ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಭತ್ತದ ಕೊಯ್ಲು ಶುರು, ಉತ್ತಮ ಬೆಲೆಯ ನಿರೀಕ್ಷೆ

Published 9 ಡಿಸೆಂಬರ್ 2023, 7:28 IST
Last Updated 9 ಡಿಸೆಂಬರ್ 2023, 7:28 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಭತ್ತದ ಕೊಯ್ಲು ಶುರುವಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಪ್ರಮುಖವಾಗಿ ಕೆ.ಆರ್. ನಗರ, ಹುಣಸೂರು, ನಂಜನಗೂಡು, ತಿ.ನರಸೀಪುರ, ಮೈಸೂರು ತಾಲ್ಲೂಕುಗಳಲ್ಲಿ ಪ್ರಮುಖವಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗಲಿಲ್ಲ. ತೀವ್ರ ಬರಗಾಲ ಪೀಡಿತವಾದ್ದರಿಂದ ವಾಡಿಕೆಯಷ್ಟು ನಾಟಿಯಾಗಿರಲಿಲ್ಲ. ಕಬಿನಿ ಅಚ್ಚುಕಟ್ಟು ಪ್ರದೇಶಕ್ಕೂ ತಿಂಗಳಲ್ಲಿ 15 ದಿನಗಳು ಮಾತ್ರವೇ ನಾಲೆಗಳಿಗೆ ನೀರು ಹರಿಸಲಾಗಿತ್ತು. ಇದರಲ್ಲೇ ಒಂದಷ್ಟು ಮಂದಿ ರೈತರು ಭತ್ತದ ಬೇಸಾಯ ಮಾಡಿದ್ದಾರೆ.

ಪ್ರತಿ ವರ್ಷ ಸರಾಸರಿ ಒಂದು ಲಕ್ಷ ಹೆಕ್ಟೇರ್‌ಗೂ ಜಾಸ್ತಿ ಭತ್ತವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಹೋದ ವರ್ಷ 1.06 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಕಲಾಗಿತ್ತು. ಈ ಬಾರಿ 76,950 ಹೆಕ್ಟೇರ್‌ ಮಾತ್ರವೇ ಬೆಳೆಯಲಾಗಿದೆ. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 30 ಸಾವಿರ ಹೆಕ್ಟೇರ್‌ ಕಡಿಮೆಯಾಗಿದೆ. ಕೆ.ಆರ್.ನಗರ, ಹುಣಸೂರು, ತಿ.ನರಸೀಪುರ ತಾಲ್ಲೂಕುಗಳಲ್ಲಿ ಭತ್ತದ ಕೊಯ್ಲು ಕಂಡುಬರುತ್ತಿದೆ.

ಐದು ಎಕರೆಯಲ್ಲಷ್ಟೆ: ‘ಈ ಬಾರಿ ನೀರಿನ ಕೊರೆಯಿಂದಾಗಿ ನಾವು 6 ಎಕರೆ ಖಾಲಿ ಬಿಟ್ಟೆವು. ಭತ್ತ ಹಾಕಲಿಲ್ಲ. ‘ಕಟ್ಟು ಪದ್ಧತಿ’ಯಲ್ಲಿ ನೀರು ಕೊಟ್ಟಿದ್ದರಿಂದ 5 ಎಕರೆಯಷ್ಟೆ ಬೆಳೆದಿದ್ದೇವೆ. ಈಗ ಕೊಯ್ಲಿಗೆ ಬಂದಿದೆ. ರೋಗ ಬಾಧೆ ಕಾಣಿಸಿಕೊಂಡಿದ್ದರಿಂದ, ಇಳುವರಿ ಕಡಿಮೆಯಾಗುವ ಆತಂಕವಿದೆ’ ಎಂದು ತಿ.ನರಸೀಪುರ ತಾಲ್ಲೂಕು ನೀಲಸೋಗೆ ರೈತ ಕೆ.ಎನ್.‌ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಸಲು ಕಡಿಮೆ ಇರುವುದರಿಂದ ಕೊಯ್ಲು ಯಂತ್ರಗಳಿಗೆ ತೊಂದರೆ ಆಗುವುದಿಲ್ಲ. ಮಾರುಕಟ್ಟೆಯಲ್ಲಿ ಸಣ್ಣ ಭತ್ತ ₹3 ಸಾವಿರ ಇದೆ. ‘ಜ್ಯೋತಿ’ ಭತ್ತಕ್ಕೆ ಸರಾಸರಿ ₹2,600 ಇದೆ. ಪ್ರದೇಶ ಕಡಿಮೆಯಾದ್ದರಿಂದ ಭತ್ತಕ್ಕೆ ಬೇಡಿಕೆ ಜಾಸ್ತಿಯಾಗಲಿದೆ. ಸರ್ಕಾರ ನೀಡುವ ಬೆಂಬಲ ಬೆಲೆ ಕಡಿಮೆ ಇರುವುದರಿಂದ ಖರೀದಿ ಕೇಂದ್ರಕ್ಕೆ ಹೆಚ್ಚಿನವರು ಕೊಡುವುದಿಲ್ಲ. ನಾನು ಕೆಲವು ವರ್ಷಗಳಿಂದ ರಾಜ್ಯ ಬೀಜ ನಿಗಮಕ್ಕೆ ಕೊಡುತ್ತೇವೆ. ಈ ಬಾರಿಯೂ ಉತ್ತಮ ದರ ನಿರೀಕ್ಷೆಯಲ್ಲಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಪರಿಹಾರ ನೀಡಬೇಕು: ‘ಮಳೆ ಇಲ್ಲದ ಕಾರಣ ಹಾಗೂ ನಾಲೆಗೆ ನೀರು ಹರಿಸುವ ಬಗ್ಗೆ ಖಚಿತ ಮಾಹಿತಿ ನೀಡಲು ಸರ್ಕಾರ ವಿಳಂಬ ಮಾಡಿದ್ದರಿಂದ ತಿ.ನರಸೀಪುರ ತಾಲ್ಲೂಕಿನ ಅನೇಕರು ಎಲ್ಲ ಜಮೀನಿನಲ್ಲೂ ಭತ್ತ ಹಾಕಲಿಲ್ಲ. ಕೆಲವೆಡೆ ಬೆಳೆದರೂ ನಾಲೆಯ ಕೊನೆಯವರೆಗೂ ನೀರು ತಲುಪದೆ ತೊಂದರೆಯಾಗಿದೆ. ಇದರಿಂದ ಅನೇಕ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಿ ನೆರವಾಗಬೇಕು’ ಎಂದು ರೈತ ಕೆಬ್ಬೆಹುಂಡಿ ಶಿವಕುಮಾರ್ ಒತ್ತಾಯಿಸಿದರು.

‘ಭತ್ತ ನೀರಾವರಿ ಬೆಳೆಯಾದ್ದರಿಂದ ಇಳುವರಿಯ ಮೇಲೆ ಯಾವುದೇ ಪರಿಣಾಮವಾಗಿರುವ ಬಗ್ಗೆ ವರದಿಯಾಗಿಲ್ಲ. ಭತ್ತದ ಬೆಳೆ ನಷ್ಟವಾಗಿರುವ ಬಗ್ಗೆಯೂ ವರದಿಯಾಗಿಲ್ಲ. ಇಳುವರಿ ಕಡಿಮೆಯಾಗಿರುವ ಬಗ್ಗೆಯೂ ಯಾವುದೇ ದೂರುಗಳು ಬಂದಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕೇಂದ್ರ ಸರ್ಕಾರವು 2023– 24ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸಾಮಾನ್ಯ ಭತ್ತವನ್ನು ಕ್ವಿಂಟಲ್‌ಗೆ ₹2,183 ನೀಡಿ ಖರೀದಿಸುವುದಾಗಿ ಹೇಳಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯೇ ಇದೆ. ಖರೀದಿಗೆ ಮಿತಿ ಇದೆ ಹಾಗೂ ಹಲವು ನಿಯಮಗಳನ್ನು ಹೇಳಲಾಗುತ್ತದೆ. ಆದ್ದರಿಂದ, ಖರೀದಿ ಕೇಂದ್ರ ಅವಲಂಬಿಸುವ ಅಗತ್ಯವೇ ಇಲ್ಲ. ಜಮೀನಿಗೇ ಬಂದು ಖರೀದಿಸಿಕೊಂಡು ಹೋಗುವ ದಲ್ಲಾಳಿಗಳಿಗೇ ಆದ್ಯತೆ ನೀಡಲಾಗುತ್ತಿದೆ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ.

ಈ ನಡುವೆ, ಬೆಂಬಲ ಬೆಲಯಲ್ಲಿ ಭತ್ತ ಖರೀದಿಗೆ ರೈತರ ನೋಂದಣಿಯೂ ಶುರುವಾಗಿಲ್ಲ, ಖರೀದಿಯೂ ಆರಂಭವಾಗಿಲ್ಲ!

ಬಿ.ಎಸ್. ಚಂದ್ರಶೇಖರ್‌
ಬಿ.ಎಸ್. ಚಂದ್ರಶೇಖರ್‌
ಕಳೆದ ವರ್ಷ 1,06,222 ಹೆಕ್ಟೇರ್‌ ಬೆಳೆ ಬೆಂಬಲ ಬೆಲೆಗಿಂತಲೂ ಮುಕ್ತ ಮಾರುಕಟ್ಟೆಯಲ್ಲೇ ಬೆಲೆ ಜಾಸ್ತಿ ಇನ್ನೂ ಉತ್ತಮ ಬೆಲೆಗೆ ಕಾಯುತ್ತಿರುವ ಕೆಲವರು
ಈ ವರ್ಷ ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಹಿತ– ಮಿತವಾದ ಪ್ರಮಾಣದಲ್ಲಿ ನೀರು ಕೊಟ್ಟಿರುವುದರಿಂದ ಉತ್ತಮ ಇಳುವರಿ ನಿರೀಕ್ಷಿಸಲಾಗುತ್ತಿದೆ
ಬಿ.ಎಸ್. ಚಂದ್ರಶೇಖರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಮೇವಿಗೆ ತೊಂದರೆ: ತಲೆನೋವು!
‘ತೀವ್ರ ಬರಗಾಲ’ಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ನಡೆಯುತ್ತಿರುವ ಭತ್ತದ ಕೊಯ್ಲುಗೆ ಯಂತ್ರಗಳನ್ನು ಬಳಸುತ್ತಿರುವುದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ! ಕೈಯಲ್ಲಿ ಕೊಯ್ಲು ಮಾಡಿದರೆ ಉತ್ತಮ ಮೇವು ಸಿಗುತ್ತದೆ. ಯಂತ್ರದಲ್ಲಿ ಕಟಾವು ಮಾಡಿದರೆ ಅದು ಹಾಳಾಗುತ್ತದೆ ಎಂಬುದು ಅವರ ಆತಂಕ. ‘ಭತ್ತವನ್ನು ಯಂತ್ರಗಳಲ್ಲಿ ಕಟಾವು ಮಾಡಿದರೆ ಮೇವು ಹಾಳಾಗುತ್ತದೆ. ಇದರಿಂದ ಮೇವಿನ ಕೊರತೆ ಎದುರಾಗುವುದನ್ನು ತಪ್ಪಿಸಬೇಕು ಎಂದು ಕೋರಲಾಗಿದೆ’ ಎಂದು ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನಾಗರಾಜ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT