ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara | ‘ಶ್ವೇತಾಶ್ವ’ ಸಾಹಸ, ಬೆಂಕಿ ಜತೆ ಸರಸ

ಬನ್ನಿಮಂಟಪ ಮೈದಾನದಲ್ಲಿ ಮೈನವಿರೇಳಿಸಿದ ಪಂಜಿನ ಕವಾಯತು; ಬಾನಂಗಳದಲ್ಲಿ ಡ್ರೋನ್ ಜಾದೂ
Published 25 ಅಕ್ಟೋಬರ್ 2023, 5:44 IST
Last Updated 25 ಅಕ್ಟೋಬರ್ 2023, 5:44 IST
ಅಕ್ಷರ ಗಾತ್ರ

ಮೈಸೂರು: ಎದೆ ಝಲ್ಲೆನಿಸುಂತೆ ಮಾಡಿದ ‘ಶ್ವೇತಾಶ್ವ’ ತಂಡ, ಮಿಂಚು ಹುಳಗಳಂತೆ ಹಾರಿ ಬಂದ ಡ್ರೋನ್‌ಗಳ ಜಾದೂ, ಮೈನವಿರೇಳಿಸಿದ ಅಶ್ವರೋಹಿದಳದ ‘ಟೆಂಟ್ ಪೆಗ್ಗಿಂಗ್’, ಬೆಂಕಿಯೊಂದಿಗೆ ಸರಸ...

ದಸರೆ ಅಂಗವಾಗಿ ಮಂಗಳವಾರ ರಾತ್ರಿ ಬನ್ನಿಮಂಟಪ ಮೈದಾನದಲ್ಲಿ ಆಯೋಜಿಸಿದ್ದ ‘ಪಂಜಿನ ಕವಾಯತು’ ನೋಡುಗರ ಮನಸೂರೆಗೊಂಡಿತು. ಕಿಕ್ಕಿರಿದ್ದು ನೆರೆದಿದ್ದ 40 ಸಾವಿರಕ್ಕೂ ಅಧಿಕ ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯ್ಯುವುದರೊಂದಿಗೆ ದಸರೆಗೆ ವೈಭವದ ತೆರೆಬಿತ್ತು.

ಗೌರವ ವಂದನೆ ಸ್ವೀಕರಿಸಿದ ಗೆಹಲೋತ್: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಆ ಬಳಿಕ 21 ಕುಶಾಲತೋಪು ಸಿಡಿಸಲಾಯಿತು.

ಕೆ.ಎನ್.ಸುರೇಶ ಅವರ ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನದಲ್ಲಿ ಅಶ್ವಾರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಕೆಎಸ್‌ಆರ್‌ಪಿ ತುಕಡಿಗಳು, ಗೃಹರಕ್ಷಕ ದಳ, ಎನ್‌ಸಿಸಿ, ಜವಾಹರ್ ನವೋದಯ ವಿದ್ಯಾಲಯ, ಭಾರತೀಯ ಸೇವಾದಳ, ಮಂಜುನಾಥ್ ನೇತೃತ್ವದ ಪೊಲೀಸ್‌ ಬ್ಯಾಂಡ್‌ ಒಳಗೊಂಡಂತೆ 18 ತಂಡಗಳು ಇದ್ದವು. 

ಮೈನವಿರೇಳಿಸಿದ ಶ್ವೇತಾಶ್ವ:

2019ರ ಬಳಿಕ ಕವಾಯತು ಮೈದಾನದಲ್ಲಿ ಮೋಟಾರ್‌ ಬೈಕ್‌ಗಳ ಸಾಹಸ ಪ್ರದರ್ಶನ ನಡೆಯಿತು. ಎಂ.ಕೆ.ಸಿಂಗ್‌ ನೇತೃತ್ವದ ‘ಶ್ವೇತಾಶ್ವ’ ಮಿಲಿಟರಿ ಪೊಲೀಸ್‌ ತಂಡವು 25 ನಿಮಿಷ ಎಲ್ಲರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಎದುರು ಬದುರಾಗಿ, ಕತ್ತರಿ ಆಕಾರದಲ್ಲಿ ಬೈಕ್‌ಗಳು ನುಗ್ಗಿದಾಗ ಪ್ರೇಕ್ಷಕರ ಉದ್ಘಾರ ಮುಗಿಲುಮುಟ್ಟಿತ್ತು. ಟೂಬ್‌ಲೈಟ್‌ ಗೋಡೆಯನ್ನು ಮಣಿಶೇಖರನ್‌ ಒಡೆದು ಅಚ್ಚರಿಗೊಳಿಸಿದರು.

ಬೈಕ್‌ನಲ್ಲಿಯೇ ಏಣಿ ಏರುವುದು, ಒಂಟಿಕಾಲಿನಲ್ಲಿ ನಿಲ್ಲುವುದು, ಹಿಮ್ಮುಖವಾಗಿ ನಿಲ್ಲುವುದು ಸೇರಿದಂತೆ ಕಸರತ್ತುಗಳನ್ನು ಮಾಡಿದ ಯೋಧರು, ಉರಿಯುವ ಬೆಂಕಿಯ ಚಕ್ರದೊಳಗೆ ಮಿಂಚಿನಂತೆ ಹಾರಿ ಎದೆಯನ್ನು ಝಲ್ಲೆನಿಸಿದರು. ರಾಜ್ಯದ ಈರಪ್ಪ, ಎಂ.ಶಶಿಕಾಂತ್, ಜಿ.ಕೆ.ಪ್ರಭು, ಪರಸಪ್ಪ, ಮಹಾವೀರ್, ಫಕೀರಪ್ಪ ಸೇರಿದಂತೆ 9 ಯೋಧರು ಪ್ರದರ್ಶನ ನೀಡಿದ್ದು ವಿಶೇಷ. ಇಬ್ಬರು ಜೋಕರ್‌ ಸವಾರರು ಕಚಗುಳಿಯಿಟ್ಟರು.

ಡ್ರೋನ್‌ ಜಾದೂ:

ಮಿಂಚು ಹುಳಗಳಂತೆ ಹಾರಿ ಬಂದ 350ಕ್ಕೂ ಹೆಚ್ಚು ಪುಟಾಣಿ ಡ್ರೋನ್‌ಗಳು ಡ್ರೋನ್‌ಗಳು ಆಗಸದಲ್ಲಿ ‘ಹ್ಯಾಪಿ ದಸರಾ’ ಬೆಳಕಿನ ಅಕ್ಷರಗಳನ್ನು ಮೂಡಿಸುತ್ತಿದ್ದಂತೆ ಹರ್ಷೋದ್ಗಾರ ಮೊಳಗಿತು. ‘ಕರ್ನಾಟಕ ಭೂಪಟ’, ‘ನಂದಿ’, ‘ಅಂಬಾರಿ ಆನೆ’, ‘ಗಂಡ ಭೇರುಂಡ’, ‘ಮೈಸೂರು ಅರಮನೆ’, ಬಾಣಬಿರುಸು ಮೊದಲಾದ ಚಿತ್ತಾರಗಳು ಎಲ್ಲರನ್ನೂ ಸೆಳೆದವು. 

ರೋಮಾಂಚಕ ಟೆಂಟ್‌ ಪೆಗ್ಗಿಂಗ್‌:

ಮೈಸೂರಿನ ಅಶ್ವಾರೋಹಿ ಪಡೆಯ ಸಿಬ್ಬಂದಿ 9 ಕುದುರೆಗಳ ಜತೆ ನಡೆಸಿಕೊಟ್ಟ ಟೆಂಟ್‌ ಪೆಗ್ಗಿಂಗ್‌ ಸಾಹಸ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ನಾಗಾಲೋಟದಿಂದ ಕುದುರೆ ಸವಾರಿ ಮಾಡುತ್ತಾ  ಬಂದು ಭರ್ಜಿಯಿಂದ ಮೇಲಕ್ಕೆತ್ತುವ ಸಾಹಸವು ಶಿಳ್ಳೆ- ಚಪ್ಪಾಳೆ ಗಿಟ್ಟಿಸಿತು. ಪೊಲೀಸರಾದ ಶರಣಪ್ಪ ಡಿ.ಸಾಸನೂರ, ಆನಂದ್‌ಸಿಂಗ್, ರುದ್ರಪ್ಪ, ಎಚ್.ಕೆ.ಸೋಮಣ್ಣ, ಮಹೇಶ್, ಸುರೇಶ್, ಸಂದೇಶ್, ಚಂದ್ರು, ಜಯ ಪ್ರಕಾಶ್ ಸಾಹಸ ಮೆರೆದರು.

9 ನಿಮಿಷ ತಡ: ದಸರಾ ಪಂಜಿನ ಕವಾಯತು 9 ನಿಮಿಷ ತಡವಾಗಿ ಆರಂಭವಾಯಿತು. 7.30ಕ್ಕೆ ಆರಂಭವಾಗಬೇಕಿದ್ದ ಪಂಜಿನ ಕವಾಯತು 7.39ಕ್ಕೆ ಆರಂಭವಾಯಿತು. ಎರಡೂವರೆ ಗಂಟೆ ನಡೆಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಇದ್ದರು.

ರೋಮಾಂಚಕ ಟೆಂಟ್‌ ಪೆಗ್ಗಿಂಗ್‌ ಧ್ವನಿ– ಬೆಳಕಿನ ಆಕರ್ಷಣೆ 40 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಪಂಜಿನ ರಂಗೋಲಿ...

ಬೆಂಗಳೂರು ತಣಿಸಂದ್ರ ಪೊಲೀಸ್‌ ತರಬೇತಿ ಶಾಲೆಯ 350 ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಬ್ಯಾಂಡ್ ಸಂಗೀತಕ್ಕೆ‌ ತಕ್ಕಂತೆ ಉರಿವ ಪಂಜಿನಲ್ಲಿ ಕರ್ನಾಟಕ ‘ಸುಸ್ವಾಗತ’ ‘ವೆಲ್ ಕಂ ಟು ಹೆರಿಟೇಜ್ ಸಿಟಿ’ ‘ಹ್ಯಾಪಿ ದಸರಾ..’ ‘ಜೈ ಚಾಮುಂಡಿ..’ ‘ ಸಿಯು ಇನ್ 2024’ ಎಂದು ಉರಿವ ಪಂಜುಗಳಲ್ಲಿ ಬರೆದರು.  ನೃತ್ಯರೂಪಕದ ಮೋಡಿ: ಡಿಎನ್‌ಎ ಎಂಟಟೇನ್‌ಮೆಂಟ್‌ನ 300ಕ್ಕೂ ಕಲಾವಿದರು 20 ನಿಮಿಷಕ್ಕೂ ಹೆಚ್ಚು ಕಾಲ ಸಾಂಸ್ಕೃತಿಕ ನೃತ್ಯ ವೈಭವವನ್ನು ಪ್ರದರ್ಶಿಸಿದರು. ‘ಐಗಿರಿ ನಂದಿನಿ’ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ರಾಜ್‌ಕುಮಾರ್ ಅವರ ‘ಹುಟ್ಟಿದರೆ’  ರವಿಚಂದ್ರನ್‌ ಅವರ ‘ಕರುನಾಡೇ’ ಗೀತೆಗಳಿಗೆ ನೃತ್ಯ ಮಾಡಿದರು. ‘ಡ್ಯಾನ್ಸ್ ವಿತ್ ಅಪ್ಪು’ ಗೀತೆಗೆ  ಪುನೀತ್ ಭಾವ ಚಿತ್ರ ಹಿಡಿದು ಭಾವುಕರಾಗಿಸಿದರು. ಶಂಕರ್‌ನಾಗ್ ಅವರ ‘ಸಂತೋಷಕ್ಕೆ’ ಕೆಜಿಎಫ್‌ನ ‘ತೂಫಾನ್’ ‘ಪೈಲ್ವಾನ್’ ಹಾಡುಗಳಿದ್ದವು. ಮಲ್ಲಗಂಬ ಪ್ರದರ್ಶನವೂ ಎಲ್ಲರನ್ನು ಆಕರ್ಷಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT