ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ, ರಾಗಿ ಖರೀದಿ: ಡಿ.15ರಿಂದ ನೋಂದಣಿ

ಬೆಂಬಲ ಬೆಲೆ ಯೋಜನೆಯಡಿ ಕ್ರಮ: ಜಿಲ್ಲಾಧಿಕಾರಿ
Last Updated 8 ಡಿಸೆಂಬರ್ 2022, 14:25 IST
ಅಕ್ಷರ ಗಾತ್ರ

ಮೈಸೂರು: ‘ಕೇಂದ್ರ ಸರ್ಕಾರದಿಂದ 2022-23ನೇ ಸಾಲಿಗೆ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಖರೀದಿಸಲಾಗುತ್ತಿದ್ದು, ಡಿ.15ರಿಂದ ನೋಂದಣಿ ಆರಂಭವಾಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಇಲ್ಲಿ ಗುರುವಾರ ನಡೆದ 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಕಾರ್ಯಪಡೆಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಗೆ ಭತ್ತ ಮತ್ತು ರಾಗಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಏಜೆನ್ಸಿಯನ್ನಾಗಿ ಸರ್ಕಾರ ನೇಮಿಸಿದೆ. ಖರೀದಿ ಪ್ರಕ್ರಿಯೆಯು ಆ ಮಂಡಳಿ ಮೂಲಕ ನಡೆಯುತ್ತದೆ. ಜ.1ರಿಂದ ಮಾರ್ಚ್ 31ರವರೆಗೆ ಭತ್ತ ಖರೀದಿ ಪ್ರಕ್ರಿಯೆ ನಡೆಯಲಿದೆ. ಪ್ರತಿ ಎಕರೆಗೆ 25 ಕ್ವಿಂ.ನಂತೆ ಒಬ್ಬ ಬೆಳೆಗಾರರಿಂದ ಗರಿಷ್ಠ 40 ಕ್ವಿಂ.ಭತ್ತ ಹಾಗೂ ರಾಗಿಯನ್ನು ಕನಿಷ್ಠ 10 ಕ್ವಿಂ.ನಿಂದ 20 ಕ್ವಿಂ. ಖರೀದಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಖರೀದಿ?:

‘ಸಾಮಾನ್ಯ ಭತ್ತ ಪ್ರತಿ ಕ್ವಿಂ.ಗೆ ₹ 2,040 ಹಾಗೂ ರಾಗಿ ಪ್ರತಿ ಕ್ವಿಂ.ಗೆ ₹ 3,578 ನಿಗದಿಪಡಿಸಲಾಗಿದೆ.
ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ ಆಗುವಂತೆ 14 ಕಡೆಗಳಲ್ಲಿ ಕೇಂದ್ರ ತೆರೆಯಲಾಗುತ್ತಿದೆ. ನಗರದಲ್ಲಿ ಎಪಿಎಂಸಿ ಆವರಣ (ಬಂಡಿಪಾಳ್ಯ), ನಂಜನಗೂಡಿನ ಎಪಿಎಂಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ತಿ.ನರಸೀಪುರದ ಎಪಿಎಂಸಿ ಆವರಣ, ಬನ್ನೂರು ಎಪಿಎಂಸಿ ಆವರಣ, ಹುಣಸೂರು, ರತ್ನಪುರಿ ಎಂಪಿಎಂಸಿ ಆವರಣ, ಕೆ.ಆರ್. ನಗರದ ಚುಂಚನಕಟ್ಟೆ ಪ್ರವಾಸಿ ಮಂದಿರ (ಶ್ರೀರಾಮ ದೇವಸ್ಥಾನದ ಹತ್ತಿರ), ಸಾಲಿಗ್ರಾಮ, ಎಚ್.ಡಿ.ಕೋಟೆ ಎಪಿಎಂಸಿ, ಸರಗೂರು ಮತ್ತು ಪಿರಿಯಾಪಟ್ಟಣ, ಬೆಟ್ಟದಪುರ ಎಪಿಎಂಸಿ ಆವರಣದಲ್ಲಿ ಖರೀದಿ ಮಾಡಲಾಗುವುದು’ ಎಂದು ಹೇಳಿದರು.

‘ಬೇಡಿಕೆ ಇದ್ದಲ್ಲಿ ಅಗ್ಯತ್ಯಕ್ಕೆ ತಕ್ಕಂತೆ ಹೆಚ್ಚಿನ ಕೇಂದ್ರ ತೆರೆಯಬೇಬೇಕು. ಖರೀದಿ ಕೇಂದ್ರಗಳಲ್ಲಿ ಗುಣಮಟ್ಟವನ್ನು ಪರೀಕ್ಷಿಸಲು ಗ್ರೇಡರ್‌ಗಳನ್ನು ನಿಯೋಜಿಸಬೇಕು. ಭತ್ತವನ್ನು ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಲು ಅಗತ್ಯವಿರುವ ದಾಸ್ತಾನು ಕೇಂದ್ರಗಳನ್ನು ಗುರುತಿಸಬೇಕು’ ಎಂದು ಸೂಚಿಸಿದರು.

‘ಭತ್ತವನ್ನು ಮಾರಲು ರೈತರು ‘ಪ್ರೂಟ್ಸ್’ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಈಗ ನೋಂದಣಿ ಮಾಡಿಕೊಳ್ಳಲೂ ಅವಕಾಶವಿದೆ. ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ನೋಂದಣಿ ಕೇಂದ್ರದಲ್ಲಿ ರೈತರು ‘ಪ್ರೂಟ್‘ ಐಡಿ, ಆಧಾರ್ ಸಂಖ್ಯೆಗೆ ಜೋಡಣೆಯಾದ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕು’ ಎಂದರು.

‘ಭತ್ತದ ಖರೀದಿ ನೋಂದಣಿ ಕುರಿತು ಗ್ರಾಮೀಣ ಭಾಗದಲ್ಲಿ ರೈತರು, ಮುಖಂಡರು ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಹೆಚ್ಚಿನ ಮಾಹಿತಿ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್, ರಾಜ್ಯ ಕೃಷಿ ಮಾರಾಟ ಮಂಡಳಿಯ ಪ್ರಧಾನ ವ್ಯವಸ್ಥಾಪಕಿ ಪುಷ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT