ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

149 ಸಿಎ ನಿವೇಶನ ರದ್ದು ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಆಸ್ತಿಗಳು ಮತ್ತೆ ಪ್ರಾಧಿಕಾರಕ್ಕೆ l ಮರುಹಂಚಿಕೆಯಿಂದ ₹ 150 ಕೋಟಿ ಲಾಭ ನಿರೀಕ್ಷೆ
Last Updated 9 ಜುಲೈ 2021, 2:12 IST
ಅಕ್ಷರ ಗಾತ್ರ

ಮೈಸೂರು: ಅನ್ಯ ಉದ್ದೇಶಕ್ಕೆ ಬಳಸಿದ ಆರೋಪದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಇದುವರೆಗೆ 149 ನಾಗರಿಕ ನಿವೇಶನಗಳ (ಸಿಎ) ಮಂಜೂರಾತಿ ರದ್ದು ಮಾಡಿದೆ.

ಹಿಂದಿನ ಅಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ–128 ನಿವೇಶನ), ಈಗಿನ ಮುಡಾ (231) ಹಾಗೂ ಖಾಸಗಿ ಬಡಾವಣೆಗಳ ನಿವೇಶನ (240) ಸೇರಿ ಇದುವರೆಗೆ 550ಕ್ಕೂ ಅಧಿಕ ಸಿಎ ನಿವೇಶನಗಳನ್ನು ನಾಗರಿಕ ಸೌಲಭ್ಯ ಒದಗಿಸಲು ವಿವಿಧ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾ ರದಲ್ಲಿ ಹಂಚಿಕೆ ಮಾಡಲಾಗಿದೆ.

ಈ ಪೈಕಿ ವಿವಿಧ ಬಡಾವಣೆಗಳ ನಿವೇಶನಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ. ದುರ್ಬಳಕೆ ಹಾಗೂ ಬಾಕಿ ಹಣ ಪಾವತಿಸದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅವುಗಳನ್ನು ಮರುಹಂಚಿಕೆ ಮಾಡಿದರೆ ಮುಡಾಕ್ಕೆ ಸುಮಾರು ₹ 150 ಕೋಟಿಯಷ್ಟು ಲಾಭ ವಾಗಬಹುದೆಂದು ಅಂದಾಜಿಸಲಾಗಿದೆ.

‘ಸಾರ್ವಜನಿಕ ಉದ್ದೇಶಗಳಿಗೆ ಪ್ರಾಧಿಕಾರ ವತಿಯಿಂದ ಸಿಎ ನಿವೇಶನ ನೀಡಲಾಗುತ್ತಿದೆ. ಕೆಲ ನಿವೇಶನಗಳನ್ನು ಹಂಚಿಕೆ ಮಾಡಿ ಸುಮಾರು 40-50 ವರ್ಷಗಳಾಗಿವೆ. ಕೆಲವರು ವಾಣಿಜ್ಯ ಹಾಗೂ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಅಂಥ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು, ಪ್ರಾಧಿಕಾರಕ್ಕೆ ಆದಾಯ ಬರುವ ರೀತಿಯಲ್ಲಿ ಕಟ್ಟಡವನ್ನು ಬಳಸಿಕೊಳ್ಳಲಾಗುವುದು. ನಿಯಮ ಮೀರಿದವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳಲಾಗುವುದು’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸಿಎ ನಿವೇಶನಗಳ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪ್ರಾಧಿಕಾರವು ಪರಿಶೀಲಿಸು ತ್ತಿದ್ದು, ವಿದ್ಯಾರ್ಥಿ ನಿಲಯಕ್ಕಾಗಿ ನೀಡಿದ್ದ ನಿವೇಶನ ವೊಂದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದನ್ನು ವಾರದ ಹಿಂದೆಯಷ್ಟೇ ಮುಡಾ ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಹಲವು ಟ್ರಸ್ಟ್‌ಗಳು, ಸಂಘ–ಸಂಸ್ಥೆಗಳು ನಿಯಮ ಉಲ್ಲಂಘಿಸಿರುವುದು ಖಚಿತವಾಗಿದೆ. ಕೆಲ ನಿವೇಶನಗಳ ಗುತ್ತಿಗೆ ಒಪ್ಪಂದ ಮುಗಿದು ಹಲವು ವರ್ಷಗಳೇ ಕಳೆದಿವೆ. ಕೆಲವರು ಉಪಗುತ್ತಿಗೆಗೆ ನೀಡಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ.

1991ರ ಕಾಯ್ದೆಯ ನಿಯಮಗಳಂತೆ ಸಿಎ ನಿವೇಶನಗಳನ್ನು 30 ವರ್ಷಗಳಿಗೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆಗೆ ಪಡೆದ 3 ವರ್ಷಗಳಲ್ಲಿ ನಿಗದಿತ ಉದ್ದೇಶಕ್ಕೆ ಬಳಕೆಯಾಗಬೇಕು. ಉಪಗುತ್ತಿಗೆ ನೀಡುವಂತಿಲ್ಲ.

ನಿಯಮ ಉಲ್ಲಂಘನೆಯಾಗಿರುವ ಇನ್ನೂ ಕೆಲ ಸಿಎ ನಿವೇಶನಗಳನ್ನು ರಾಜಕಾರಣಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿಗಳ ಒತ್ತಡ ಕಾರಣ ಮುಟ್ಟುಗೋಲು ಹಾಕಿಕೊಳ್ಳಲು, ವಾಪಸ್‌ ಪಡೆಯಲು ಮುಡಾಗೆ ಸಾಧ್ಯವಾಗಿಲ್ಲ ಎಂದೂ ಗೊತ್ತಾಗಿದೆ.

262 ಸಿಎ ನಿವೇಶನ ಹಂಚಿಕೆಗೆ ಸಿದ್ಧತೆ

ಮುಡಾ ವತಿಯಿಂದ 262 ಸಿಎ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ. ಈ ವಿಚಾರವಾಗಿ ಸಾರ್ವಜನಿಕರೊಂದಿಗೆ ಸಭೆ ಕೂಡ ನಡೆಸಿ ಹಲವು ದಿನಗಳಾಗಿದೆ. ಆದರೆ, ಅಧಿಸೂಚನೆ ಹೊರಬಿದ್ದಿಲ್ಲ.

ಪ್ರಾಧಿಕಾರದ ಬಡಾವಣೆಗಳು ಮತ್ತು ಖಾಸಗಿ ಬಡಾವಣೆಗಳಲ್ಲಿ ಸುಮಾರು 584 ಸಿಎ ನಿವೇಶನಗಳು ಹಂಚಿಕೆಯಾಗದೆ ಉಳಿದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT