ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್ ಕಾರ್ಯಕ್ರಮಕ್ಕೆ ಅಡ್ಡಿ: ಮಾತಿನ ಚಕಮಕಿ

Published 4 ಜೂನ್ 2023, 7:12 IST
Last Updated 4 ಜೂನ್ 2023, 7:12 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಸಾವರ್ಕರ್ ಪ್ರತಿಷ್ಠಾನವು ಸಾವರ್ಕರ್ ಜಯಂತಿ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ‌ ಪ್ರದಾನ ಕಾರ್ಯಕ್ರಮಕ್ಕೆ ಪೊಲೀಸರು ತಡೆ ಒಡ್ಡಿದ್ದರಿಂದ ಸ್ಥಳದಲ್ಲಿ‌ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಧಿಕಾರಿಗಳ ಅನುಮತಿಯೊಂದಿಗೆ ಕಾರ್ಯಕ್ರಮ ಮುಂದುವರಿಯಿತು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಸಂಜೆ 5ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಅದಕ್ಕೆ ಮುನ್ನ ಮಧ್ಯಾಹ್ನ 3ರಿಂದ 5ರವರೆಗೆ ವಿದ್ಯಾರ್ಥಿಗಳಿಗೆ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ಸಂಘಟಕರು ಮುಕ್ತ ವಿ.ವಿ. ಆವರಣಕ್ಕೆ ಬಂದಾಗ ಪ್ರವೇಶಿಸಿದಂತೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ತಡೆದರು.

‘ಕಾರ್ಯಕ್ರಮಕ್ಕೆ ಅನುಮತಿ ಪಡೆಯದ ಕಾರಣ ಒಳಗೆ ಬಿಡುವುದಿಲ್ಲ’ ಎಂದರು. ಸಂಘಟಕರು ತಾವು ಅನುಮತಿ ಪಡೆದಿರುವುದಾಗಿ ವಾದಿಸಿದರು. ಈ ಗೊಂದಲ ಮುಂದುವರಿದ್ದರಿಂದ ಮಕ್ಕಳು ವಿ.ವಿ. ಗೇಟ್‌ನ ಮುಂಭಾಗ ರಸ್ತೆಯಲ್ಲೇ ಚಿತ್ರ ಬರೆದರು.

ಬಳಿಕ ವಿ.ವಿ. ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದ್ದು, ಮಧ್ಯಾಹ್ನ 3.45ರ ಸುಮಾರಿಗೆ ಆಯೋಜಕರು ಹಾಗೂ ಮಕ್ಕಳನ್ನು ಸಭಾಂಗಣದ ಒಳ ಬಿಡಲಾಯಿತು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಂಸದ ಪ್ರತಾಪ ಸಿಂಹ, ‘ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವೇ ಪೊಲೀಸರು ಹಾಗೂ ಅಧಿಕಾರಿಗಳ‌ ಮೇಲೆ ಒತ್ತಡ ಹೇರಿ ಅಡ್ಡಿಪಡಿಸಿದೆ’ ಎಂದು ದೂರಿದರು.

‘ಆಯೋಜಕರು ಶುಲ್ಕ ಕಟ್ಟಿ, ಸಭಾಂಗಣ ಕಾಯ್ದಿರಿಸಿದ್ದರು. ಆದರೆ, ಸರ್ಕಾರದ ಕಡೆಯಿಂದ ಒತ್ತಡ ಬಂದ ಕಾರಣ ಅಧಿಕಾರಿಗಳು ಅನುಮತಿ ನೀಡದೇ ಕಾರ್ಯಕ್ರಮ ರದ್ದು ಮಾಡುವ ಪ್ರಯತ್ನ ನಡೆಸಿದರು. ನಾವೆಲ್ಲ ಪ್ರತಿಭಟನೆ ಎಚ್ಚರಿಕೆ ನೀಡಿದ್ದರಿಂದ ಮತ್ತೆ ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಈ ರೀತಿಯ ನೀಚ ಮನಸ್ಥಿತಿ ಬಿಡಬೇಕು’ ಎಂದರು.

ಪ್ರಶಸ್ತಿ ಪ್ರದಾನ: ಸಂಜೆ ನಡೆದ ಕಾರ್ಯಕ್ರಮದಲ್ಲಿ ಇತಿಹಾಸಕಾರ ವಿಕ್ರಂ ಸಂಪತ್ ಅವರಿಗೆ ಕಾದಂಬರಿಕಾರ ಡಾ.ಎಸ್‌.ಎಲ್. ಭೈರಪ್ಪ ‘ವೀರ ಸಾವರ್ಕರ್‌ ಸಮ್ಮಾನ್‌ ಪ್ರಶಸ್ತಿ’ ಪ್ರದಾನ ಮಾಡಿದರು. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಾವರ್ಕರ್‌ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT