ಅನುದಾನ ನೀಡಲಾಗುತ್ತದೆ. ಕೋವಿಡ್ ಕಾರಣದಿಂದ ಎರಡು ವರ್ಷ ಅನುದಾನ ಬರಲಿಲ್ಲ. ನನ್ನ ಅವಧಿಯಲ್ಲಿ ₹ 17.50 ಕೋಟಿ ಬಿಡುಗಡೆಯಾಗಿದೆ. ಅದನ್ನು 137 ಕಾಮಗಾರಿಗಳಿಗೆ ನೀಡಿದ್ದೇನೆ, ಪ್ರಗತಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಪರಿಶೀಲನೆ ನಡೆಸಿದ್ದೇನೆ’ ಎಂದರು.

‘ಜಗದೀಶ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ್ದು ಅವರ ವೈಯಕ್ತಿಕ ನಿರ್ಧಾರ. ಇದು ಪಕ್ಷಾಂತರ ಅಲ್ಲ. ಮಾಜಿ ಮುಖ್ಯಮಂತ್ರಿಯಾದ ಅವರು ಎಲ್ಲವನ್ನೂ ಯೋಚಿಸಬೇಕಿತ್ತು. ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಟಿಕೆಟ್ ಕೊಡಲಿಲ್ಲ ಎಂಬ ಕಾರಣದಿಂದ ಕಾಂಗ್ರೆಸ್ ಸೇರಿದ್ದರು. ಆ ಪಕ್ಷದವರು ಸ್ವಾಗತಿಸಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದರು. ಸೋತರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಯಾರೂ ತೊಂದರೆ ಕೊಡಲಿಲ್ಲ, ರಾಷ್ಟ್ರ ನಿಷ್ಠೆಯಿಂದ ಮರಳಿದೆ ಎಂದು ಅವರೇ ಹೇಳಿದ್ದಾರೆ. ನಾನೇನೂ ಹೇಳಲಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT