ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪರಿಸರ ಸೂಕ್ಷ್ಮ ವಲಯದಲ್ಲಿ ಅದ್ದೂರಿ ಜಾತ್ರೆ!

ಎನ್‌ಟಿಸಿಎ ಶಿಫಾರಸು ಉಲ್ಲಂಘಿಸಿ ಬೇಲದಕುಪ್ಪೆ ಜಾತ್ರಾ ಮಹೋತ್ಸವ; ಜಿಲ್ಲಾಡಳಿತ ಅನುದಾನ– ಆಕ್ಷೇಪ
Published 8 ಡಿಸೆಂಬರ್ 2023, 5:14 IST
Last Updated 8 ಡಿಸೆಂಬರ್ 2023, 5:14 IST
ಅಕ್ಷರ ಗಾತ್ರ

ಮೈಸೂರು: ಸರಗೂರು ತಾಲ್ಲೂಕಿನ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯ ಜಾತ್ರೆಯನ್ನು ಅರಣ್ಯದ ಕೋರ್‌ ವಲಯದ ಹೊರಗಡೆ ಸ್ಥಳಾಂತರಿಸಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (‌ಎನ್‌ಟಿಸಿಎ) ಶಿಫಾರಸು ಮಾಡಿದೆ. ಹೀಗಿರುವಾಗಲೇ ಜಿಲ್ಲಾಡಳಿತ ₹30 ಲಕ್ಷ ವೆಚ್ಚದಲ್ಲಿ ಅರಣ್ಯದೊಳಗೇ ಜಾತ್ರೆ ನಡೆಸಲು ಮುಂದಾಗಿರುವುದಕ್ಕೆ ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ಪರಿಸರ ಸೂಕ್ಷ್ಮವಲಯದಲ್ಲಿರುವ ದೇವಾಲಯದ ರಸ್ತೆ ಸಮತಟ್ಟು ಮಾಡುವುದು, ದೇವಾಲಯಕ್ಕೆ ಸುಣ್ಣ–ಬಣ್ಣ, ತಾತ್ಕಾಲಿಕ ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ಜಿಲ್ಲಾಡಳಿತವು ಡಿ.4ರಂದು ಆದೇಶ ಹೊರಡಿಸಿದೆ. ಅದ್ದೂರಿ ಜಾತ್ರೆಗೆ ಮಾಡಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎನ್ನುತ್ತಾರೆ ಪರಿಸರವಾದಿ ಗಿರಿಧರ ಕುಲಕರ್ಣಿ.

‘ಅರಣ್ಯದಲ್ಲಿ ಜಾತ್ರೆ ನಿರ್ಬಂಧಿಸಿ, ಸ್ಥಳಾಂತರಿಸುವಂತೆ ನಾನು ಸಲ್ಲಿಸಿದ ಮನವಿ ಅರ್ಜಿ ಆಧರಿಸಿ ಕಳೆದ ತಿಂಗಳು ಸ್ಥಳ ಪರಿಶೀಲನೆ ನಡೆಸಿದ್ದ ಎನ್‌ಟಿಸಿಎಯ ಸಹಾಯಕ ಐಜಿಎಫ್‌ ಹರಿಣಿ ವೇಣುಗೋಪಾಲ್‌, ನ.1, 2ರಂದು ಭೇಟಿ ನೀಡಿ ಎನ್‌ಟಿಸಿಎ ಪ್ರಾಧಿಕಾರಕ್ಕೆ 17ರಂದು ವರದಿ ನೀಡಿದ್ದರು. ಜಾತ್ರೆಯನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ನಿರ್ಬಂಧಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ವರದಿಯಲ್ಲಿ ತಿಳಿಸಿದ್ದರು’ ಎಂದರು.

‘ಆದರೆ, ಇದೀಗ ಅರಣ್ಯದೊಳಗೆ ಜಾತ್ರೆ ನಡೆಸಲು ಜಿಲ್ಲಾಡಳಿತ ಭರದ ಸಿದ್ಧತೆ ನಡೆಸಿದೆ. ದೇವಸ್ಥಾನದ ಶೀಟ್ ಅಳವಡಿಕೆಗೆ ₹2.47 ಲಕ್ಷ, ರಸ್ತೆ ಸಮತಟ್ಟು ಮಾಡಲು ₹2.81 ಲಕ್ಷ, ದೇವಸ್ಥಾನ ಸುಣ್ಣ–ಬಣ್ಣಕ್ಕೆ ₹4.10 ಲಕ್ಷ, ತಾತ್ಕಾಲಿಕ ಶೌಚಾಲಯ, ಟೆಂಟ್‌ ಹೌಸ್‌ ನಿರ್ಮಾಣ, ಸೋಲಾರ್‌ ಲೈಟ್ಸ್‌, ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ₹18.20 ಲಕ್ಷ, ಕುಡಿಯುವ ನೀರಿಗೆ ₹2.20 ಲಕ್ಷ, ಜಾನುವಾರು ಮೇವಿಗೆ ₹13,500 ಹಾಗೂ ಕುಡಿಯುವ ನೀರಿಗೆ ₹12 ಸಾವಿರ ಹಣವನ್ನು ಹಂಚಿಕೆ ಮಾಡಿದೆ’ ಎಂದು ಮಾಹಿತಿ ನೀಡಿದರು.

‘ಕಾಮಗಾರಿಯನ್ನು ನಡೆಸಲು ಕೆ.ಆರ್‌.ನಗರದ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ನಿರ್ಮಿತಿ ಕೇಂದ್ರ, ಎಚ್‌.ಡಿ.ಕೋಟೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಪಶುಪಾಲನಾ ಇಲಾಖೆಗೆ ಹಣ ಬಿಡುಗಡೆ ಮಾಡಿದೆ’ ಎಂದರು.

ಎಲ್ಲಿದೆ ದೇಗುಲ?: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯವು ಬರಲಿದ್ದು, ಸರಗೂರು ತಾಲ್ಲೂಕಿನ ಕಂದಲಿಕೆ ಹೋಬಳಿಯ ಆಳಲಹಳ್ಳಿ ಚೆಕ್‌ ಪೋಸ್ಟ್‌ನಿಂದ 6 ಕಿ.ಮೀ ಕಾಡಿನ ಒಳಗೆ ಇದೆ. ಉದ್ಭವ ಲಿಂಗವಿರುವ ದೇಗುಲ ದರ್ಶನಕ್ಕೆ ಭಕ್ತರು ವರ್ಷವಿಡೀ ಕಾಡಿನೊಳಕ್ಕೆ ಬರುತ್ತಾರೆ. ಕಡೇ ಕಾರ್ತಿಕ ಸೋಮವಾರವಾದ ಡಿ.11ರಂದು ಜಾತ್ರೆಯು ನಡೆಯಲಿದ್ದು, 1,800ರಿಂದ 2,000 ಎತ್ತಿನಗಾಡಿಗಳಲ್ಲಿ 4 ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ.

‘ಜಾತ್ರೆಯಲ್ಲಿ ದೇಗುಲ ದೀಪಾಲಂಕಾರ, ಜನರೇಟರ್‌ ಶಬ್ದದಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ. ಬಸ್‌ ವ್ಯವಸ್ಥೆ ಕಲ್ಪಿಸಿದರೂ ಕಾಡುಹಾದಿಯಲ್ಲಿ ಭಕ್ತರು ಜಾತ್ರೆಗೆ ಬರುತ್ತಾರೆ. ಭಕ್ತರನ್ನು ಸಂರಕ್ಷಣೆ ಹಾಗೂ ನಿಯಂತ್ರಿಸುವುದು ಇಲಾಖೆಗೆ ಸವಾಲು’ ಎನ್ನುತ್ತಾರೆ ಗಿರಿಧರ ಕುಲಕರ್ಣಿ.

ವರದಿ ಶಿಫಾರಸುಗಳೇನು?

* ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ವಲಯದಲ್ಲಿರುವ ಸರಗೂರು ತಾಲ್ಲೂಕಿನ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರ ಮಾಡಿರುವುದು ಅರಣ್ಯ ವನ್ಯಜೀವಿ ಸಂರಕ್ಷಣಾ ಕಾನೂನು ಎನ್‌ಟಿಸಿಎ ನಿಯಮಗಳಿಗೆ ವಿರುದ್ಧವಾಗಿದೆ.

* ಹುಲಿಗಳ ಆವಾಸ ಸ್ಥಾನದಲ್ಲಿರುವ ದೇವಾಲಯದಲ್ಲಿ ನಡೆಯುವ ವಾರ್ಷಿಕ ಜಾತ್ರೆಯನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕೋರ್‌ ವಲಯದ ಹೊರಗಡೆಗೆ ಸ್ಥಳಾಂತರಿಸಬೇಕು.

* ಹುಲಿ ಸಂರಕ್ಷಿತ ಪ್ರದೇಶದ ಕೋರ್‌ ವಲಯದಲ್ಲಿ ದೇಗುಲವಿದ್ದು ಜಾತ್ರೆಯು ಜೀವ ವೈವಿಧ್ಯತೆಗೆ ಧಕ್ಕೆ ತರಲಿದೆ.

* ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅವುಗಳಲ್ಲಿ ಗರ್ಭ ಧರಿಸಿದ ಹಾಗೂ ತಾಯಿ ಹುಲಿಗಳೂ ಇವೆ. ಜಾತ್ರೆಯಿಂದ ದೇವಾಲಯದ ಆವರಣದಲ್ಲಿನ ಅರಣ್ಯ ಹಾಗೂ ಹುಲ್ಲುಗಾವಲು ಅನೈರ್ಮಲ್ಯವಾಗುತ್ತಿದೆ.

ಜಾತ್ರೆ ನಡೆಸುವುದಕ್ಕೆ ಆಕ್ಷೇಪವಿಲ್ಲ. ಮಾನವ–ವನ್ಯಜೀವಿ ಸಂಘರ್ಷ ತಪ್ಪಿಸಲು ಸೂಕ್ಷ್ಮವಲಯದಿಂದ ಅರಣ್ಯದಂಚಿಗೆ ಜಾತ್ರೆ ಸ್ಥಳಾಂತರಿಸಬೇಕು
-ಗಿರಿಧರ ಕುಲಕರ್ಣಿ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT