ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈಸೂರು ಸೈನ್ಸ್‌ ಫೌಂಡೇಶನ್‌’ ಶ್ರಮ: ‘ವಿಜ್ಞಾನ ದೀವಿಗೆ’ ಬೆಳಗಿದ ಶಿಕ್ಷಕರು!

Published 28 ಫೆಬ್ರುವರಿ 2024, 6:18 IST
Last Updated 28 ಫೆಬ್ರುವರಿ 2024, 6:18 IST
ಅಕ್ಷರ ಗಾತ್ರ

ಮೈಸೂರು: ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ವಿಜ್ಞಾನ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಲ್ಲಿ ವಿಜ್ಞಾನ–ಗಣಿತವನ್ನು ಸುಲಭಗೊಳಿಸಲು ಹಾಗೂ ಪರಿಸರ ಪ್ರೀತಿ ಹೆಚ್ಚಿಸಲು ‘ಮೈಸೂರು ಸೈನ್ಸ್‌ ಫೌಂಡೇಶನ್‌’ ದಶಕಗಳಿಂದ ದುಡಿಯುತ್ತಿದೆ. ಇಲ್ಲಿನ ಶಿಕ್ಷಕರು ‘ವಿಜ್ಞಾನ ದೀವಿಗೆ’ ಬೆಳಗಿದ್ದಾರೆ.

ರಾಷ್ಟ್ರೀಯ ವಿಜ್ಞಾನ ದಿನ ಮಾತ್ರವಲ್ಲ ವರ್ಷವಿಡೀ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂಸ್ಥೆಯ ವಿಜ್ಞಾನ ಪ್ರೀತಿಯನ್ನು ‘ಇಸ್ರೊ’ ವಿಜ್ಞಾನಿಗಳೂ ಮೆಚ್ಚಿದ್ದಾರೆ. ಅಷ್ಟೇ ಅಲ್ಲದೇ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾಗಿ ‘ವಿಜ್ಞಾನ ದೀವಿಗೆ’ಯನ್ನು ತೋರಿದ್ದಾರೆ.

ಈ ಬಾರಿಯೂ ರಾಷ್ಟ್ರೀಯ ವಿಜ್ಞಾನ ದಿನ ಪ್ರಯುಕ್ತ ಫೆ.24ರಿಂದ 28ರವರೆಗೆ ನಿತ್ಯ ಸಂಜೆ 6.30ರಿಂದ 7.30ರವರೆಗೆ ವೆಬಿನಾರ್‌ ಅನ್ನು ಸಂಸ್ಥೆ ಹಮ್ಮಿಕೊಂಡಿದೆ. ವಿಕ್ರಂ ಸಾರಾಭಾಯ್ ಕುರಿತು ಫೆ.24ರಂದು ಇಸ್ರೊ ನಿವೃತ್ತ ವಿಜ್ಞಾನಿ ಡಾ.ಸಿ.ಡಿ.ಪ್ರಸಾದ್‌ ಉಪನ್ಯಾಸ ನೀಡಿದ್ದರು. ವಿಜ್ಞಾನಿಗಳಾದ ರಾಜಾರಾಮಣ್ಣ, ಜಗದೀಶ್‌ ಚಂದ್ರ ಬೋಸ್, ಹೋಮಿ ಜಹಾಂಗೀರ್‌ ಬಾಬಾ, ಸಿ.ವಿ.ರಾಮನ್‌ ಕುರಿತು ಹಲವು ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದ್ದಾರೆ.

‘ವಿಜ್ಞಾನ ಜನಮುಖಿಯಾದರೆ ವೈಚಾರಿಕ ಚಿಂತನೆಗಳು ಗಟ್ಟಿಯಾಗಿ ನೆಲೆಯೂರುತ್ತವೆ. ಹೀಗಾಗಿಯೇ ಸಂಸ್ಥೆಯು 2012ರಿಂದ ವಿಜ್ಞಾನ ಕಲಿಕೆಯಲ್ಲಿ ತೊಡಗಿಸಿಕೊಂಡಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ಸಂತೋಷ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನಸಾಮಾನ್ಯರಿಗೆ ವಿಜ್ಞಾನ ಕಲಿಸಲು 2012ರಿಂದ ಪ್ರತಿ ತಿಂಗಳ ಎರಡನೇ ಶನಿವಾರ ‘ತಿಂಗಳ ವಿಜ್ಞಾನ ಉಪನ್ಯಾಸ ಮಾಲಿಕೆ’ ಆರಂಭಿಸಲಾಗಿದೆ. ಆಹಾರ ಕಲಬೆರಕೆ, ಖಗೋಳ ವಿಜ್ಞಾನ, ಪ್ರಾಕೃತಿಕ ವಿದ್ಯಾಮಾನ ಕುರಿತು ತಿಳಿಸಲಾಗಿದೆ. ಪ್ರತಿ ವರ್ಷ ಅಕ್ಟೋಬರ್‌, ನವೆಂಬರ್‌ನಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ವಿಜ್ಞಾನಿಗಳು ಹಾಗೂ ಸಂಶೋಧನೆ ಕುರಿತು ಸಂವಾದ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿರುವ ಸಿ.ಕೃಷ್ಣೇಗೌಡ, ಟಿ.ಶಿವಲಿಂಗಸ್ವಾಮಿ, ಎಂಜಿಎನ್‌ ಪ್ರಸಾದ್‌, ಎಚ್‌.ವಿ.ಮುರುಳೀಧರ್‌, ಎಚ್‌.ಎಸ್‌.ಮಂಜುಳಾ, ಜಿ.ಕೆ.ಕಾಂತರಾಜು, ಸಿ.ಎನ್.ಗೀತಾ, ಬಿ.ಎಸ್‌.ಕೃಷ್ಣಮೂರ್ತಿ ಬಿಡುವಿನ ವೇಳೆಯನ್ನು ವಿಜ್ಞಾನಕ್ಕೇ ಮೀಸಲಿಟ್ಟಿದ್ದಾರೆ. ಸಂಸ್ಥೆಯ ಕಾರ್ಯಗಳಿಗೆ ಇಸ್ರೋ ವಿಜ್ಞಾನಿಗಳಾದ ಸಿ.ಆರ್‌.ಸತ್ಯ, ಸುರೇಶ್‌ ಬೆಂಬಲ ನೀಡುತ್ತಿದ್ದಾರೆ. ಬೇಸಿಗೆ ಹಾಗೂ ದಸರಾ ರಜೆ ವೇಳೆ ನಡೆಸುವ ವಿಜ್ಞಾನ ಶಿಬಿರಕ್ಕೆ ಇಸ್ರೊ, ನವದೆಹಲಿಯ ವಿಜ್ಞಾನ್‌ ಪ್ರಸಾರ್‌ ಪ್ರೋತ್ಸಾಹ ನೀಡಿವೆ.

ವಿದ್ಯಾರ್ಥಿಗಳಿಗೆ ಪರಿಸರದ ಪಾಠ
ವಿದ್ಯಾರ್ಥಿಗಳಿಗೆ ಪರಿಸರದ ಪಾಠ
ಚಟುವಟಿಕೆಯಲ್ಲಿ ತೊಡಗಿರುವ ಶಾಲಾ ವಿದ್ಯಾರ್ಥಿಗಳು
ಚಟುವಟಿಕೆಯಲ್ಲಿ ತೊಡಗಿರುವ ಶಾಲಾ ವಿದ್ಯಾರ್ಥಿಗಳು

ಸಂಸ್ಥೆಯ ಕಾರ್ಯಕ್ರಮಗಳಿವು...

* ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಮೂಢನಂಬಿಕೆ ಮೌಢ್ಯ ಹೋಗಲಾಡಿಸಲು ‘ಪವಾಡ ರಹಸ್ಯ ಬಯಲು’

* ಗ್ರಾಮೀಣ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವಿಜ್ಞಾನದ ಪರಿಕಲ್ಪನೆ ಅರ್ಥ ಮಾಡಿಸಲು ಕಾರ್ಯಾಗಾರ

* ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿಜ್ಞಾನ ಶಿಕ್ಷಕರಿಗೆ ವಿಜ್ಞಾನ ಸರಳ ಕಲಿಸುವ ಮಾರ್ಗಗಳ ಬೋಧನೆಗೆ ನೆರವಾಗಲು ಪುನಃಶ್ಚೇತನ ಶಿಬಿರಗಳು

* ಪಟಾಕಿ ದುಷ್ಪರಿಣಾಮಗಳ ಜಾಗೃತಿಗೆ ‘ಪರಿಸರದ ಪಥದೆಡೆಗೆ ದೀಪಾವಳಿ ರಥ’ ಏಳು ದಿನಗಳ ಜಾಥಾ

* ವಿದ್ಯಾರ್ಥಿಗಳಿಗೆ ಸಂಶೋಧನಾ ಕೇಂದ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಅರಿವು ಮೂಡಿಸಲು ‘ಟೆಕ್ನೋ ಟೂರ್’. ಸಿಎಫ್‌ಟಿಆರ್‌ಐ ಡಿಎಫ್‌ಆರ್‌ಎಲ್‌ ಇಸ್ರೊಗೆ ಭೇಟಿ

* ವಿಜ್ಞಾನ ಕುತೂಹಲ ಹೆಚ್ಚಿಸಲು ಆಕಾಶ ವೀಕ್ಷಣೆ ಪರಿಸರ ನಡಿಗೆ ಪಕ್ಷಿ ವೀಕ್ಷಣೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಆಯೋಜನೆ

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿದ್ದವರು ಸೇರಿ ಸ್ಥಾಪಿಸಿದ ಸಂಸ್ಥೆಯಿದು. ವಿಜ್ಞಾನ ಕಲಿಕೆಯನ್ನು ವಿದ್ಯಾರ್ಥಿಗಳಿಗಲ್ಲದೇ ಶಿಕ್ಷಕರು ನಾಗರಿಕರಿಗೂ ನೀಡುತ್ತಿದೆ
-ಜಿ.ಬಿ.ಸಂತೋಷ್‌ ಕುಮಾರ್, ಸಂಸ್ಥೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT