ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು : ಅಹವಾಲು ಆಲಿಸುವ ವಾಗ್ದಾನ ನೀಡಿದ ಕಾಂಗ್ರೆಸ್‌ನ ನೂತನ ಶಾಸಕರು

Published 22 ಮೇ 2023, 6:30 IST
Last Updated 22 ಮೇ 2023, 6:30 IST
ಅಕ್ಷರ ಗಾತ್ರ

ಮೈಸೂರು: ‘ವಾರದಲ್ಲೊಂದು ದಿನ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಕುಂದುಕೊರತೆಗಳನ್ನು ಆಲಿಸುತ್ತೇವೆ. ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ’ ಎಂದು ಕಾಂಗ್ರೆಸ್‌ ಶಾಸಕರು ವಾಗ್ದಾನ ನೀಡಿದರು.

ಇಲ್ಲಿನ ಕಾಂಗ್ರೆಸ್‌ ಭವನದಲ್ಲಿ ಪಕ್ಷದ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ತಮ್ಮ ಗೆಲುವಿನಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು, ಅವರ ಸಹಕಾರವನ್ನು ಮರೆಯುವಂತಿಲ್ಲ’ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ‘ವಿಧಾನ ಸಭೆ ಚುನಾವಣೆಯನ್ನು ಉತ್ಸಾಹದಿಂದ ಎದುರಿಸಿ ಪಕ್ಷವು ಬಹುಮತ ಗಳಿಸಲು ಕಾರ್ಯಕರ್ತರು ಹಾಗೂ ಮುಖಂಡರ‌ ಸಹಕಾರ ಪ್ರಮುಖವಾಗಿದೆ. ಆಗಾಗ ಭೇಟಿಯಾದರೆ ಎಲ್ಲರ ಹೆಸರೂ ನೆನಪಿನಲ್ಲಿ ಇರುತ್ತದೆ. ವರ್ಷಕ್ಕೊಮ್ಮೆ ಬಂದರೆ ಹೆಸರಿಡಿದು ಕರೆಯಲಾಗದಿರಬಹುದು. ನಮ್ಮನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಜಿಲ್ಲಾ ಹಾಗೂ ನಗರ ಘಟಕದ ಅಧ್ಯಕ್ಷರು ನಿಗದಿಪಡಿಸುವ ದಿನದಂದು ಪಕ್ಷದ ಕಚೇರಿಗೆ ಬರುತ್ತೇನೆ’ ಎಂದರು.

ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ,‌ ‘ವಾರದಲ್ಲಿ ‌ಒಮ್ಮೆ ಬಂದು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತೇನೆ. ಎಚ್.ಡಿ.ಕೋಟೆಯಲ್ಲೂ ಪಕ್ಷದ ಕಚೇರಿ ತೆರೆಯಲಿದ್ದೇನೆ’ ಎಂದು ತಿಳಿಸಿದರು.

ಕೆ.ಆರ್‌.ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಮಾತನಾಡಿ, ‘ಕಾರ್ಯಕರ್ತರು ನಮ್ಮದೇ ಚುನಾವಣೆ ಎಂದು ಭಾವಿಸಿ ಕೆಲಸ ಮಾಡಿದ್ದರಿಂದಾಗಿ ಗೆಲುವು ಸಾಧ್ಯವಾಗಿದೆ. ನಮಗೆ ಸಲ್ಲುವ ಸನ್ಮಾನವು ಕಾರ್ಯಕರ್ತರಿಗೆ ಸಲ್ಲುತ್ತದೆ’ ಎಂದರು.

ನಂಜನಗೂಡು ಶಾಸಕ ದರ್ಶನ್ ಧ್ರವನಾರಾಯಣ ಮಾತನಾಡಿ, ‘ಅಭೂತ ಪೂರ್ವ ಗೆಲುವಿನಿಂದ ಮೈಮರೆಯದೇ ಮುಂದಿನ ಚುನಾವಣೆ ಗಳಿಗೆ‌ ಸಿದ್ಧತೆ ಮಾಡಿಕೊಳ್ಳ ಬೇಕು’ ಎಂದು ಸಲಹೆ ನೀಡಿದರು.

ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಅವರನ್ನೂ ಅಭಿನಂದಿಸಲಾಯಿತು. ನಗರ ಸಮಿತಿಯ ಅಧ್ಯಕ್ಷ ಆರ್‌.ಮೂರ್ತಿ, ಕಾರ್ಯದರ್ಶಿ ಆರ್.ಶಿವಣ್ಣ, ಮುಖಂಡರಾದ ಕಳಲೆ ಕೇಶವಮೂರ್ತಿ, ಕೆ.ಮರೀಗೌಡ, ಕಾಗಲವಾಡಿ ಶಿವಣ್ಣ, ಲತಾ ಸಿದ್ದಶೆಟ್ಟಿ, ಯೋಗೇಶ್‌
ಉಪ್ಪಾರ, ಎನ್.ಆರ್.ನಾಗೇಶ್ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ, ಶಾಸಕರನ್ನು ಮೆಟ್ರೋಪೋಲ್‌ ಹೋಟೆಲ್‌ ಸಮೀಪ ದಿಂದ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು.

ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದರಿಂದಾಗಿ 2ನೇ ಬಾರಿಗೆ ಗೆದ್ದಿದ್ದೇನೆ. ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ 1972ರ ನಂತರ ಸತತ 2ನೇ ಬಾರಿಗೆ ಯಾರೂ ಗೆದ್ದಿರಲಿಲ್ಲ. ಅದನ್ನು ಈ ಬಾರಿ ಅಳಿಸಿದ್ದೇವೆ
ಅನಿಲ್‌ ಚಿಕ್ಕಮಾದು, ಶಾಸಕ

ಸಚಿವರೂ ಕಚೇರಿಗೆ ಬರಲಿ

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಮಾತನಾಡಿ ‘ಕಾರ್ಯಕರ್ತರೇ ದೇವರು. ಅವರ ಶ್ರಮದ ಕಾರಣದಿಂದಾಗಿ ಶಾಸಕರು ಅಧಿಕಾರ ಅನುಭವಿಸುವುದು ಸಾಧ್ಯವಾಗುತ್ತದೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರ ‌ಮೇಲೆ ಪ್ರಕರಣ ದಾಖಲಾಗಿದ್ದರೆ ಅವುಗಳನ್ನು ಪಕ್ಷದಿಂದ ನಿರ್ವಹಿಸಲಾಗುವುದು. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಹೇಳಿದರು. ‘ಜಿಲ್ಲಾ ‌ಉಸ್ತುವಾರಿ ಸಚಿವರು ಕೂಡ ವಾರಕ್ಕೊಮ್ಮೆ ಪಕ್ಷದ ಕಚೇರಿಗೆ ಬರಬೇಕು. ಬೇರೆ ಜಿಲ್ಲೆಯ ಸಚಿವರು ಇಲ್ಲಿಗೆ ಪ್ರವಾಸ ಕೈಗೊಂಡಾಗ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಮಸ್ಯೆಗಳನ್ನು ಬಗೆಹರಿಸಬೇಕು. ಇದನ್ನು ನಿರ್ಣಯ ಮಾಡಿ ಕೆಪಿಸಿಸಿಗೆ ಕಳುಹಿಸಲಾಗುವುದು’ ಎಂದು ತಿಳಿಸಿದರು.

ಹಣ ಪಡೆಯಲಿಲ್ಲ

‘ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ಅವರು ನಮ್ಮ ಬಳಿ ಒಂದು ರೂಪಾಯಿಯನ್ನೂ ಪಡೆಯದೇ‌ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ‌ ನಾವೆಲ್ಲರೂ ಇದೇ ಉತ್ಸಾಹದಿಂದ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಬೇಕು’ ಎಂದು ರವಿಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT