ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಕಾರಾಗೃಹದಲ್ಲಿ ಮನಪರಿವರ್ತನೆಗೆ ಅವಕಾಶ: ಬಿ.ಎಸ್. ರಮೇಶ್

Published : 20 ಅಕ್ಟೋಬರ್ 2023, 15:23 IST
Last Updated : 20 ಅಕ್ಟೋಬರ್ 2023, 15:23 IST
ಫಾಲೋ ಮಾಡಿ
Comments

ಮೈಸೂರು: ‘ಕಾರಾಗೃಹಗಳಲ್ಲಿ ಅಪರಾಧಿಗಳ ಮನಪರಿವರ್ತನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಸಮಾಜದಲ್ಲಿ ಶಾಂತಿ ಮೂಡಿಸುವಂತಹ ಕೆಲಸ ನಡೆಯುತ್ತಿದೆ’ ಎಂದು ಇಲ್ಲಿನ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಬಿ.ಎಸ್. ರಮೇಶ್ ಹೇಳಿದರು.

ದಸರಾ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಯೋಗ ದಸರಾ ಉಪ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಕಾರಾಗೃಹ ವಾಸಿಗಳಿಗೆ ವಿಶಿಷ್ಟ ಯೋಗಭ್ಯಾಸ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರೋಗ್ಯ ತನ್ನಿಂದ ತಾನೇ ಬರುವಂಥದ್ದಲ್ಲ. ಅದಕ್ಕೆ ನಿರ್ವಹಣೆಯ ಅವಶ್ಯಕತೆ ಇದೆ. ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಯೋಗ ಅತ್ಯವಶ್ಯವಾಗಿದೆ’ ಎಂದರು.

‘ಕಾರಾಗೃಹದಲ್ಲಿ ವಾಸಿಸುವವರು ಅಲ್ಪ ಕಾಲಕ್ಕೆ ಮಾತ್ರ ಇರುತ್ತಾರೆ. ಯಾವುದೋ ಕ್ಷಣದಲ್ಲಿ ಮಾಡಿದ ತಪ್ಪಿಗೆ ಸೆರೆಮನೆಯ ವಾಸವನ್ನು ಅನುಭವಿಸುತ್ತಿದ್ದೀರಿ. ಇಲ್ಲಿಂದ ಹೊರಡುವ ಮುನ್ನ ಸಮಾಜಕ್ಕೆ ಒಳ್ಳೆಯದನ್ನು ಬಯಸುವಂತಹ ಮನಸ್ಸಿನೊಂದಿಗೆ ಹೋಗಬೇಕು. ಇದಕ್ಕಾಗಿ, ವಿವಿಧ ಸಂಘ–ಸಂಸ್ಥೆಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಒಳ್ಳೆಯ ಗುಣಗಳನ್ನು ಪೋಷಿಸಿ ಉತ್ತಮ ನಾಗರಿಕರನ್ನಾಗಿ ಮಾಡುವ ಪ್ರಯತ್ನವನ್ನು ಕಾರಾಗೃಹದಲ್ಲಿ ಮಾಡಲಾಗುತ್ತಿದೆ’ ಎಂದರು.

‘ಕಾರಾಗೃಹದಲ್ಲಿ ನಿತ್ಯವೂ ಯೋಗ ಮಾಡುವ ಮೂಲಕ ಧನಾತ್ಮಕ ಪರಿವರ್ತನೆ ಹೊಂದಬೇಕು’ ಎಂದು ತಿಳಿಸಿದರು.

ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ದೇವರಾಜ ಮಾತನಾಡಿ, ‘ನಿಯಮಿತವಾಗಿ ಯೋಗಾಭ್ಯಾಸ ಹಾಗೂ ಧ್ಯಾನ ಮಾಡುವುದರಿಂದ ಚಿಂತೆಯನ್ನು ದೂರ ಮಾಡಬಹುದು. ರೋಗಗಳಿಂದ ದೂರವಿರಬಹುದು’ ಎಂದು ಹೇಳಿದರು.

ಯೋಗ ದಸರಾ ಉಪ ಸಮಿತಿಯ ಉಪಾಧ್ಯಕ್ಷ ಮಹೇಶ್, ಭೂ ದಾಖಲೆಗಳ ಉಪ ನಿರ್ದೇಶಕಿ ಕೆ. ರಮ್ಯಾ, ಉಪ ಸಮಿತಿಯ ಕಾರ್ಯಾಧ್ಯಕ್ಷೆ ಡಿ.ಎಂ. ರಾಣಿ, ಕಾರ್ಯದರ್ಶಿ ಪುಷ್ಪಾ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT