ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಅದ್ದೂರಿ ಶ್ರೀಕಂಠೇಶ್ವರ ಸ್ವಾಮಿ ಪಂಚ ಮಹಾರಥೋತ್ಸವ

Published 22 ಮಾರ್ಚ್ 2024, 3:01 IST
Last Updated 22 ಮಾರ್ಚ್ 2024, 3:01 IST
ಅಕ್ಷರ ಗಾತ್ರ

ನಂಜನಗೂಡು (ಮೈಸೂರು): ಅಪಾರ ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳೊಂದಿಗೆ 'ಶ್ರೀಕಂಠೇಶ್ವರ ಸ್ವಾಮಿ ಗೌತಮ ಪಂಚ ಮಹಾರಥೋತ್ಸವ' ಶುಕ್ರವಾರ ಬೆಳಿಗ್ಗೆ 6.30ಕ್ಕೆ ಇಲ್ಲಿ ಅದ್ದೂರಿಯಾಗಿ ನೆರವೇರಿತು‌.

ನಂಜುಂಡೇಶ್ವರ ದೇವಾಲಯದ ರಥ ಬೀದಿಯಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಎಳೆದು ಹರಕೆ ತೀರಿಸಿದರು.

'ಬಂದನಾಪ್ಪ ಬಂದಾನೊ‌... ನಂಜುಂಡಪ್ಪ ಬಂದಾನೋ' ಎನ್ನುತ್ತ ದೊಡ್ಡರಥವನ್ನು ಎಳೆಯುತ್ತಿದ್ದರೆ, ಭಕ್ತಸಾಗರ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿತು.

ಶ್ರೀಕಂಠೇಶ್ವರಸ್ವಾಮಿಯ 110 ಟನ್‌ ತೂಕ ಹಾಗೂ 90 ಅಡಿ ಎತ್ತರದ ಗೌತಮ ರಥ, ಪಾರ್ವತಿ ಅಮ್ಮನವರು, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ಸೇರಿದಂತೆ 5 ರಥಗಳು 1.5 ಕಿ.ಮೀ. ಉದ್ದದ ರಥಬೀದಿಯಲ್ಲಿ ಸಾಗಿದವು.

5 ರಥಗಳನ್ನು ವಿವಿಧ ಬಣ್ಣದ ವಸ್ತ್ರ, ಬಾವುಟಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗಿತ್ತು. ದೊಡ್ಡ ರಥವನ್ನು ಎಳೆಯಲು ಮಂಗಳೂರಿನಿಂದ 100 ಮೀಟರ್‌ ಉದ್ದದ ಬೃಹತ್‌ ಗಾತ್ರದ ಹೊಸ ಹಗ್ಗ ತರಿಸಿದ್ದು, ಈ ಬಾರಿಯ ವಿಶೇಷ.

ರಥದ ಚಲನೆಯನ್ನು ನಿಯಂತ್ರಿಸಲು ಗೊದಮ ಕೊಡುವ ತಂಡದ ಸದಸ್ಯರು ಹೊಸ ಸಮವಸ್ತ್ರ ಧರಿಸಿದ್ದರು. ಜೊತೆಯಲ್ಲಿಯೇ ರಥವನ್ನು ನಿಯಂತ್ರಿಸಲು ಜೆಸಿಬಿ, ಕ್ರೇನ್, ಆಂಬುಲೆನ್ಸ್ ವಾಹನಗಳೂ ಇದ್ದವು.

ಮಾರ್ಚ್‌ 21ರ ರಾತ್ರಿಯಿಂದ 22ರವರೆಗೆ ದೇವಾಲಯದ ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಮಠಗಳು, ಸಂಘ- ಸಂಸ್ಥೆಗಳೂ ಪ್ರಸಾದ ನೀಡಿದವು.

ಹಾರಾಡಿದ ಆರ್‌ಸಿಬಿ ಬಾವುಟ: ಪುನೀತ್ ರಾಜ್ ಕುಮಾರ್ ಬಾವುಟದ ಜೊತೆಗೆ ಈ ಬಾರಿ ಆರ್‌ಸಿಬಿ‌ ತಂಡದ ಬಾವುಟ ಹಾರಾಡಿತು. 'ನಂಜುಂಡಪ್ಪ ನಂಜುಂಡಪ್ಪ ಒಂದು ಕಪ್ ಸಿಕ್ತಪ್ಪ.. ಇನ್ನೊಂದು ಕಪ್ ಕೊಡ್ಸಪ್ಪ' ಎಂದು ಬಾವುಟ ಬೀಸುತ್ತಿದ್ದ ಯುವಕರು ಕೂಗಿದರು. ಹಣ್ಣು ಜವನದಲ್ಲಿ 'ಆರ್‌ಸಿಬಿಗೆ ಜಯವಾಗಲಿ' ಎಂದು ಬರೆದು ರಥಕ್ಕೆ ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT