ಮೈಸೂರು: ಮೈಸೂರು ಚಲೋ ಪಾದಯಾತ್ರೆಯ ಈ ಸಮಾವೇಶವು ನಮ್ಮ ಹೋರಾಟದ ಅಂತ್ಯವಲ್ಲ, ಆರಂಭ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಹೇಳಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಅವರು ಮಾತನಾಡಿದರು.
ಶುಕ್ರವಾರ ಕಾಂಗ್ರೆಸ್ ಸಮಾವೇಶಕ್ಕೆ ಬಂದ ಪ್ರತಿ ವ್ಯಕ್ತಿಗೂ ತಲಾ 1 ಸಾವಿರ ನೀಡಿದ್ದು, ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ. ಇದರ ಅಗತ್ಯ ಏನಿತ್ತು? ನಮ್ಮ ಒಂದು ಪಾದಯಾತ್ರೆಗೆ ಸರ್ಕಾರ ನಡುಗಿದೆ. ಸರ್ಕಾರ ಪ್ರಾಮಾಣಿಕವಾಗಿ ಇದ್ದಿದ್ದರೆ ಹೆದರದೇ ಅದೇ ಹಣವನ್ನು ಅಭಿವೃದ್ಧಿಗೆ ಬಳಸಬಹುದಿತ್ತಲ್ಲ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವು ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ಮುಂದುವರಿಯಲಿದೆ. ಜನರ ಆಕ್ರೋಶಕ್ಕೆ ನಾವು ಧ್ವನಿ ಆಗಲಿದ್ದೇವೆ. ಪ್ರಾಮಾಣಿಕ ಸರ್ಕಾರ ಬರುವವರೆಗು ನಾವು ವಿರಮಿಸುವುದಿಲ್ಲ ಎಂದು ಗುಡುಗಿದರು.
ಡಿ.ಕೆ. ಶಿವಕುಮಾರ್ ಆಸ್ತಿ 2008ರಲ್ಲಿ 75 ಕೋಟಿ ಇದ್ದದ್ದು 2023ರಲ್ಲಿ 1414 ಕೋಟಿ ರೂಪಾಯಿ ಆಗಿದೆ. ಇಷ್ಟು ಪ್ರಮಾಣದ ಆಸ್ತಿ ಎಲ್ಲಿಂದ ಬಂತು ಎಂಬುದರ ಲೆಕ್ಕ ನೀಡಿ. ಪ್ರಾಮಾಣಿಕವಾಗಿ ಇಷ್ಟು ಸಂಪಾದಿಸಲು ಆಗದು. ಇದೆಲ್ಲ ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಗಳಿಸಿದ ಹಣ ಎಂದು ಟೀಕಿಸಿದರು.
ರಾಜ್ಯದ ಮುಖ್ಯಮಂತ್ರಿ ತಮ್ಮ ಶಕ್ತಿ ಬಳಸಿ ಮುಡಾದಲ್ಲಿ 4 ಸಾವಿರ ಕೋಟಿ ಮೊತ್ತದ ಹಗರಣ ಮಾಡಿದ್ದಾರೆ. ಇದೆಲ್ಲದರ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.