ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕೃಷ್ಣ ‘ಸುಧೆ’; ಸಂಗೀತೋತ್ಸವಕ್ಕೆ ತೆರೆ

ವಾಣಿವಿಲಾಸ ಮೊಹಲ್ಲಾ 8ನೇ ಕ್ರಾಸ್‌: ವಿದ್ವಾನ್‌ ಟಿ.ಎಂ.ಕೃಷ್ಣ ಗಾಯನ, ಸನ್ಮಾನ
Published : 19 ಸೆಪ್ಟೆಂಬರ್ 2024, 4:53 IST
Last Updated : 19 ಸೆಪ್ಟೆಂಬರ್ 2024, 4:53 IST
ಫಾಲೋ ಮಾಡಿ
Comments

ಮೈಸೂರು: ವಿದ್ವಾನ್‌ ಟಿ.ಎಂ.ಕೃಷ್ಣ ಅವರ ಕರ್ನಾಟಕ ಸಂಗೀತ ಗಾಯನದ ‘ಮಾಯಾ ಲೋಕ’ದಲ್ಲಿ ಬುಧವಾರ ಸಹೃದಯರು ಮಿಂದರು. ವಾಗ್ಗೇಯಕಾರರ ಕೃತಿಗಳು, ಶರಣರ ವಚನಗಳು, ಕೀರ್ತನಕಾರರ ಭಜನೆ ಸೇರಿದಂತೆ ಎಲ್ಲ ಪ್ರಕಾರಗಳ ಸಂಗೀತ– ಸಾಹಿತ್ಯದ ದಿವ್ಯಾನುಭೂತಿಗೆ ಪುಳಕಿತಗೊಂಡರು. ಅದರೊಂದಿಗೆ 63ನೇ ಪಾರಂಪರಿಕ ಸಂಗೀತೋತ್ಸವವೂ ಸಂಪನ್ನಗೊಂಡಿತು.

ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್‌ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆದ ಉತ್ಸವದ ಕಡೇ ದಿನ ಕೃಷ್ಣ, ಭಾವ ಕಡಲಿನಲಿ ಮೀಯಿಸಿದರು.

‘ನಾದಪ್ರಿಯ’ ಗಣೇಶ ಮೂರ್ತಿಯ ವಿಸರ್ಜನೆಗೆ ಸಿದ್ಧತೆ ನಡೆದಿರುವಂತೆಯೇ ಹೊಮ್ಮಿದ ರಾಗಗಳು ಸಭಿಕರ ಭಕ್ತಿ– ಭಾವಗಳನ್ನು ಹೆಚ್ಚಿಸಿದವು.  

ಮುತ್ತುಸ್ವಾಮಿ ದೀಕ್ಷಿತರ ‘ಕೇದಾರಂ’ ರಾಗದ ಕೃತಿ ‘ಆನಂದ ನಟನ ಪ್ರಕಾಶಂ’ ಮೂಲಕ ಕಛೇರಿ ಆರಂಭಿಸಿದ ಕೃಷ್ಣ, ಗಣೇಶಪಿತ ನಟರಾಜನನ್ನು ಕೊಂಡಾಡಿದರು‌. ‘ಸಂಗೀತ ವಾದ್ಯ ವಿನೋದ ತಾಂಡವಜಾತ ಬಹುತರವೇದ ಚೋದ್ಯಂ’ ಸಾಲಿನ ಭಾವತುಂಬಿದ 'ನೆರವಲ್' ಪ್ರಸ್ತುತಿಯು ತಲೆದೂಗಿಸಿತು. ಅಕ್ಕರೈ ಶುಭಲಕ್ಷ್ಮಿ ಅವರ ವಯಲಿನ್ ರಾಗಾನುಸಂಧಾನ, ಘಟಂನಲ್ಲಿ ಸುಕನ್ಯಾ ರಾಮಗೋಪಾಲ್ ಹಾಗೂ ಮೃದಂಗದಲ್ಲಿ ಸುಮೇಶ್ ನಾರಾಯಣ್ ಅವರ ಲಯವಿನ್ಯಾಸವು ಹೃದಯ ಧಿಮಿತವನ್ನು ಹೆಚ್ಚಿಸಿತು.

‘ಖರಹರಪ್ರಿಯ‌’ ರಾಗದಲ್ಲಿ ಕಲ್ಪನಾ ಸ್ವರ ಹಾಕಿದ ಅವರು ಸಹವಾದ್ಯಕಾರರ ಪ್ರತಿಭೆಗೂ ಸಾಣೆ ಹಿಡಿದರು. ಸವಾಲಿನ ವಿಸ್ತರಣೆಯಲಿ ನಡೆಗಳನು ಅನುಸರಿಸಿದ ತಾಳವಾದ್ಯಕಾರರು ಸಹೃದಯರನು ತುದಿಗಾಲಿನಲ್ಲಿ ನಿಲ್ಲಿಸಿದರು‌.

‘ಗಾ...ನೊಂತೊಂತ ಗಾ..’ ಎಂದು ಅಷ್ಟದಿಕ್ಕುಗಳಿಂದ ರಾಗವನು ಎಳೆದು ತಂದು ಅಂಗಳದಲ್ಲಿ ನಲಿಯಲು ಬಿಟ್ಟರು. ಈ ವೇಳೆ ಅಕ್ಕರೈ ಶುಭಲಕ್ಷ್ಮಿ ಅವರು ವಯಲಿನ್‌ನ ‘ಡಬಲ್ ಸ್ಟ್ರೋಕ್’ ನಡೆಯ‌ಲ್ಲಿ ಹೊಮ್ಮಿಸಿದ ನಾದವು ದಿವ್ಯಾನುಭೂತಿಯನು ನೀಡಿತು.

‘ಖರಹರಪ್ರಿಯ‌’ ರಾಗವನು ಮನೋಧರ್ಮದಲಿ ವಿಸ್ತರಿಸುತಲೇ ತ್ಯಾಗರಾಜರ ಕೃತಿ ‘ಚಕ್ಕನಿ ರಾಜ ಮಾರ್ಗಲುಂಡೆಗ’ ಹಾಡಿದರು. ತಾರಸ್ಥಾಯಿಯಲಿ ಹಾಡುತ, ಮಂದ್ರದಲಿ ಪಿಸುಗುಟ್ಟಿದ ಗಾಯನದ ಮೋಡಿಯು ತಲೆದೂಗಿಸಿತು. ಯಮನ್‌ ಕಲ್ಯಾಣಿ ರಾಗದ ವ್ಯಾಸರಾಯರ ಕೃತಿ ‘ಕೃಷ್ಣ ನೀ ಬೇಗನೆ ಬಾರೋ’ ಕೃತಿ ಹಾಡಿ ಭಕ್ತಿ ರಸದಲ್ಲಿ ಮುಳುಗಿಸಿದರು. 

ರಾಮನ ಸೌಂದರ್ಯ, ನಡತೆಯನ್ನು ಹೊಗಳುವ ಆನಂದದ ಭಾವ ತುಂಬಿದ ತ್ಯಾಗರಾಜರ ‘ಮೋಹನ’ ರಾಗದ ಕೃತಿ ‘ಮೋಹನ ರಾಮಂ’ ಪ್ರಸ್ತುತ ಪಡಿಸಿದಾಗ ಸಹೃದಯರು ‘ವ್ಹಾ’, ‘ಭಲೇ’ ಸೊಲ್ಲುಗಳು ಉದ್ಘಾರಗೊಂಡವು. ನಂತರ ವಾದ್ಯಕಾರರಿಗೆ ‘ತನಿ’ ಅವಕಾಶ ನೀಡಿದರು.

‘ಜನಸಮ್ಮೋಹಿನಿ’ ರಾಗದ ‘ಸಕಲ ಲೋಕಧರ’, ಮುತ್ತುಸ್ವಾಮಿ ದೀಕ್ಷಿತರ ‘ಬೃಂದಾವನ ಸಾರಂಗ’ ರಾಗದ ಕೃತಿ ‘ರಂಗಪುರ ವಿಹಾರ’ ಗಾಯನಕೆ ಭಾವಪರವಶರಾದರು. ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ ಅವರ ‘ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?’ ವಚನವನ್ನು ಮುಖಾರಿ ರಾಗದಲ್ಲಿ ಹಾಡಿದರು. ತುಳಸೀದಾಸರ ಭಜನೆಯನ್ನು ಮಾಡಿದರು. ಕರ್ನಾಟಕ ಸಂಗೀತದ ವಾಗ್ಗೇಯಕಾರರ ಕೃತಿಗಳು ವೇದಿಕೆ ಮುಂದಿನ ಅಂಗಳದಲ್ಲಿ ನಲಿದವು. ಶರಣರ ವಚನಗಳು ಮಾತನಾಡಿದವು.

‘ಸಂಗೀತ ಕಲಾನಿಧಿ’ಗೆ ಸನ್ಮಾನ

ಮದ್ರಾಸ್‌ ಸಂಗೀತ ಅಕಾಡೆಮಿ ನೀಡುವ 2024ನೇ ಸಾಲಿನ ಪ್ರತಿಷ್ಠಿತ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಭಾಜನರಾಗಿರುವ ವಿದ್ವಾನ್ ಟಿ.ಎಂ.ಕೃಷ್ಣ ಅವರಿಗೆ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್‌ ಟ್ರಸ್ಟ್‌’ (ಎಸ್‌ಪಿವಿಜಿಎಂಸಿ) ಮೈಸೂರು ಪೇಟ ರೇಷ್ಮೆ ಸಾಲು ಹೊದಿಸಿ ಸನ್ಮಾನಿಸಿತು. ಈ ವೇಳೆ ಪ್ರೊ.ನಳಿನಿ ಚಂದರ್ ಪ್ರಶಂಸನಾ ಪತ್ರವನ್ನು ಓದಿದರು. ಕಾರ್ಯದರ್ಶಿ ಸಿ.ಆರ್.ಹಿಮಾಂಶು ಹಾಗೂ ಕೃಷ್ಣಕುಮಾರ್ ಫಲಕವನ್ನು ನೀಡಿ ಗೌರವಿಸಿದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಎಂ.ಕೃಷ್ಣ ‘30 ವರ್ಷದಿಂದಲೂ ಈ 8ನೇ ಕ್ರಾಸ್‌ಗೆ ಬರುತ್ತಿರುವೆ. ಬೇಸರ ಏಕತಾನತೆ ಹೊಸದೇನನನ್ನೂ ಸೃಜಿಸಲು ಸಾಧ್ಯವಾದದಾಗ ಮೈಸೂರಿಗೆ ಬರುತ್ತೇನೆ. ಇಂಥ ಸೆಳೆತಕ್ಕೆ ಈ ಬೀದಿ ಹಾಗೂ ಸಂಗೀತೋತ್ಸವ ಕಾರಣ’ ಎಂದರು. ‘ಸಂಗೀತೋತ್ಸವಗಳು ಕಛೇರಿಗಳು ಒಳಾಂಗಣಕ್ಕೆ ಸೀಮಿತವಾಗುತ್ತಿವೆ. ಬಯಲು ಬೀದಿಯಲ್ಲಿ ಕಛೇರಿಗಳು ಮತ್ತೆ ನಡೆಯಬೇಕು. ಅದರಿಂದ ಮಾತ್ರ ಜನಸಾಮಾನ್ಯರ ಬಳಿಗೂ ಸಂಗೀತ ತಲುಪುತ್ತದೆ. ಎಲ್ಲೋ ಹೋಗುತ್ತಿರುವವರಿಗೂ ಐದು ನಿಮಿಷ ನಿಂತು ಕಛೇರಿ ಕಿವಿದುಂಬಿಕೊಂಡು ಹೋಗುವ ಅನುಭವ ಸಿಗಬೇಕಿದೆ. ಸಂಗೀತ ಕಲಾಪ್ರಕಾರಗಳು ಬೆಳೆಯಬೇಕೆಂದರೆ ಎಲ್ಲರನ್ನೂ ಒಳಗೊಳ್ಳಬೇಕು. ಎಲ್ಲರನ್ನೂ ತಲುಪಬೇಕು’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT