ಮೈಸೂರು: ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಮರು ಸ್ಥಾಪಿಸಬೇಕು, ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯತ್ವ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಲ್ಲಿ ನಡೆದ 5ನೇ ರಾಜ್ಯ ಮಟ್ಟದ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಮಂಡಿಸಲಾಯಿತು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸಮ್ಮೇಳನದಲ್ಲಿ, ಪತ್ರಿಕಾ ವಿತರಕರ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು.

ಪತ್ರಿಕಾ ವಿತರಕರು ಅಕಾಲಿಕ ಮರಣ ಹೊಂದಿದರೆ ಕುಟುಂಬದವರಿಗೆ ₹10 ಲಕ್ಷದವರೆಗೆ ಪರಿಹಾರ ನೀಡಬೇಕು. 60 ವರ್ಷ ವಯಸ್ಸು ಮೀರಿದ ವಿತರಕರಿಗೆ ಕನಿಷ್ಠ ₹5ಸಾವಿರ ಪಿಂಚಣಿ ಕೊಡಬೇಕು. ಕುಟುಂಬದವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಮೈಸೂರಿನ ಕಾಡಾ ಕಚೇರಿ ಹಿಂಭಾಗ ಪತ್ರಿಕಾ ವಿತರಣಾ ಕೇಂದ್ರ ನಿರ್ಮಿಸಬೇಕು ಹಾಗೂ ಎಂಡಿಎನಿಂದ ಸಿಎ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಲಾಯಿತು.

'ಸಂಕಷ್ಟದಲ್ಲಿ ನೆರವಾಗಲು ಇದು ಅಗತ್ಯ'

ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲಾಗಿತ್ತು. ಅದನ್ನು ಮರು ಸ್ಥಾಪಿಸಬೇಕು. ಸಂಕಷ್ಟಕ್ಕೆ ಸಿಲುಕುವ ವಿತರಕರ ನೆರವಿಗೆ ಬರಲು ಇದು ಅಗತ್ಯವಾಗಿದೆ. ನಮ್ಮ ದುಃಖ–ದುಮ್ಮಾನಗಳನ್ನು ಮಂಡಿಸಲು ಹಾಗೂ ಸರ್ಕಾರದ ಗಮನಕ್ಕೆ ತರಲು ಅನುವಾಗುವಂತೆ ಮಾಧ್ಯಮ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ದೊರಕಿಸಬೇಕು. ಪತ್ರಿಕಾ ವಿತರಕರ ದಿನವಾದ ಸೆ.4ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಪದಾಧಿಕಾರಿಗಳಿಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ‘ಪತ್ರಿಕಾ ವಿತರಕರು ರಾಜ್ಯದ ಆರ್ಥಿಕತೆಗೂ ಕೊಡುಗೆ ನೀಡುತ್ತಿದ್ದಾರೆ. ಕೊಳೆಗೇರಿಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಅವರು ಮುದ್ರಣ ಮಾಧ್ಯಮದ ಬೆನ್ನುಮೂಳೆ ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲವೂ ಆಗಿದ್ದಾರೆ. ಈ ಕೆಲಸ ಕೀಳಲ್ಲ. ಪತ್ರಿಕೆ ಓದುವವರ ಪಾಲಿಗೆ ನೀವು ಪ್ರಾತಃಸ್ಮರಣೀಯರು’ ಎಂದು ಹೇಳಿದರು.

'ಕೆಲಸದ ಬಗ್ಗೆ ತೃಪ್ತಿ ಇರಲಿ’

‘ಪತ್ರಿಕಾ ವಿತರಕರಲ್ಲಿ ಹಲವರು ಮಕ್ಕಳನ್ನು ಉನ್ನತ ಸ್ಥಾನಕ್ಕೆ ಬೆಳೆಸಿದ್ದಾರೆ. ಹೀಗಾಗಿ, ಈ ಕೆಲಸದ ಬಗ್ಗೆ ತೃಪ್ತಿ ಇರಲಿ. ಪತ್ರಿಕಾ ವಿತರಕರನ್ನು ಮೊದಲು ಗುರುತಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ನಮ್ಮನ್ನು ಯಾರೂ ಕೇಳುವವರಿಲ್ಲ ಎಂದು ಭಾವಿಸಬೇಡಿ. ನಿಮಗೆ ವಿಮೆಯೇ ಇರಲಿಲ್ಲ. ಈಗ ಸಿಗುತ್ತಿದೆ. ಷರತ್ತುಗಳನ್ನು ಸರಳಗೊಳಿಸಿ ಎಲ್ಲರಿಗೂ ಸಿಗುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಯಾವುದೇ ಕಾರಣಕ್ಕೂ ನೀವು ಒಬ್ಬಂಟಿಯಲ್ಲ. ಸರ್ಕಾರ ಹಾಗೂ ಪತ್ರಕರ್ತರ ಸಂಘ ನಿಮ್ಮೊಂದಿಗಿದೆ. ಕೀಳರಿಮೆ ಸಲ್ಲದು’ ಎಂದು ತಿಳಿಸಿದರು.

'ಈಡೇರಿಸಲು ಕ್ರಮ’

‘ಸಂಘಟನೆ ಮೊದಲ ಹೆಜ್ಜೆ. ಅದರ ಹಿಂದೆಯೇ ನಿಮ್ಮ ಹಕ್ಕುಗಳಿಗೂ ಜೀವ ಬರುತ್ತದೆ. ಬಳಿಕ ಹಕ್ಕುಗಳನ್ನು ಪಡೆದುಕೊಳ್ಳಬಹುದು. ಜೊತೆಗೆ ಕೆಲಸದ ಅಭದ್ರತೆಯೂ ಕಡಿಮೆಯಾಗುತ್ತದೆ. ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿಯವರ ಗಮನಕ್ಕೆ ತಂದು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃಷ್ಣಪ್ಪ, ಗುರುಸ್ವಾಮಿ, ಕಾಳಿಹುಂಡಿ ಶಿವಕುಮಾರ್ ಸೇರಿದಂತೆ ಆರು ಮಂದಿ ಓದುಗರನ್ನು ಸನ್ಮಾನಿಸಲಾಯಿತು. ಪತ್ರಿಕಾ ವಿತರಕ ಎಂ.ಎನ್. ನಾಗರಾಜ್ ಅವರಿಗೆ ಸಮ್ಮೇಳನದ ‘ಅಧ್ಯಕ್ಷ ಸ್ಥಾನದ ಗೌರವ’ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಜವರಪ್ಪ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ತುಮಕೂರಿನ ಲಕ್ಷ್ಮೀನರಸಪ್ಪ ಅವರನ್ನು ಅಭಿನಂದಿಸಲಾಯಿತು.

ಪೇಪರ್ ಸುಬ್ಬಣ್ಣ ಸೇರಿದಂತೆ ಅಗಲಿದ ಪತ್ರಿಕಾ ವಿತರಕರು, ಕೆ.ಬಿ. ಗಣಪತಿ ಸೇರಿದಂತೆ ಮೃತ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಎಸ್. ಹೋಮದೇವ ಹಾಗೂ ಪದಾಧಿಕಾರಿಗಳು, ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಮಂದಿ ಪತ್ರಿಕಾ ವಿತರಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.