ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನಲ್ಲಿ ಉಳುಮೆ: ಪ್ರಕರಣ ದಾಖಲಿಸದಂತೆ ಆದೇಶ -ಆರ್.ಅಶೋಕ್‌ ಪ್ರಕಟ

ಗ್ರಾಮ ವಾಸ್ತವ್ಯ ಕಾರ್ಯಕ್ರಮ
Last Updated 19 ನವೆಂಬರ್ 2022, 14:34 IST
ಅಕ್ಷರ ಗಾತ್ರ

ಭೀಮನಕೊಲ್ಲಿ (ಮೈಸೂರು ಜಿಲ್ಲೆ): ‘ಸರ್ಕಾರಿ ಜಮೀನು ಅಥವಾ ಅರಣ್ಯ ಇಲಾಖೆಯ ಜಾಗಗಳಲ್ಲಿ ಉಳುವವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸದಂತೆ ಈಚೆಗೆ ಆದೇಶ ಮಾಡಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್‌ ಪ್ರಕಟಿಸಿದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಗ್ರಾಮದ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಹಾಗೂ ‘ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ರೈತರ ಮೇಲೆ ಪ್ರಕರಣ ಹಾಕುತ್ತಿದ್ದರು. ವಿಚಾರಣೆಗೆ ಹಾಜರಾಗಲು ರೈತರು ಬೆಂಗಳೂರಿಗೆ ಬರಬೇಕಾಗಿತ್ತು. ಈಗ, ಅದನ್ನು ತೆಗೆದು ಹಾಕಿದ್ದೇನೆ. ಉಳುವವರಿಗೆ ಭೂ ಕಬಳಿಕೆದಾರ ಎಂಬ ಹಣೆಪಟ್ಟಿಯನ್ನು ಹಾಕುವುದನ್ನು ತೆಗೆದು ಹಾಕಲಾಗಿದೆ. ನಗರ ಪ್ರದೇಶದಲ್ಲಿ ಉಳುಮೆ ಮಾಡಿದರೆ ಪ್ರಕರಣ ದಾಖಲಿಸಿಕೊಳ್ಳಲಿ. ಗ್ರಾಮೀಣ ಪ್ರದೇಶಗಳಲ್ಲಿ ಹಾಕುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

10 ಸಾವಿರ ಮಂದಿಗೆ: ‘ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿದವರಿಗೆ ಅವರ ಹೆಸರಿಗೇ (94 ಸಿ) ಕೊಡಲಾಗುವುದು. ಬೆಂಗಳೂರಿನಲ್ಲಿ 10ಸಾವಿರ ಮಂದಿಗೆ ಶೀಘ್ರವೇ ಹಕ್ಕುಪತ್ರ ನೀಡಲಾಗುವುದು. ಇದನ್ನು ಇಡೀ ರಾಜ್ಯದಾದ್ಯಂತ ಮಾಡಲಾಗುವುದು’ ಎಂದು ತಿಳಿಸಿದರು.

‘ಕೋಳಿ ಫಾರಂ ನಿರ್ಮಾಣಕ್ಕೆ ಭೂಪರಿವರ್ತನೆಗಾಗಿ ಗ್ರಾಮೀಣರು ಅಲೆದಾಡುತ್ತಿದ್ದರು. ಈಗ ಆ ಗೊಡವೆ ಇಲ್ಲ. ಏಕೆಂದರೆ, ಕೋಳಿ ಸಾಕಣೆಯನ್ನೂ ಕೃಷಿಯ ವ್ಯಾಪ್ತಿಗೆ ತರಲಾಗಿದೆ. ಹೀಗಾಗಿ, ಭೂಪರಿವರ್ತನೆ ಅಥವಾ ಅನುಮತಿ ಬೇಕಿಲ್ಲ. ನೇರವಾಗಿ ಕೋಳಿ ಫಾರಂ ಮಾಡಬಹುದು’ ಎಂದೂ ಪ್ರಕಟಿಸಿದರು.

‘ಖಾತೆ ನೋಂದಣಿ ಪ್ರಕ್ರಿಯೆಗೆ ಹಿಂದೆ 30 ದಿನಗಳ ಸಮಯವಿತ್ತು. ಈಗ, ಅದನ್ನು ಕೇವಲ 7 ದಿನಗಳಿಗೆ ಇಳಿಸಲಾಗಿದೆ. ಅರ್ಜಿದಾರರ ಹೆಸರಿಗೆ ತ್ವರಿತವಾಗಿ ಮಾಡಿಕೊಡುವ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

ಪರಿಶಿಷ್ಟರಿಗೆ ಅವಕಾಶ:‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಮನೆ ಕಟ್ಟಲು ಬಹಳ ತೊಂದರೆ ಅನುಭವಿಸುತ್ತಿದ್ದರು. ಅವರು ಸಲ್ಲಿಸುವ ಅರ್ಜಿಯು ಅಧಿಕಾರಿಗಳನ್ನು ದಾಟಿ ನನ್ನ ಬಳಿಗೆ ಬಂದು ಅನುಮತಿ ದೊರೆಯುವುದಕ್ಕೆ ಎರಡು ವರ್ಷವೇ ಬೇಕಾಗುತ್ತಿತ್ತು. ಇದನ್ನು ತಪ್ಪಿಸಲು, ಜಿಲ್ಲಾಧಿಕಾರಿ ಮಟ್ಟದಲ್ಲೇ ಭೂಪರಿವರ್ತನೆಗೆ ಅವಕಾಶ ಕೊಡಲಾಗಿದೆ. ಇದು, 2 ಅಥವಾ 3 ಗುಂಟೆ ಜಾಗದಲ್ಲಿ ಮನೆ ಕಟ್ಟುವವರಿಗೆ ಅನ್ವಯವಾಗುತ್ತದೆ. ಆ ಮನೆಯನ್ನು ಬೇರೆಯವರಿಗೆ ಮಾರುವಂತಿಲ್ಲ. ಭೂಪರಿವರ್ತನೆಯನ್ನು 7 ದಿನಗಳಲ್ಲಿ ಮಾಡಿಕೊಡುವಂತೆ ನಿಯಮ ರೂಪಿಸಲಾಗುವುದು. ಶೀಘ್ರವೇ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು’ ಎಂದು ತಿಳಿಸಿದರು.

‘ಹಲೋ‌ ಕಂದಾಯ ಸಚಿವರೇ ಕಾರ್ಯಕ್ರಮದ ಮೂಲಕ 72 ಗಂಟೆಗಳಲ್ಲಿ ವೃದ್ಧಾಪ್ಯ ವೇತನವನ್ನು ಕಲ್ಪಿಲಾಗುತ್ತಿದೆ. ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುತ್ತಿದೆ’ ಎಂದರು.

ಉಳುವವರಿಗೇ ಜಮೀನು:‘ಜಿಲ್ಲೆಯಲ್ಲಿ 52 ವರ್ಷದಿಂದ ಉಳುಮೆ ಮಾಡಿದವರಿಗೆ ಹಕ್ಕುಪತ್ರ ಕೊಟ್ಟಿಲ್ಲ. ಅರಣ್ಯ ಹಾಗೂ ಕಂದಾಯ ಇಲಾಖೆಗಳ ಅಧಿಕಾರಿಗಳ ಜಗಳದಲ್ಲಿ ರೈತರು ಬಡವಾಗಿರುವುದು ಗಮನದಲ್ಲಿದೆ. ಜಮೀನು ಮಾಲೀಕರಿಗೆ ನೆರವಾಗಲು ನ್ಯಾಯಯುತ ನಿರ್ಧಾರ ಕೈಗೊಳ್ಳಲಾಗುವುದು. ಡೀಮ್ಡ್ ಫಾರೆಸ್ಟ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಉಳುಮೆ ಮಾಡುತ್ತಿರುವವರಿಗೇ ಆ ಜಮೀನು ಕೊಡಲಾಗುವುದು’ ಎಂದು ತಿಳಿಸಿದರು.

‘ಪ್ರತಿ ಗ್ರಾಮ ವಾಸ್ತವ್ಯದಲ್ಲೂ 40ರಿಂದ 50ಸಾವಿರ ಮಂದಿಗೆ ಒಂದಿಲ್ಲೊಂದು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದರು.

ಶಾಸಕ ಅನಿಲ್ ಚಿಕ್ಕಮಾದು, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.‍ಪೂರ್ಣಿಮಾ ಇದ್ದರು.

ಬಳಿಕ ಸಚಿವರು, ಕೆಂಚನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು. ಅಲ್ಲಿನ ಸರ್ಕಾರಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು.

‘ಅಮಾವಾಸ್ಯೆ’ಗೆ ಕೃತಕ ಕಾಲಿನ ‘ಬೆಳಕು’
ಸಚಿವರು, ಅಮಾವಾಸ್ಯೆ ಎಂಬ ವ್ಯಕ್ತಿಗೆ ಕೃತಕ ಕಾಲು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಸ್ವತಃ ತಾವೇ ಕೆಳಕ್ಕೆ ಕುಳಿತು ಕಾಲು ಜೋಡಿಸಿ ಗಮನಸೆಳೆದರು. ಅವರಿಗೆ, ವೇದಿಕೆಯಲ್ಲೇ ನಡೆಯುವ ಅಭ್ಯಾಸವನ್ನೂ ಮಾಡಿಸಿದರು. ಬಳಿಕ ಅವರಿಂದಲೇ ದೀಪ ಬೆಳಗಿಸಿ ಉದ್ಘಾಟನೆ ಮಾಡಿಸಿದರು.

‘ಸಚಿವರಿಂದ ನನಗೆ ಒಳ್ಳೆಯದಾಗಿದೆ. ಅವರಿಂದಾಗಿ ನನಗೆ ಕಾಲು ಸಿಕ್ಕಿದೆ. ಅದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುವೆ’ ಎಂದು ಕೃತಜ್ಞತೆ ಸಮರ್ಪಿಸಿದರು.

ಬಳಿಕ ಮಾತನಾಡಿದ ಸಚಿವರು, ‘ಗ್ರಾಮ ವಾಸ್ತವ್ಯದಿಂದಾಗಿ, ಅಮಾವಾಸ್ಯೆಯಂತಹ ಸಾವಿರಾರು ಮಂದಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುತ್ತಿದೆ. ಜಾಗೃತಿಯೂ ಮೂಡುತ್ತಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮವು ನನಗೆ ಪಾಠಶಾಲೆಯಾಗಿದೆ. ಬಹಳಷ್ಟು ಕಲಿಯುತ್ತಿದ್ದೇನೆ–ಅನುಭವ ಪಡೆಯುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT