ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೆಷ್ಟು ದಿನ ವರ್ಗ ಸಹಿತ ಸಮಾಜದಲ್ಲಿರಬೇಕು? -ಕವಿ ಡಾ.ದೊಡ್ಡರಂಗೇಗೌಡ

ದಸರಾ ಕವಿಗೋಷ್ಠಿಗೆ ಚಾಲನೆ: ಕವಿ ಡಾ.ದೊಡ್ಡರಂಗೇಗೌಡರಿಂದ ಪ್ರಶ್ನೆಗಳ ಸುರಿಮಳೆ
Last Updated 28 ಸೆಪ್ಟೆಂಬರ್ 2022, 10:58 IST
ಅಕ್ಷರ ಗಾತ್ರ

ಮೈಸೂರು: ‘ಇನ್ನೆಷ್ಟು ದಿನ ವರ್ಗ ಸಹಿತ ಸಮಾಜದಲ್ಲಿರಬೇಕು..? ಇನ್ನೆಷ್ಟು ದಿನ ವರ್ಣ ಸಹಿತ ಸಮಾಜದಲ್ಲಿರಬೇಕು? ದೇವರು, ಪ್ರಕೃತಿಯ ಕುರಿತು ಇನ್ನೆಷ್ಟು ಕವಿತೆಗಳನ್ನು ಬರೆಯುತ್ತೀರಿ? ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯ, ಶೋಷಣೆ, ತಾರತಮ್ಯಗಳು ಕಾಣುತ್ತಿಲ್ಲವೇ...?’

ಕವಿ ಡಾ.ದೊಡ್ಡರಂಗೇಗೌಡ ಅವರಿಂದ ತೂರಿಬಂದ ಗುಂಡಿನ‌ ಪ್ರಶ್ನೆಗಳಿಗೆ ಪ್ರೇಕ್ಷಕರಾಗಿದ್ದ ಕವಿಗಳು ಅವಕ್ಕಾದರೆ, ವೇದಿಕೆಯಲ್ಲಿದ್ದವರು ಬೆರುಗಿನಿಂದ ನೋಡಿದರು.

ಕಲಾಮಂದಿರದಲ್ಲಿ ಬುಧವಾರ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಕೃತಿ ಏನಾಗಿದೆ ನೋಡಿ ಸ್ವಾಮಿ. ಅದರ ಮೇಲಾಗಿರುವ ವಿಕೃತಿಯ ತನಿಖೆ ಮಾಡಿ. ಸಮಾಜವನ್ನು ಹದಗೆಡಿಸಿದ ವ್ಯಕ್ತಿಗಳ ನೀಚ ಗುಣ ಖಂಡಿಸಿ ಪ್ರತಿಭಟನಾತ್ಮಕ ಕವಿತೆಗಳನ್ನು ಬರೆಯಿರಿ’ ಎಂದು ಸಲಹೆ ನೀಡಿದರು.

‘ಜಾತಿ– ಧರ್ಮದ ಹೆಸರಿನಲ್ಲಿ ಶೋಷಣೆ ಬಹಳಷ್ಟು ಆಗಿದೆ. ಇನ್ನೂ ಆಗುತ್ತಿದೆ. ಸಾಂಪ್ರದಾಯಿಕವಾದ ಎಲ್ಲ ಅಂಶಗಳನ್ನು ಬಿಟ್ಟು ಸಮಾಜಮುಖಿಯಾದ ಕಾವ್ಯವನ್ನು ಬರೆಯುವ ತುತ್ತಿನ ಹೊತ್ತು ಇದಾಗಿದೆ. ಸರ್ವಜ್ಞನಂತೆ ಸಮಾಜದಲ್ಲಿನ ಜಾತಿ– ವರ್ಗ– ವರ್ಣಗಳ ರೋಗಗಳಿಗೆ ಚಿಕಿತ್ಸೆ ನೀಡುವ ಕವಿಗಳಾಗಿ. ಸಮಾಜದಲ್ಲಿ ಹೊಕ್ಕಿರುವ ಭೂತಗಳನ್ನು ಬಿಡಿಸಿ, ರೋಗಗ್ರಸ್ಥರಿಗೆ ಚಿಕಿತ್ಸೆ ನೀಡಿ’ ಎಂದರು.

‘ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಕಟ್ಟುವೆವು ನಾವು ಹೊಸ ನಾಡೊಂದನು’ ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದರು. ಅಂತಹ ನಾಡನ್ನು ಕಟ್ಟಿದ್ದೇವೆಯೇ?’ ಎಂದು ಪ್ರಶ್ನಿಸಿದರು.

‘ಬೀದಿ ಬದಿ ಕಸ ಸ್ವಚ್ಛಗೊಳಿಸಿದರೇ ಸಾಲದು. ಮನಸ್ಸಿನಲ್ಲಿ ಹುದುಗಿರುವ ಭೇದ ಭಾವ– ಪಕ್ಷಪಾತ, ಅಪ್ರಾಮಾಣಿಕತೆಯನ್ನು ತೊಡೆದು ಶುದ್ಧಗೊಳಿಸಬೇಕು. ಗ್ರೀಕ್‌ ಕವಿ ಪ್ಲೇಟೊನ ಆದರ್ಶ ಸಮಾಜ ನಿರ್ಮಿಸಬೇಕು. ವರ್ಗ– ವರ್ಣ ಸಹಿತ ಸಮಾಜ ನಿರ್ಮಾಣ ಕಟ್ಟುವುದು ಜವಾಬ್ದಾರಿ ಸಂಸ್ಕೃತಿಯ ರೂವಾರಿಗಳಾದ ಕವಿ–ಕನ್ನಡ ಮನಸ್ಸುಗಳದು. ಸಮಾಜದಲ್ಲಿ ರೋಗಗಳ ನಿರ್ಮೂಲನೆಗೆ ಲೇಖನಿ ಸಿದ್ಧವಾಗಬೇಕಿದೆ’ ಎಂದರು.

ಕನ್ನಡ ನಾಶಗೊಳಿಸಲಾಗದು: ‘ಈಜಿಪ್ಟ್‌ನ ಪಿರಮಿಡ್‌ನಲ್ಲಿ‌ ಊರೊಳ್‌ ಎಂಬ ಕನ್ನಡ ಪದವಿದೆ. ಹೀಗೆ ಕನ್ನಡದ ಆಳವಾದ ಬೇರುಗಳು ಎಲ್ಲೆಡೆ ಚಾಚಿವೆ ಎಂಬುದನ್ನು ನೆನಪಿಡಬೇಕು. ನಮ್ಮ ಭಾಷೆಯನ್ನು ನಾಶಗೊಳಿಸಲು ಆಗದು. ಕನ್ನಡದ ತಾಕತ್ತು, ಸಂವರ್ಧನೆಯನ್ನು ಯಾರೂ ಮಾಡಬೇಕಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಕವಿ ಬಿ.ಆರ್‌.ಲಕ್ಷ್ಮಣರಾವ್‌, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT