ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಹದ್ದು ಸಂರಕ್ಷಣೆಗೆ ಒಡಂಬಡಿಕೆ!

ವೈಜ್ಞಾನಿಕ ಅಧ್ಯಯನಕ್ಕೆ ಮೈಸೂರು ವಿಶ್ವವಿದ್ಯಾಲಯ, ಅರಣ್ಯ ಇಲಾಖೆ ಯೋಜನೆ
Last Updated 12 ಮೇ 2022, 10:59 IST
ಅಕ್ಷರ ಗಾತ್ರ

ಮೈಸೂರು: ಅಳಿವಿನಂಚಿನಲ್ಲಿರುವ ರಣಹದ್ದುಗಳ ಸಂರಕ್ಷಣೆ, ವಂಶವಾಹಿಗಳ ಕುರಿತ ಅಧ್ಯಯನಕ್ಕಾಗಿ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಹಾಗೂ ಜಿನೊಮಿಕ್ಸ್ ವಿಭಾಗ ಮತ್ತು ಅರಣ್ಯ ಇಲಾಖೆ ಒಡಂಬಡಿಕೆಗೆ ಸಿದ್ಧತೆ ಮಾಡಿಕೊಂಡಿವೆ.

ಮಾನಸಗಂಗೋತ್ರಿಯಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಹಾಗೂ ರಾಮನಗರದ ಡಿಸಿಎಫ್‌ ವಿ.ದೇವರಾಜು, ಚಾಮರಾಜನಗರ ಡಿಸಿಎಫ್ ವಿ.ಏಡುಕುಂಡಲು ಒಡಂಬಡಿಕೆಯ ಪ್ರಸ್ತಾವಿತ ಪ್ರತಿಯನ್ನು ಪ್ರದರ್ಶಿಸಿದರು. ಒಡಂಬಡಿಕೆಗೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಸಹಿಯಷ್ಟೇ ಬಾಕಿ ಇದೆ. ‘ರಾಮದೇವರಬೆಟ್ಟ ರಣಹದ್ದುಧಾಮ’ದಲ್ಲಿ ಸಂಶೋಧನೆ ನಡೆಯಲಿದ್ದು, ಹದ್ದುಗಳ ಡಿಎನ್‌ಎ ಸಂಗ್ರಹ ಕಾರ್ಯ ನಡೆಯಲಿದೆ.

ಪ್ರೊ.ಜಿ.ಹೇಮಂತಕುಮಾರ್‌ ಮಾತನಾಡಿ, ‘ಆಹಾರ ಸರಪಳಿಯಲ್ಲಿ ಹದ್ದುಗಳ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಕಳವಳಕಾರಿ ಸಂಗತಿ. ಅದನ್ನು ತಡೆಗಟ್ಟಲು ಒಪ್ಪಂದ ಸಹಾಯಕವಾಗಲಿದ್ದು, ವಿಶ್ವವಿದ್ಯಾಲಯದ ಇತಿಹಾಸದ ಮೈಲಿಗಲ್ಲಾಗಲಿದೆ. ವಿಭಾಗದ ಸಂಶೋಧಕರು ಅಧ್ಯಯನ ನಡೆಸಿ ಹದ್ದುಗಳ ವಂಶವಾಶಿಗಳ ದತ್ತಾಂಶ ಸಂಗ್ರಹಿಸಲಿದ್ದು, ಈ ಜೀನ್‌ ಬ್ಯಾಂಕ್‌ ‌ವನ್ಯಜೀವಿ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಹೇಳಿದರು.

ರಾಮನಗರದ ಡಿಸಿಎಫ್‌ ವಿ.ದೇವರಾಜು ಮಾತನಾಡಿ, ‘ರಾಮದೇವರಬೆಟ್ಟ ರಣಹದ್ದುಧಾಮವಾಗಿ 9 ವರ್ಷವಾಗಿದ್ದು, 5 ಉದ್ದಕೊಕ್ಕಿನ ರಣಹದ್ದುಗಳಿವೆ. ಇದೇ ಮೊದಲ ಬಾರಿಗೆ ಅಳಿವಿನಂಚಿನ ರಣಹದ್ದೊಂದು ಸಂತಾನೋತ್ಪತ್ತಿ ನಡೆಸಿದೆ. ಮರಿ ಹದ್ದು ಇನ್ನು ಹದಿನೈದು ದಿನದಲ್ಲಿ ಹಾರಲಿದೆ. ಅಪರೂಪದ ಘಟನೆ ನಡೆದಿರುವುದು ಸಂತಸ ತಂದಿದೆ’ ಎಂದರು.

‘ಮಾನವ– ವನ್ಯಜೀವಿಗಳ ಸಂಘರ್ಷ ಹೆಚ್ಚಳವನ್ನು ತಡೆಯುವುದಕ್ಕಾಗಿ ಇಲಾಖೆ ಶ್ರಮಿಸುತ್ತಿದೆ. ಅಂತೆಯೇ ವನ್ಯಜೀವಿಗಳ ಸಂರಕ್ಷಣೆಗೆ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಂಡಿದೆ’ ಎಂದು ತಿಳಿಸಿದರು.

ಬಾಂಬೆ ನ್ಯಾಚುರಲ್‌ ಹಿಸ್ಟರಿ ಸೊಸೈಟಿಯ ರಣಹದ್ದು ಸಂರಕ್ಷಣಾ ಕಾರ್ಯಕ್ರಮದ ಮುಖ್ಯಸ್ಥ ಡಾ.ವಿಭು ಪ್ರಕಾಶ್ ಮಾಥುರ್ ಮಾತನಾಡಿ, ‘80ರ ದಶಕದಲ್ಲಿ ದೇಶದಲ್ಲಿ 4 ಕೋಟಿ ಹದ್ದುಗಳಿದ್ದವು. ಇದೀಗ ಶೇ 95ರಷ್ಟು ಅಳಿದಿದ್ದು, 19 ಸಾವಿರ ಮಾತ್ರ ಇವೆ. ಇದಕ್ಕೆ ಮಾನವನ ಹಸ್ತಕ್ಷೇಪವೇ ಕಾರಣ. ನೋವು ಶಮನ ಔಷಧ ಡೈಕ್ಲೊಫೆನಾಕ್‌ ಅನ್ನು ಪಶುಗಳಿಗೆ ನೀಡಿದ್ದರಿಂದ ಅವುಗಳನ್ನು ಭಕ್ಷಿಸುವ ಹದ್ದುಗಳಿಗೆ ವಿಷವಾಗಿ ಪರಿಣಮಿಸಿತು’ ಎಂದರು.

‘2006ರಲ್ಲಿ ಕೇಂದ್ರ ಸರ್ಕಾರ ಔಷಧವನ್ನು ನಿಷೇಧಿಸಿತು. ಡೈಕ್ಲೊಫೆನಾಕ್‌ಗೆ ಪರ್ಯಾಯವಾಗಿ ಸುರಕ್ಷತಾ ಔಷಧ ಮೆಲೊಕ್ಸಿಕಮ್‌ ಬಳಸಲು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಆದರೆ, ಹದ್ದುಗಳ ಸಂತತಿ ಅಳಿವಿನಂಚಿಗೆ ಬಂದು ತಲುಪಿದೆ. ಉದ್ದಕೊಕ್ಕಿನ ರಣಹದ್ದು, ಬಿಳಿಬೆನ್ನಿನ ರಣಹದ್ದು, ತೆಳುಕೊಕ್ಕಿ ರಣಹದ್ದುಗಳನ್ನು ಉಳಿಸಿಕೊಳ್ಳುವುದು ತುರ್ತಾಗಿದೆ’ ಎಂದು ವಿವರಿಸಿದರು.

‘ಸತ್ತ ಜೀವಿಗಳನ್ನು ಭಕ್ಷಿಸುವ ಹದ್ದುಗಳು ದಿನಕ್ಕೆ ದೇಹತೂಕದ ಶೇ 40ರಷ್ಟು ಮಾಂಸ ತಿನ್ನುತ್ತವೆ. ಅಲ್ಲದೆ 100 ಕಿ.ಮೀ ಕ್ರಮಿಸಬಲ್ಲವು. ನಿಸರ್ಗವನ್ನು ಸ್ವಚ್ಛಗೊಳಿಸುವ, ಸಾಂಕ್ರಮಿಕ ರೋಗಗಳನ್ನು ತಡೆಯುವ ಹದ್ದುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಜೆನಿಟಿಕ್‌ ಆಧರಿತ ಅಧ್ಯಯನದಿಂದ ಅವುಗಳ ಸಂಖ್ಯೆಗಳನ್ನು ಹೆಚ್ಚಿಸಬಹುದು’ ಎಂದರು.

ವಿಭಾಗದ ಮುಖ್ಯಸ್ಥರಾದ ಡಾ.ಎಸ್‌.ಎಸ್‌.ಮಾಲಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT