ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ನೇಹಮಯಿ ಕೃಷ್ಣ; ‘ನ್ಯಾಯಕ್ಕಾಗಿ ಹೋರಾಟ’

Published : 1 ಅಕ್ಟೋಬರ್ 2024, 23:20 IST
Last Updated : 1 ಅಕ್ಟೋಬರ್ 2024, 23:20 IST
ಫಾಲೋ ಮಾಡಿ
Comments

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗುವಂತೆ ಮಾಡುವ ಮೂಲಕ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸದ್ಯ ಸುದ್ದಿಯಲ್ಲಿದ್ದಾರೆ. ತಾವೇ ಹೇಳಿಕೊಳ್ಳುವಂತೆ ಅವರದ್ದು ‘ನ್ಯಾಯಕ್ಕಾಗಿ ನಿರಂತರ ಹೋರಾಟ’.

ನಗರದ ಬಂಡಿಪಾಳ್ಯ ನಿವಾಸಿಯಾದ ಅವರು ಎರಡು ದಶಕಗಳಿಂದ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಜೊತೆಗೆ ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ಕಾನೂನು ಹೋರಾಟ ಕೈಗೊಂಡಿದ್ದಾರೆ. ಮುಡಾ ಪ್ರಕರಣದಲ್ಲಿ ಪ್ರಾರಂಭದಿಂದಲೂ ದಾಖಲೆಗಳ ಸಮೇತ ಹೋರಾಟ ನಡೆಸುತ್ತಿದ್ದಾರೆ.

ಮೈಸೂರು ದಕ್ಷಿಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಆಂಟೊ ಕೊಲೆ ಪ್ರಕರಣದಲ್ಲಿ ಪೊಲೀಸರು ನಿರಪರಾಧಿಗಳನ್ನು ಆರೋಪಿಗಳನ್ನಾಗಿ ಮಾಡಿ ನಿಜವಾದ ಆರೋಪಿಗಳನ್ನು ರಕ್ಷಿಸಿದ್ದ ಪ್ರಕರಣದಲ್ಲಿ ಕೃಷ್ಣ ಅಮಾಯಕರ ಪರ ಹೋರಾಟ ನಡೆಸಿ ಗಮನ ಸೆಳೆದಿದ್ದರು.

ಮೈಸೂರು ತಾಲ್ಲೂಕಿನ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ಪೊಲೀಸರ ವಿರುದ್ಧವೇ ಕಳ್ಳತನದ ಪ್ರಕರಣ ದಾಖಲಾದಾಗ, ಪೊಲೀಸರ ಪರವಾಗಿ ನಿಂತು ನ್ಯಾಯ ದೊರಕಿಸಿಕೊಟ್ಟಿದ್ದರು.

‘ಪೊಲೀಸರು, ಅಧಿಕಾರಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಿ ಜನಸ್ನೇಹಿ ಆಗಿಸುವ ಸಲುವಾಗಿ ನನ್ನ ಈ ಹೋರಾಟ’ ಎನ್ನುತ್ತಾರೆ ಅವರು.

ರೌಡಿ ಪಟ್ಟಿಯಲ್ಲಿ ಹೆಸರು;

ಇಂಥ ‘ಹೋರಾಟದ ಬದುಕಿನ’ ಕೃಷ್ಣ ವಿರುದ್ಧ ವಂಚನೆ, ಬೆದರಿಕೆ ಮೊದಲಾದ ಆರೋಪಗಳ ಮೇಲೆ ಮೈಸೂರು ನಗರ ವ್ಯಾಪ್ತಿಯಲ್ಲಿ 17 ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ಸೇರಿದಂತೆ ಹಲವು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗಿದ್ದು, ಇನ್ನೂ ಕೆಲವು ವಿಚಾರಣೆಯ ಹಂತದಲ್ಲಿವೆ. 2019ರಲ್ಲಿ ನಗರದ ಕೆ.ಆರ್. ಠಾಣೆಯ ರೌಡಿಗಳ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. 

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಾದ ದಿನವೇ, ಹಣ ಪಡೆದು ವಂಚಿಸಿದ ಆರೋಪ ಪ್ರಕರಣದಲ್ಲಿ ಕೃಷ್ಣ ಅವರು ಚಾಮರಾಜನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದು ಕೂಡ ದೊಡ್ಡ ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT