ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲೇ ನಿರ್ಲಕ್ಷ್ಯ ಪ್ರಗತಿ ಪರಿಶೀಲನಾ ಸಭೆಯೂ ನಡೆದಿಲ್ಲ ಕಾಗದದಲ್ಲೇ ಉಳಿದರೆ ಪ್ರಯೋಜನವೇನು?
ಏಕತಾಮಾಲ್‌ಗೆ ಅನುಮೋದನೆ
ದಸರಾ ವಸ್ತುಪ್ರದರ್ಶನ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಅಲ್ಲಿ ಏಕತಾಮಾಲ್ ನಿರ್ಮಿಸುವ ಸಂಬಂಧ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಕ್ಕಾಗಿ ಏಕತಾಮಾಲ್ ಶಾಶ್ವತ ವೇದಿಕೆಯಾಗಲಿದೆ ಎಂದು ಹೇಳಲಾಗಿದೆ. 6.5 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. ಕೂರ್ಗಳ್ಳಿಯಲ್ಲಿರುವ ವನ್ಯಜೀವಿಗಳ ಪುನರ್ವಸತಿ ಕೇಂದ್ರದ ಬಲವರ್ಧನೆ ಮಾಡಲಾಗುವುದು. ಮೈಸೂರಿನಲ್ಲಿ ನಿರ್ಮಾಣಗೊಳ್ಳಲಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಘಟಕಕ್ಕೆ ₹20 ಕೋಟಿ ಮೀಸಲಿಡಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಅದಿನ್ನೂ ಬಿಡುಗಡೆಯಾಗಿಲ್ಲ.
ರಚನೆಯಾಗಲಿಲ್ಲ ಪ್ರಾಧಿಕಾರ
ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಹಾಗೂ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ ‘ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ’ ರಚನೆಗೆ ಕ್ರಮ ವಹಿಸಲಾಗುವುದು. ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲಾಗುವುದು ಎಂದು ಘೋಷಿಸಲಾಗಿತ್ತು. ಇದು ಕೂಡ ಘೋಷಣೆಯಾಗಿಯೇ ಉಳಿದಿದೆ. ವಿಶೇಷ ಕಂಪು ರುಚಿ ಮತ್ತು ಸೊಗಡಿನಿಂದ ಹೆಸರಾಗಿ ‘ಜಿಐ (ಭೌಗೋಳಿಕ ಮಾನ್ಯತೆ) ಟ್ಯಾಗ್’ ಪಡೆದಿರುವ ಮೈಸೂರು ಮಲ್ಲಿಗೆ ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಉತ್ಪಾದನೆ ಸಂಶೋಧನೆ ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತು. ಈ ಸಂಬಂಧ ತೋಟಗಾರಿಕೆ ಇಲಾಖೆಯಿಂದ ಕೊಂಚ ಪ್ರಯತ್ನ ನಡೆದಿದೆ. ರೈತರಿಗೆ ತರಬೇತಿ– ಮಾರ್ಗದರ್ಶನ ನೀಡಲಾಗುತ್ತಿದೆ.
ಹೊಳಪು ಕಾಣದ ರೇಷ್ಮೆ!
‘ರೇಷ್ಮೆ ಕೃಷಿ ಅಭಿವೃದ್ಧಿಗೆ ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲ ಸೌಕರ್ಯ ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರ ತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ’ ಎಂದು ಬಜೆಟ್‌ನಲ್ಲಿ ತಿಳಿಸಲಾಗಿತ್ತು. ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರ ತವರು ಜಿಲ್ಲೆಯಲ್ಲೇ ಘೋಷಣೆ ಕಾಗದದಲ್ಲಷ್ಟೆ ಉಳಿದಿದೆ. ಮೈಸೂರು ವಿಮಾನನಿಲ್ದಾಣದ ರನ್‌ವೇ ವಿಸ್ತರಣೆ ಮಾಡಲಾಗುವುದು ಎಂದು ಬಜೆಟ್ ಹೇಳಲಾಗಿತ್ತು. ಭೂಸ್ವಾಧೀನದ ಪ್ರಕ್ರಿಯೆಯೇ ಇನ್ನೂ ನಡೆಯುತ್ತಿದೆ.