ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದ ನಾಗರಾಜ್

Published 13 ಜೂನ್ 2024, 7:58 IST
Last Updated 13 ಜೂನ್ 2024, 7:58 IST
ಅಕ್ಷರ ಗಾತ್ರ
ADVERTISEMENT

ಮೈಸೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ‍ಪೈಕಿ ಒಬ್ಬನಾದ ನಾಗರಾಜ್‌ ಚಲನಚಿತ್ರ ನಟ ದರ್ಶನ್‌ ತೂಗುದೀಪ ನೆರವಿನಿಂದ ಇಲ್ಲಿನ ನಗರಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿಯಲು ತಯಾರಿ ನಡೆಸಿದ್ದ ಎಂಬ ಸಂಗತಿ ಹೊರಬಿದ್ದಿದೆ.

ಹಲವು ವರ್ಷಗಳಿಂದ ದರ್ಶನ್‌ಗೆ ಆಪ್ತನಾಗಿದ್ದ 41 ವರ್ಷ ವಯಸ್ಸಿನ ನಾಗರಾಜ್‌, ಮೂಲತಃ ತಿ.ನರಸೀಪುರದವ. ನಗರದಲ್ಲಿ ಟಿ.ಕೆ. ಲೇಔಟ್‌ನಲ್ಲಿ ಇರುತ್ತಿದ್ದ. ಈಚೆಗೆ ರಾಮಕೃಷ್ಣನಗರದ ನಿವಾಸಿಯಾಗಿದ್ದ. ದರ್ಶನ್‌ ಸಹಕಾರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ ಪಡೆದುಕೊಳ್ಳಬೇಕು, ವಾರ್ಡ್‌ ನಂ.21 (ಗಂಗೋತ್ರಿ)ರಿಂದ ಸ್ಪರ್ಧಿಸಬೇಕು ಎಂಬ ಆಸೆ ಹೊಂದಿದ್ದ. ಆ ಪಕ್ಷದ ಕಾರ್ಯಕ್ರಮಗಳಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿದ್ದ. ದರ್ಶನ್‌ ಮೈಸೂರಿಗೆ ಬಂದಾಗಲೆಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂದು ತಿಳಿದುಬಂದಿದೆ.

ರೇಣುಕಸ್ವಾಮಿ ಅವರನ್ನು ಚಿತ್ರದುರ್ಗದಿಂದ ಕರೆಸಿಕೊಳ್ಳುವಲ್ಲಿ ನಾಗರಾಜ್‌ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.

ರಾಜ್ಯ ಕುರುಬರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಆತನ ಅಧಿಕಾರದ ಅವಧಿ ಇನ್ನೂ ಮೂರು ತಿಂಗಳು ಇದೆ. ಮುಂಬರಲಿರುವ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯೊಂದಿಗೆ ಓಡಾಡುತ್ತಿದ್ದ. ಈ ಕೊಲೆ ಪ್ರಕರಣದಲ್ಲಿ ಹೊರ ಬಂದರೆ, ಆತ ಚುನಾವಣೆಯಲ್ಲಿ ಸ್ಪರ್ಧಿಸುವ ಸಾದ್ಯತೆ ಇದೆ ಎಂದು ಸಂಘದ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಹಿಂದೆ ಪೆಟ್ರೊಲ್ ಬಂಕ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್‌, ಸ್ನೇಹಿತರ ಮೂಲಕ ದರ್ಶನ್ ಆಪ್ತವಲಯಕ್ಕೆ ಸೇರಿಕೊಂಡಿದ್ದ. 15 ವರ್ಷಗಳಿಂದಲೂ ದರ್ಶನ್ ಜತೆಯಲ್ಲಿ ಇರುತ್ತಿದ್ದ. ದರ್ಶನ್‌ಗೆ ಊಟ, ಉಪಾಹಾರ, ವಾಸ್ತವ್ಯಕ್ಕೆ ವ್ಯವಸ್ಥೆ, ಪ್ರವಾಸ ಮೊದಲಾವುಗಳನ್ನು ನೋಡಿಕೊಳ್ಳುತ್ತಿದ್ದ.‌ ವ್ಯವಸ್ಥಾಪಕನಂತೆ ಕೆಲಸ ಮಾಡುತ್ತಿದ್ದ. ತಿ.ನರಸೀಪುರ ರಸ್ತೆಯಲ್ಲಿ ಕೆಂಪಯ್ಯನಹುಂಡಿಯ ಬಳಿಯಲ್ಲಿರುವ ದರ್ಶನ್‌ ತೋಟದ ಮನೆಯ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದ. ದರ್ಶನ್ ಅಭಿಮಾನಿ ಸಂಘಗಳಿಗೆಲ್ಲ ಸಂಪರ್ಕ ಸೇತುವೆಯೂ ಆಗಿದ್ದ.

ಹಿಂದೊಮ್ಮೆ ದರ್ಶನ್‌ ಆಪ್ತ ನಾಗರಾಜ್‌ಗೆ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ದರು. ಆ ವ್ಯವಹಾರ ಕೈ ಹಿಡಿಯದ ಹಿನ್ನೆಲೆಯಲ್ಲಿ ದರ್ಶನ್ ಜತೆಯಲ್ಲೇ ನಾಗರಾಜ್‌ ಓಡಾಡಿಕೊಂಡಿದ್ದ.

ಹೋದ ವರ್ಷ, ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಸಂರಕ್ಷಿತವೆಂದು ಗುರುತಿಸಲಾದ ಪಟ್ಟೆ‌ತಲೆ ಹೆಬ್ಬಾತುಗಳನ್ನು (ಬಾರ್‌ ಹೆಡೆಡ್‌ ಗೂಸ್‌) ತೋಟದ ಮನೆಯಲ್ಲಿ ಕೂಡಿ ಹಾಕಿ ಸಾಕಿದ ಆರೋಪದ ಮೇರೆಗೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಆಗಲೂ ನಾಗರಾಜ್‌ ಆರೋ‍‍ಪಿಯಾಗಿದ್ದ. ದರ್ಶನ್‌ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಜೊತೆ ನಾಗರಾಜ್‌ ವಿರುದ್ಧ ಕೂಡ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್‌ನಲ್ಲಿ ಆತನನ್ನು ವ್ಯವಸ್ಥಾಪಕ ಎಂದು ಉಲ್ಲೇಖಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT