ಮಂಗಳವಾರ, ನವೆಂಬರ್ 29, 2022
21 °C

ಮಕ್ಕಳ ದಸರೆಗೆ ವಂಶಿಕಾ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪುಟಾಣಿ ಪ್ರತಿಭೆ ವಂಶಿಕಾ ಹವಾ. ಚಿಣ್ಣರ ಪ್ರತಿಭೆಯ ಅನಾವರಣ. ಗಮನಸೆಳೆದ ಸರ್ಕಾರಿ ಶಾಲೆಗಳ ಮಕ್ಕಳು ತಯಾರಿಸಿದ್ದ ಮಾದರಿಗಳ ವಸ್ತುಪ್ರದರ್ಶನ. ವಿವಿಧ ವೇಷಭೂಷಣದಲ್ಲಿ ಕಂಗೊಳಿಸಿದ ಮುದ್ದು ಮಕ್ಕಳು.

–ಮೈಸೂರು ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ಮಕ್ಕಳ ದಸರಾ’ದ ಪ್ರಮುಖಾಂಶಗಳಿವು.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ‘ನನ್ನಮ್ಮ ಸೂಪರ್ ಸ್ಟಾರ್’ ಹಾಗೂ ‘ಗಿಚ್ಚಿ ಗಿಲಿಗಿಲಿ‌’ ರಿಯಾಲಿಟಿ ಷೋ ಖ್ಯಾತಿಯ ಬಾಲ ಪ್ರತಿಭೆ ವಂಶಿಕಾ ಅಂಜನಿ ಕಶ್ಯಪ ವಿಶೇಷ ಆಕರ್ಷಣೆಯಾಗಿದ್ದರು. ಮುದ್ದು ಮಾತುಗಳಿಂದ ನೆರೆದಿದ್ದ ಮಕ್ಕಳು, ಪೋಷಕರು ಮತ್ತು ಶಿಕ್ಷಕರ ಮನಸೂರೆಗೊಂಡರು. ಮನ ರಂಜಿಸಿದರು. ಚಿಣ್ಣರ ಜೋಶ್ ಹೆಚ್ಚಿಸಿದರು.

ರಜೆ ತಗೊಳ್ಳಿ ಎಂದ ವಂಶಿಕಾ:

‘ಹೇಗಿದ್ದೀರಾ ಎಲ್ಲರೂ? ಶಾಲೆಗೆ ರಜೆ ಬೇಕಾ? ತಗೊಳ್ಳಿ’ ಎಂದಾಗ ಸಭಾಂಗಣದ ತುಂಬೆಲ್ಲಾ ಚಪ್ಪಾಳೆಗಳ ಸುರಿಮಳೆಯಾಯಿತು. ‘ಝೂ, ಚಾಮುಂಡಿಬೆಟ್ಟ ನೋಡಬೇಕು; ನನ್ನೊಂದಿಗೆ ಬನ್ನಿ’ ಎಂಬ ಆಹ್ವಾನವನ್ನೂ ನೀಡಿದರು. ತಂದೆ, ಕಲಾವಿದ ಮಾಸ್ಟರ್‌ ಆನಂದ್‌ ಸೂಚನೆ ಮೇರೆಗೆ ನೆಲಕ್ಕೆ ಹಣೆ ಮುಟ್ಟಿಸಿ ಎಲ್ಲರಿಗೂ ನಮಸ್ಕರಿಸಿ ಗಮನಸೆಳೆದ ವಂಶಿಕಾ, ‘ವಿಕ್ರಾಂತ್‌ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಸ್ಟೆಪ್‌ ಹಾಕಿ ಸಭಿಕರ ಪ್ರೀತಿಗೆ ಪಾತ್ರವಾದರು.

ಈ ವೇಳೆ ಮಾತನಾಡಿದ ಆನಂದ್, ‘ದಸರೆಯನ್ನು ದೂರದಿಂದ ನೋಡುತ್ತಿದ್ದವನು ನಾನು. ಈಗ ನನ್ನ ಮಗಳನ್ನೇ ದಸರೆಗೆ ಅತಿಥಿಯಾಗಿ ಕರೆದಿರುವುದು ತಂದೆಯಾಗಿ ನನಗೆ ಹೆಮ್ಮೆಯಲ್ಲವೇ?. ಇದೆಲ್ಲವೂ ದೇವರ–ಪೋಷಕರ ಆಶೀರ್ವಾದ’ ಎಂದರು.

ನಿಮಿಷದಲ್ಲಿ ಕ್ಷೇತ್ರಗಳ ಹೆಸರು:

ಗಿನ್ನಿಸ್ ವಿಶ್ವ ದಾಖಲೆ ಮಾಡಿರುವ ಪ್ರತಿಭೆ, ಬೆಂಗಳೂರಿನ ಹೆಗ್ಗನಹಳ್ಳಿ ಕೆಪಿಎಸ್ ಶಾಲೆಯ ಎನ್.ಧವನಿ ಎಂಬ ಬಾಲಕಿಯು ನಾಡಿನ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ನಿಮಿಷದಲ್ಲಿ ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ‌ಸಿದರು. ಅವರಿಗೆ ಶಾಸಕ ಎಲ್.ನಾಗೇಂದ್ರ ವೈಯಕ್ತಿಕವಾಗಿ ₹ 10ಸಾವಿರ ಬಹುಮಾನ ನೀಡಿದರು. ‘ಆಕೆಯ ಪ್ರತಿಭೆ ಕಂಡು ವೇದಿಕೆ ಒದಗಿಸುವಂತೆ ಕೊನೆ ಕ್ಷಣದಲ್ಲಿ ಸೂಚಿಸಿದ್ದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಬೆನ್ನು ತಟ್ಟಿದರು.

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ, ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ರಾಷ್ಟ್ರೀಯ ಬಾಲಶ್ರೀ ಪುರಸ್ಕೃತೆ ವರ್ಷಾ ಎನ್‌.ಕೆ. ಮತ್ತು ರಾಷ್ಟ್ರಮಟ್ಟದ ಕಲೋತ್ಸವ ವಿಜೇತೆ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಭವ್ಯಾ ಅವರನ್ನು ಅಭಿನಂದಿಸಲಾಯಿತು.

ಪ್ರತಿಭೆ ಆನಾವರಣಕ್ಕೆ ವೇದಿಕೆ:

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿ, ‘ಕೋವಿಡ್ ನಂತರ ದಸರಾ ಹಬ್ಬವು ತನ್ನ ಹಳೆಯ ಮೆರುಗನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಿಗೂ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಲಾಗಿದೆ’ ಎಂದರು.

ಬಳಿಕ 6ರಿಂದ 10ನೇ ತರಗತಿಯ ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆ ನಡೆಯಿತು. ವಿಶೇಷ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿ ಆಕರ್ಷಿಸಿದರು. ನಂತರಮ ಸಾಯಿರಂಗ ಶಾಲೆ ಮಕ್ಕಳು ನೃತ್ಯ ‍‍‍ಪ್ರದರ್ಶಿಸಿದರು. ‘ಸಂಚಲನ’ ತಂಡದವರು ‘ಬೆಟ್ಟದ ಇಲಿಗಳ ಕಥೆ’ ನಾಟಕ ಪ್ರಸ್ತುತಪಡಿಸಿದರು. ಗಜಪಡೆಯ ಮಾವುತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಗಮನಸೆಳೆದರು.

ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಉಪ ಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಸ್.ಪ್ರೇಮ್‌ಕುಮಾರ್, ಅಧ್ಯಕ್ಷೆ ಸುನಂದಾರಾಜ್‌, ಉಪಾಧ್ಯಕ್ಷರಾದ ಮಂಜುಳಾ, ಮಮತಾ ಶಿವಪ್ರಸಾದ್ ಇದ್ದರು.

ಡಿಡಿಪಿಐ ರಾಮಚಂದ್ರರಾಜೇ ಅರಸ್ ಸ್ವಾಗತಿಸಿದರು.

ವೇಷಭೂಷಣ ಸ್ಪರ್ಧೆ, ಪ್ರಬಂಧ, ಆಶುಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ನೃತ್ಯ ಪ್ರದರ್ಶನ ಕಾರ್ಯಕ್ರಮವು ಶುಕ್ರವಾರವೂ ನಡೆಯಲಿದೆ.

ಮಾಹಿತಿ ಒದಗಿಸುವ ವಸ್ತುಪ್ರದರ್ಶನ

ಆವರಣದಲ್ಲಿ ಏರ್ಪಡಿಸಲಾಗಿರುವ ವಿಜ್ಞಾನ ಹಾಗೂ ಕರಕುಶಲ ವಸ್ತುಪ್ರದರ್ಶನವನ್ನು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.

ಎಚ್.ಡಿ.ಕೋಟೆ ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣದಲ್ಲಿ ಚಿತ್ರಕಲೆಯ ಉಪಯುಕ್ತತೆ, ಸರ್ಕಾರಿ ಶಾಲಾ ಮಕ್ಕಳಿಂದ ಭೌಗೋಳಿಕ ಮತ್ತು ಪ್ರಕೃತಿ ವಿಕೋಪಕ್ಕೆ ಕಾರಣಗಳು, ಪರಿಣಾಮಗಳು, ಪಿರಿಯಾಪಟ್ಟಣ ಶಾಲಾ ಮಕ್ಕಳಿಂದ ಕನ್ನಡದ ಶ್ರೇಷ್ಠ ಕವಿ ಪರಂಪರೆ, ತಿ.ನರಸೀಪುರ ವಲಯದಿಂದ ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು, ಕೆ.ಆರ್.ನಗರದ ಶಾಲಾ‌ ಮಕ್ಕಳಿಂದ ಕಲಿಕಾ ಚೇತರಿಕೆ ಕುರಿತು, ನಂಜನಗೂಡು ಶಾಲೆಯಿಂದ ಮೈಸೂರು ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ, ಮೈಸೂರು ದಕ್ಷಿಣ, ಉತ್ತರ‌ ಹಾಗೂ ಗ್ರಾಮಾಂತರ ವಲಯದ ಸರ್ಕಾರಿ ಶಾಲಾ ಮಕ್ಕಳಿಂದ ಯೋಗ, ಸ್ವಾಸ್ಥ್ಯ ಹಾಗೂ ಕೊರೊನಾ ಮುನ್ನೆಚ್ಚರಿಕೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ವಿಜ್ಣಾನ ಹಾಗೂ ತಂತ್ರಜ್ಞಾನ ವಿಷಯಗಳ ಕುರಿತು ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ. ಸೆ.30ರವರೆಗೆ ಇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು