ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ‘ಜನಾದೇಶ’ ಲಕ್ಷ್ಮಣಗೋ, ಯದುವೀರಗೋ?

Published 4 ಜೂನ್ 2024, 3:03 IST
Last Updated 4 ಜೂನ್ 2024, 3:03 IST
ಅಕ್ಷರ ಗಾತ್ರ

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ‘ಜನಾದೇಶ’ ಯಾರಿಗೆ ಸಿಕ್ಕಿದೆ ಹಾಗೂ ನೂತನ ಸಂಸದ ಆಗುವವರಾರು ಎಂಬುದು ಮಂಗಳವಾರ (ಜೂನ್‌ 4) ಮಧ್ಯಾಹ್ನದ ವೇಳೆಗೆ ಬಹಿರಂಗಗೊಳ್ಳಲಿದೆ. ಎಲ್ಲರ ಚಿತ್ತವೂ ಫಲಿತಾಂಶದತ್ತ ನೆಟ್ಟಿದೆ.

ಮೈಸೂರು ಹಾಗೂ ಕೊಡಗು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರಕ್ಕೆ ಏ.26ರಂದು ಮತದಾನ ನಡೆದಿತ್ತು. 20,92,222 ಮತದಾರರಲ್ಲಿ 14,77,571 ಮಂದಿ ಹಕ್ಕು ಚಲಾಯಿಸಿದ್ದರಿಂದ ಶೇ 70.62ರಷ್ಟು ಮತದಾನವಾಗಿತ್ತು. ಇದಾಗಿ 39 ದಿನಗಳ ನಂತರ ಮತ ಎಣಿಕೆ ನಡೆಯುತ್ತಿದೆ. ಎಲ್ಲರ ವಿಶ್ಲೇಷಣೆ, ಸೋಲು–ಗೆಲುವಿನ ಲೆಕ್ಕಾಚಾರ, ಅಂದಾಜು ಮತ್ತು ನಿರೀಕ್ಷೆಗಳಿಗೆ ತೆರೆ ಬೀಳಲಿದೆ.

ಒಟ್ಟು 18 ಮಂದಿ ಕಣದಲ್ಲಿದ್ದರೂ ಕಾಂಗ್ರೆಸ್‌ನ ‘ಸಾಮಾನ್ಯ ಕಾರ್ಯಕರ್ತ’ ಎಂ. ಲಕ್ಷ್ಮಣ ಹಾಗೂ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ‘ರಾಜವಂಶಸ್ಥ’ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಇವರಲ್ಲಿ ಯಾರಿಗೆ ಜನರು ಆಶೀರ್ವಾದ ಮಾಡಿದ್ದಾರೆ ಎನ್ನುವುದು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಭದ್ರವಾಗಿದ್ದು, ವಿವಿಧ ಸುತ್ತುಗಳ ಮತ ಎಣಿಕೆಯ ನಂತರ ಬಹಿರಂಗಗೊಳ್ಳುತ್ತಾ ಹೋಗಲಿದೆ. ಸುದೀರ್ಘ ಕಾಯುವಿಕೆ ಅಂತ್ಯಗೊಳ್ಳಲಿರುವ ಈ ಹಂತವು ಅಭ್ಯರ್ಥಿಗಳು, ಅವರ ಬೆಂಬಲಿಗರು, ಪಕ್ಷಗಳ ಕಾರ್ಯಕರ್ತರ ಎದೆಬಡಿತ ಜೋರಾಗುವಂತೆ ಮಾಡಿದೆ.

‘ನಮಗೇ ಗೆಲುವು’ ಎಂದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಬ್ಬರೂ ಹೇಳುತ್ತಿದ್ದಾರೆ. ಆದರೆ, ಮತದಾರರ ಲೆಕ್ಕಾಚಾರ  ಏನಿದೆ, ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ‘ಲೀಡ್‌’ ಸಿಕ್ಕಿದೆ ಎನ್ನುವ ಸ್ಪಷ್ಟ ಚಿತ್ರಣ ಹೊರಬೀಳಲು ಕೆಲವೇ ತಾಸುಗಳಷ್ಟೇ ಕಾಯಬೇಕಾಗಿದೆ.

ಎಣಿಕೆಗೆ ತಯಾರಿ: ಬಹುನಿರೀಕ್ಷಿತ ಮತ ಎಣಿಕೆ ಕಾ‌ರ್ಯವು ಇಲ್ಲಿನ ಪಡುವಾರಹಳ್ಳಿಯ ಮಹರ್ಷಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದೆ. ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಸಲಾಗುತ್ತದೆ. ಬಳಿಕ, ವಿದ್ಯುನ್ಮಾನ ಮತಯಂತ್ರಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತಲಾ 14 ಎಣಿಕೆ ಮೇಜುಗಳು ಹಾಗೂ ಅಂಚೆ ಮತಪತ್ರ ಮತ್ತು ಸೇವಾ ಮತದಾರರ ಮತ ಎಣಿಕೆಗಾಗಿ 25 ಮೇಜುಗಳ ವ್ಯವಸ್ಥೆಯನ್ನು ಹಾಗೂ ಸಿಬ್ಬಂದಿ ನಿಯೋಜನೆಯನ್ನು ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾಗಿರುವುದರಿಂದ, ವಶಪಡಿಸಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಇದುವರೆಗೆ ಸ್ಪರ್ಧಿಸಿದ ಎಲ್ಲ ಚುನಾವಣೆಗಳಲ್ಲೂ ಸೋತಿರುವ ಲಕ್ಷ್ಮಣ ಅವರು ಗೆಲುವಿನ ದಡ ತಲು‍ಪುವರೇ ಅಥವಾ ಇದೇ ಮೊದಲಿಗೆ ಚುನಾವಣೆಗೆ ಸ್ಪರ್ಧಿಸಿರುವ ಯದುವೀರ್‌ ಯಶಸ್ಸು ಕಾಣುವರೇ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

47 ವರ್ಷಗಳ ಬಳಿಕ ಒಕ್ಕಲಿಗರೊಬ್ಬರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ. ಆ ಸಮಾಜದ ಪ್ರತಿಕ್ರಿಯೆ ಏನಾಗಿದೆ, ಸತತ 2 ಬಾರಿ ಗೆದ್ದಿದ್ದ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ತಪ್ಪಿಸಿದ್ದರ ಪರಿಣಾಮ ಏನಾಗಿದೆ ಎಂಬುದು ಕೂಡ ಗೊತ್ತಾಗಲಿದೆ. ಸಿದ್ದರಾಮಯ್ಯ ವರ್ಚಸ್ಸು, ಪಂಚ ಗ್ಯಾರಂಟಿಗಳಿಗೆ ಮತದಾರರು ಜೈ ಎಂದಿದ್ದಾರೆಯೋ ಅಥವಾ ನರೇಂದ್ರ ಮೋದಿ ಅಲೆ, ಯವಕ ಯದುವೀರ್‌ಗೆ ‘ಬಹುಪರಾಕ್‌’ ಹೇಳಿದ್ದಾರೆಯೇ ಎಂಬುದು ತಿಳಿದುಬರಲಿದೆ. ಪಕ್ಷೇತರರಿಗೆ ಮತದಾರರಿಂದ ದೊರೆತ ಸ್ಪಂದನೆ ಏನು, ನೋಟಕ್ಕೆ ಸಿಕ್ಕ ಮತಗಳೆಷ್ಟು ಎನ್ನುವುದು ಪ್ರಕಟಗೊಳ್ಳಲಿದೆ.

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ವೀಕ್ಷಕ ಮೊಹಮ್ಮದ್ ಇಜಾಜ್ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ಸೋಮವಾರ ಪರಿಶೀಲಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಂದ ಮಾಹಿತಿ ಪಡೆದರು. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪಾಲ್ಗೊಂಡಿದ್ದರು

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ವೀಕ್ಷಕ ಮೊಹಮ್ಮದ್ ಇಜಾಜ್ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕೈಗೊಂಡಿರುವ ಸಿದ್ಧತೆಯನ್ನು ಸೋಮವಾರ ಪರಿಶೀಲಿಸಿ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಂದ ಮಾಹಿತಿ ಪಡೆದರು. ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪಾಲ್ಗೊಂಡಿದ್ದರು

– ಪ್ರಜಾವಾಣಿ ಚಿತ್ರ

ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸಲು ಪ್ರಯತ್ನಿಸಲಾಗುವುದು.
–ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಚುನಾವಣಾಧಿಕಾರಿ

ಮತದಾರ ಯಾರ ಪರ?

ಇಬ್ಬರು ಪ್ರಮುಖ ಅಭ್ಯರ್ಥಿಗಳಾದ ಲಕ್ಷ್ಮಣ ಹಾಗೂ ಯದುವೀರ್ ಅವರಲ್ಲಿ ಯಾರ ಕೈ ಮೇಲಾಗಿದೆ ಯಾರಿಗೆ ಹೊಡೆತ ಬಿದ್ದಿದೆ ಜನರು ಯಾರಿಗೆ ಜೈ ಎಂದಿದ್ದಾರೆ ಅದಕ್ಕೆ ಕಾರಣವಾಗಿರುವ ಅಂಶಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಯದುವೀರ್‌ ಪರವಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದವರು ಪ್ರಚಾರ ಮಾಡಿದ್ದರು.

ಕಾಂಗ್ರೆಸ್‌ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಮತ ಯಾಚಿಸಿದ್ದರು.

‘ಲಕ್ಷ್ಮಣ ಗೆದ್ದರೆ ನಾನೇ ಗೆದ್ದಂತೆ’ ಎಂಬ ಭಾವನಾತ್ಮಕ ಅಸ್ತ್ರವನ್ನೂ ಸಿದ್ದರಾಮಯ್ಯ ಪ್ರಯೋಗಿಸಿದ್ದರು. ಈ ಕ್ಷೇತ್ರವನ್ನು ಮೋದಿ–ಸಿದ್ದರಾಮಯ್ಯ ಪ್ರತಿಷ್ಠೆಯನ್ನು ತೆಗೆದುಕೊಂಡಿದ್ದರು. ಇವರಲ್ಲಿ ಯಾರ ಮನವಿಗೆ ಜನ ಬೆಂಬಲ ಸಿಕ್ಕಿದೆ ಎನ್ನುವುದು ಮಂಗಳವಾರದ ಫಲಿತಾಂಶ ತೆರೆದಿಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT