ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಹಂಚಿದ್ದು ರೇಪ್‌ಗಿಂತಲೂ ದೊಡ್ಡ ಅಪರಾಧವೇ?: HDKಗೆ ಸಿದ್ದರಾಮಯ್ಯ ತಿರುಗೇಟು

Published 25 ಮೇ 2024, 7:18 IST
Last Updated 25 ಮೇ 2024, 7:18 IST
ಅಕ್ಷರ ಗಾತ್ರ

ಮೈಸೂರು: ‘ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೊಗಳನ್ನು ಹಂಚುವುದು ಸರಿಯೇ?’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ತಿರುಗೇಟು ನೀಡಿದರು.

‘ಅತ್ಯಾಚಾರಕ್ಕಿಂತ ಅದರ ವಿಡಿಯೊ ಹಂಚಿದ್ದು ದೊಡ್ಡ ಅಪರಾಧ ಎಂದು ಯಾವ ಕಾನೂನಿನಲ್ಲಿದೆ ಹೇಳಿ? ಕುಮಾರಸ್ವಾಮಿ ಸೆಕ್ಷನ್ ಹೇಳಿದ್ದಾರಾ? ಅದು ಭಾರತೀಯ ದಂಡ ಸಂಹಿತೆಯಲ್ಲಿ ಇದೆಯಾ ಅಥವಾ ಅವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ, ಹೇಳಿ?’ ಎಂದು ಕೇಳಿದರು.

‘ಹಾಗೆಂದು, ವಿಡಿಯೊ ಹಂಚಿದ್ದನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ವಿಡಿಯೊ ಹಂಚಿದ್ದು ಅತ್ಯಾಚಾರಕ್ಕಿಂತಲೂ ಮಹಾ ಅಪರಾಧ ಎಂದು ಹೇಳುವುದು ಸರಿಯಲ್ಲ. ದಿಕ್ಕು ತಪ್ಪಿಸುವುದು ಸರಿಯಲ್ಲ’ ಎಂದರು.

‘ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ತಡವಾಗಿ ಪತ್ರ ಬಂತು’ ಎಂಬ ಬಿಜೆಪಿಯವರ ಸಮರ್ಥನೆಗೆ ಪ್ರತಿಕ್ರಿಯಿಸಿದ ಅವರು, ‘ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಷ್ಟೆ. ನಾನು 15 ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಅದಕ್ಕೆ ಪ್ರತಿಕ್ರಿಯೆಯೇ ಬಂದಿಲ್ಲ. ನಾನು ಪತ್ರ ಬರೆದದ್ದು ತಡವೇ ಆಗಿದೆ ಎಂದುಕೊಳ್ಳೋಣ, ಬರೆದ ಮೇಲಾದರೂ ಕ್ರಮ ಕೈಗೊಂಡಿಲ್ಲವೇಕೆ? ಸುಮ್ಮನೆ ಕಾಲಹರಣ ಮಾಡುವುದನ್ನು ಬಿಡಬೇಕು’ ಎಂದು ಹೇಳಿದರು.

ರಾಕೇಶ್ ಸಿದ್ದರಾಮಯ್ಯ ಸಾವಿನ ವಿಚಾರ ಪ್ರಸ್ತಾಪಿಸಿರುವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ನನ್ನ ಮಗ ಸತ್ತು 8 ವರ್ಷಗಳಾಗಿವೆ. ಈಗ ಆ ವಿಚಾರವನ್ನು ಬೇರ‍್ಯಾವುದಕ್ಕೋ ಜೋಡಿಸಿ ಮಾತನಾಡುವುದು ಮೂರ್ಖತನ. ಕುಮಾರಸ್ವಾಮಿ ಅಣ್ಣನ ಮಗ ಅತ್ಯಾಚಾರ ಮಾಡಿ ಓಡಿ ಹೋಗಿದ್ದಾನೆ. ಅದಕ್ಕೂ– 2016ರಲ್ಲಿ ಸತ್ತು ಹೋದ ರಾಕೇಶ್‌ ವಿಚಾರಕ್ಕೂ ಏನು ಸಂಬಂಧ’ ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ಲಿಂಗೇಶ್‌–ನವೀನ್‌ಗೌಡ ಆಡಿಯೊ: ಚರ್ಚೆ

ಹಾಸನ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದ ಆರೋಪಿ ನವೀನ್‌ಗೌಡ ಹಾಗೂ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌. ಲಿಂಗೇಶ್‌ ಅವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾತನಾಡಿರುವ ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲಿಂಗೇಶ್‌ ಅವರು ಚುನಾವಣೆಯಲ್ಲಿ ಬೇಲೂರು ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ‘ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಆರೋಪಿ ನವೀನ್‌ ಗೌಡನನ್ನು ಬಂಧಿಸಬೇಕು’ ಎಂದು ಈಚೆಗೆ ಅವರು ಪತ್ರಿಕಾಗೋಷ್ಠಿಯಲ್ಲಿ
ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ಆಡಿಯೊ ಹೊರಬಿದ್ದಿದೆ.

ಕಾಂಗ್ರೆಸ್ ಕಾರ್ಯಕರ್ತ‌ ಎನ್ನಲಾಗಿರುವ ನವೀನ್‌ಗೌಡ, ಜೆಡಿಎಸ್ ನಾಯಕರ ಜೊತೆ ಸಂಬಂಧ ಹೊಂದಿದ್ದ ಎನ್ನುವ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಈ ಆಡಿಯೊದಲ್ಲಿ ವಿಧಾನಸಭೆ ಚುನಾವಣೆ ಬಳಿಕ ಸೋಲಿನ ಬಗ್ಗೆ ನವೀನ್‌ಗೌಡ- ಲಿಂಗೇಶ್ ಸಂಭಾಷಣೆ ನಡೆದಿದೆ ಎನ್ನಲಾಗಿದೆ.

‘ಅಣ್ಣಾ ನಿಮಗಾಗಿ ಈ ಪಕ್ಷದಲ್ಲಿದ್ದೇವೆ. ಸಂಸದ ಪ್ರಜ್ವಲ್ ನಿಮ್ಮ ವಿರುದ್ಧವಿರುವ ನಟರಾಜ್ ಎಂಬುವವರ ಜೊತೆ ಓಡಾಡುತ್ತಿದ್ದಾರೆ’ ಎಂದು ನವೀನ್ ಗೌಡ, ಲಿಂಗೇಶ್‌ ಅವರಿಗೆ ದೂರು ಹೇಳಿದ್ದಾನೆ.

ಅದಕ್ಕೆ ಉತ್ತರಿಸಿರುವ ಕೆ.ಎಸ್‌. ಲಿಂಗೇಶ್‌, ‘ಹೌದು, ನಾನು ಮತ್ತೆ ಗೆದ್ದರೆ ನಾನೇ ಇರ್ತೀನಿ. ಹಾಗಾಗಿ ಸೋಲಲಿ ಎಂದು ಕೆಲವರು ಓಡಾಡಿದ್ರು. ನಾನು ಎಂಪಿಗೆ ಹೇಳಿದ್ರೂ ಕೇಳಲಿಲ್ಲ. ಅವರಿಗೆ ನಟರಾಜೇ ಬೇಕಂತೆ’ ಎಂದು ಹೇಳಿದ್ದಾರೆ.

ರಾಕೇಶ್‌ ಸಾವಿನ ಬಗ್ಗೆ ಏಕೆ ತನಿಖೆಯಾಗಿಲ್ಲ: ಎಚ್‌ಡಿಕೆ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ರಾಕೇಶ್‌ ವಿದೇಶಕ್ಕೆ ಹೋಗಿ, ಅಲ್ಲಿಯೇ ಮೃತಪಟ್ಟ ಕುರಿತು ಏಕೆ ತನಿಖೆಯಾಗಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

‘ಅತ್ಯಾಚಾರದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೇ ವಿದೇಶಕ್ಕೆ ಕಳಿಸಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಸುದ್ದಿಗಾರರಿಗೆ ಶನಿವಾರ
ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರ ಮಗ ಯಾವ ಕೆಲಸಕ್ಕಾಗಿ ವಿದೇಶಕ್ಕೆ ಹೋಗಿದ್ದರು? ಯಾರ ಅನುಮತಿ ಪಡೆದಿದ್ದರು? ರಾಕೇಶ್‌ ಜತೆ ಆಗ ಯಾರ‍್ಯಾರು ಇದ್ದರು’ ಎಂದು ಕೇಳಿದರು.

‘ಮಕ್ಕಳು ಎಲ್ಲವನ್ನೂ ತಂದೆ, ತಾಯಿ, ಕುಟುಂಬದವರ ಬಳಿ ಹೇಳಿಯೇ ಹೋಗುತ್ತಾರಾ? ಯಾರಿಗೆ ಆದರೂ ನೋವು ನೋವೆ. ನೋವಿನಲ್ಲೂ ರಾಜಕೀಯ ಮಾಡಬಾರದು’ ಎಂದರು.

‘ರಾಜತಾಂತ್ರಿಕ ಪಾಸ್‌ಪೋರ್ಟ್ ಬಗ್ಗೆ ಇವರೆಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ. ಈಗ ಪ್ರಜ್ವಲ್ ವಾಪಸ್ ಕರೆದುಕೊಂಡು ಬರಲು ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ. ತಕ್ಷಣಕ್ಕೆ ಅದು ಸಾಧ್ಯವಿಲ್ಲ’ ಎಂದು ಹೇಳಿದರು.

‘ಈ ಪ್ರಕ್ರಿಯೆಗಳು ತಡ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣ ವಾಪಸ್‌ ಬಂದು ತನಿಖೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ಸಂದೇಶ ಕೊಟ್ಟಿದ್ದೇವೆ. ದೇವೇಗೌಡರು ಕೂಡ ಕೊನೆಯ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ದೇವೇಗೌಡರು ಮಾಧ್ಯಮದ ಮೂಲಕ ನೀಡಿದ ಎಚ್ಚರಿಕೆ ಕುರಿತು ಸಿದ್ದರಾಮಯ್ಯ‌ ಹಗುರವಾಗಿ ಮಾತನಾಡಿದ್ದಾರೆ. ದೀರ್ಘ ಕಾಲ ದೇವೇಗೌಡರ ಜತೆ ಇದ್ದ ಸಿದ್ದರಾಮಯ್ಯ ಅವರಿಗೆ ಅವರು ಏನು ಎಂಬುದು ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದರು.

ದಲ್ಲಾಳಿ ಜತೆ ಮಾತನಾಡಿದ್ದು ಏಕೆ?: ‘ಸಿ.ಡಿ ಶಿವು ತನ್ನ ಪಾತ್ರ ಇಲ್ಲ ಎನ್ನುತ್ತಾರೆ. ಆದರೆ, ದಲ್ಲಾಳಿ ಶಿವರಾಮೇಗೌಡ ಜತೆ ಮಾತನಾಡಿದ್ದು ಏಕೆ? ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ. ಶಿವಕುಮಾರ್‌ ಏಕೆ ಮಾತನಾಡಿದರು. ತನ್ನ ಪಾತ್ರವೇ ಇಲ್ಲ ಎನ್ನುವವರು ಏನಾದರೂ ಸಾಕ್ಷ್ಯ ಇದೆಯಾ ಎಂದು ಕೇಳಿದ್ದು ಏಕೆ’ ಎಂದು ಹರಿಹಾಯ್ದರು.

‘ಎಕ್ಸ್‌’ನಲ್ಲೂ ವಾಗ್ದಾಳಿ: ‘ಪೆನ್‌ ಡ್ರೈವ್‌ ಹಂಚಿದ್ದು ದೊಡ್ಡ ಅಪರಾಧವಾ’ ಎಂಬ ಸಿದ್ದರಾಮಯ್ಯ ಪ್ರಶ್ನೆ ಕುರಿತು ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ‘ಮೊದಲು ಕಾನೂನು ಓದಿ. ನಿಮ್ಮದೇ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ಪತ್ರಿಕಾ ಪ್ರಕಟಣೆಯನ್ನು ಗಮನಿಸಿ. ದಯವಿಟ್ಟು ವಕೀಲಿಕೆ ಮಾಡುವುದನ್ನು ಬಿಟ್ಟುಬಿಡಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT