ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ | ಯದುವೀರ್‌ ಎದುರು ಕಾಂಗ್ರೆಸ್‌ ಹುರಿಯಾಳು ಯಾರು?

ಮೈಸೂರು–ಕೊಡಗು: ಎಂ.ಲಕ್ಷ್ಮಣ, ಬಿ.ಜೆ. ವಿಜಯ್‌ ಕುಮಾರ್‌ ಹೆಸರು ಶಿಫಾರಸು, ಯತೀಂದ್ರ ಮುಂಚೂಣಿಗೆ
Published 16 ಮಾರ್ಚ್ 2024, 6:36 IST
Last Updated 16 ಮಾರ್ಚ್ 2024, 6:36 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೆಸರು ಘೋಷಣೆ ಆಗುತ್ತಿದ್ದಂತೆಯೇ, ಅವರಿಗೆ ಸ್ಪರ್ಧೆ ನೀಡುವ ಕಾಂಗ್ರೆಸ್‌ನ ಹುರಿಯಾಳು ಯಾರು ಮತ್ತು ಆ ಪಕ್ಷದವರ ಕಾರ್ಯತಂತ್ರ ಏನಾಗಿರಲಿದೆ ಎಂಬ ಚರ್ಚೆಗಳು ಶುರುವಾಗಿವೆ.

ಈ ಮೊದಲು ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್‌ ಯೋಚಿಸಿತ್ತು. ಯದುವೀರ್‌ ಅವರನ್ನು ಬಿಜೆಪಿ ಸೆಳೆದುಕೊಳ್ಳುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೆಸರು ಕೂಡ ಮತ್ತೆ ಮುಂಚೂಣಿಗೆ ಬಂದಿದೆ. ಆಗ, ಒಕ್ಕಲಿಗ ಸಮಾಜದವರೊಂದಿಗೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ವರ್ಗದವರಿಂದಲೂ ಬೆಂಬಲ ಸಿಗುತ್ತದೆ ಎಂಬ ನಿರೀಕ್ಷೆ ಹೈಕಮಾಂಡ್‌ನದ್ದಾಗಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ಈ ನಡುವೆ, ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್‌ಗೌಡ ಹೆಸರು ಕೂಡ ಕೇಳಿಬರುತ್ತಿದೆ. ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಕಣಕ್ಕಿಳಿಸಿದರೆ ಹೇಗೆ ಎಂಬ ಆಲೋಚನೆಯೂ ಪಕ್ಷದ ಮಟ್ಟದಲ್ಲಿ ಚರ್ಚೆಯಲ್ಲಿದೆ ಎನ್ನಲಾಗುತ್ತಿದೆ. ಈ ಮಧ್ಯೆ, ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ನಡೆಯುತ್ತಿದೆ. ಡಾ.ಶುಶ್ರುತ್‌ ಗೌಡ ಹೆಸರು ಸಹ ಚರ್ಚೆಯಲ್ಲಿದೆ. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತ ಎಂದು ಹೇಳಲಾಗುತ್ತಿದೆ.

ಒಕ್ಕಲಿಗ ಅಸ್ತ್ರ ಬಳಕೆ?: ಕ್ಷೇತ್ರದಲ್ಲಿ ಒಕ್ಕಲಿಗರು ನಿರ್ಣಾಯಕ ಪ್ರಮಾಣದಲ್ಲಿದ್ದಾರೆ. ಇಲ್ಲಿ ಸತತ ಎರಡು ಬಾರಿಗೆ ಗೆದ್ದಿದ್ದ ಬಿಜೆಪಿಯ ಪ್ರತಾಪ ಸಿಂಹ ಒಕ್ಕಲಿಗ ಸಮುದಾಯದವರು. ಅವರಿಗೆ ಟಿಕೆಟ್ ತಪ್ಪಿದೆ. ಅರಸು ಸಮಾಜಕ್ಕೆ ಸೇರಿದ ಯದುವೀರ್‌ ಅವರಿಗೆ ಬಿಜೆಪಿ ಮಣೆ ಹಾಕಿದೆ. ‘ಒಕ್ಕಲಿಗ ಸಮುದಾಯದವರಿಗೆ ಬಿಜೆಪಿ ಅನ್ಯಾಯ ಎಸಗಿದೆ’ ಎಂಬ ಅಂಶವನ್ನೇ ಇಟ್ಟುಕೊಂಡು ಪ್ರಚಾರ ನಡೆಸಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಇದಕ್ಕಾಗಿಯೇ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಹಲವು ಮಂದಿ ಆಕಾಂಕ್ಷಿಗಳಿದ್ದು, ಒಕ್ಕಲಿಗ ಸಮಾಜಕ್ಕೆ ಸೇರಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮತ್ತು ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಅವರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಯದುವೀರ್‌ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಕಾಂಗ್ರೆಸ್‌ನಿಂದಲೇ ಗೆದ್ದಿದ್ದರು. ಬಿಜೆಪಿಯಿಂದಲೂ ಒಮ್ಮೆ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ, ಅವರ ಮಗ ಹಾಗೂ ಹೊಸಮುಖ ಯದುವೀರ್‌ಗೆ ಬಿಜೆಪಿ ಮಣೆ ಹಾಕಿದೆ. ಸತತ 3ನೇ ಬಾರಿಯೂ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ರಾಜಪರಿವಾರದ ವ್ಯಕ್ತಿಯನ್ನು ಕಣಕ್ಕಿಳಿಸುತ್ತಿದೆ. ಇದಕ್ಕೆ ಪ್ರತಿಯಾಗಿ ‘ಒಕ್ಕಲಿಗಾಸ್ತ್ರ’ ಪ್ರಯೋಗಿಸಲು ಕಾಂಗ್ರೆಸ್‌ ಆದ್ಯತೆ ನೀಡಿದೆ ಎಂದು ತಿಳಿದುಬಂದಿದೆ. ಆ ಸಮಾಜದವರಿಗೆ ಟಿಕೆಟ್ ಕೊಟ್ಟು ಮತಗಳನ್ನು ಕ್ರೋಢೀಕರಿಸುವುದು ಆ ಪಕ್ಷದವರ
ಯೋಜನೆಯಾಗಿದೆ.

ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಿಜೆಪಿ (1)–ಜೆಡಿಎಸ್ (2) ಮೈತ್ರಿಕೂಟ ಒಟ್ಟು 3 ಕ್ಷೇತ್ರಗಳಲ್ಲಷ್ಟೆ ಗೆದ್ದಿದೆ. ಕಾಂಗ್ರೆಸ್‌ ಹೆಚ್ಚಿನ ಕ್ಷೇತ್ರಗಳಲ್ಲಿ ಅಂದರೆ 5ರಲ್ಲಿ ಗೆದ್ದಿದೆ. ಇದು ಲೋಕಸಭಾ ಚುನಾವಣೆಯಲ್ಲಿ ನೆರವಿಗೆ ಬರಲಿದೆ ಎಂಬ ವಿಶ್ವಾಸ ಕಾಂಗ್ರೆಸ್‌ನವರದಾಗಿದೆ.

ಎಂ.ಲಕ್ಷ್ಮಣ
ಎಂ.ಲಕ್ಷ್ಮಣ
ಬಿ.ಜೆ. ವಿಜಯ್‌ ಕುಮಾರ್
ಬಿ.ಜೆ. ವಿಜಯ್‌ ಕುಮಾರ್
ಡಾ.ಯತೀಂದ್ರ ಸಿದ್ದರಾಮಯ್ಯ
ಡಾ.ಯತೀಂದ್ರ ಸಿದ್ದರಾಮಯ್ಯ

- ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತಿಷ್ಠೆಯ ಕ್ಷೇತ್ರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಬಲ ಜಾಸ್ತಿ ಮುಖ್ಯಮಂತ್ರಿ ನಿರ್ಧಾರಕ್ಕೆ ಮನ್ನಣೆ ಸಾಧ್ಯತೆ

ರಾಜವಂಶಸ್ಥ–ಸಾಮಾನ್ಯ ಅಭ್ಯರ್ಥಿ ನಡುವಿನ ಸ್ಪರ್ಧೆ

‘ಪ್ರತಾಪ ಸಿಂಹಗೆ ಟಿಕೆಟ್‌ ಸಿಕ್ಕಿದ್ದರೆ ಅವರ ವಿರುದ್ಧ ಮಾತನಾಡಲು ಟೀಕೆ–ಟಿಪ್ಪಣಿಗಳನ್ನು ಮಾಡಲು ಹಲವು ವಿಷಯಗಳಿದ್ದವು. ಸಂಸದರ ವಿರೋಧಿ ಅಲೆಯೂ ಸಹಕಾರಿಯಾಗಿತ್ತು. ಆದರೆ ಬಿಜೆಪಿಯು ಕಾರ್ಯತಂತ್ರ ಬದಲಿಸಿ ರಾಜವಂಶಸ್ಥಗೆ ಟಿಕೆಟ್ ಕೊಟ್ಟಿರುವುದರಿಂದ ನಾವೂ ಕಾರ್ಯತಂತ್ರವನ್ನು ಬದಲಿಸಿಕೊಳ್ಳಬೇಕಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ರಾಜ್ಯ ಸರ್ಕಾರವು ಮೈಸೂರು–ಕೊಡಗುಗೆ ನೀಡಿದ ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿಳಿಸಬೇಕಾಗಿದೆ. ಸಹಜವಾಗಿಯೇ ಜಾತಿಯ ಅಸ್ತ್ರವನ್ನೂ ಪ್ರಯೋಗಿಸಬೇಕಾಗುತ್ತದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು. ‘ಪ್ರತಾಪಗೆ ಟಿಕೆಟ್‌ ವಂಚಿಸುವ ಮೂಲಕ ನಮ್ಮ ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿದೆ’ ಎಂಬ ಒಕ್ಕಲಿಗ ಸಮಾಜದಲ್ಲಿರುವ ಅಸಮಾಧಾನವನ್ನು ಮತವಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನವನ್ನು ಪಕ್ಷ ಮಾಡಲಿದೆ. ಜೊತೆಗೆ ರಾಜವಂಶಸ್ಥ–ಸಾಮಾನ್ಯ ಅಭ್ಯರ್ಥಿ ನಡುವಿನ ಹೋರಾಟವೂ ಇದಾಗಲಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT