ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶ: ‘ಶಾರದಾ ನೆಲೆ’ಯ ತಾಯವ್ವಗೆ ಡಿಸ್ಟಿಂಕ್ಷನ್‌

Published 11 ಏಪ್ರಿಲ್ 2024, 7:13 IST
Last Updated 11 ಏಪ್ರಿಲ್ 2024, 7:13 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕೃಷ್ಣಮೂರ್ತಿಪುರಂನಲ್ಲಿರುವ ‘ಶಾರದಾ ನೆಲೆ’ಯಲ್ಲಿ ಆಶ್ರಯ ಪಡೆದು ವ್ಯಾಸಂಗ ಮಾಡಿದ ತಾಯವ್ವ ಲಕ್ಷ್ಮಪ್ಪ ಧನಗರ್‌ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 94.88ರಷ್ಟು (600ಕ್ಕೆ 569) ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಗಮನ ಸೆಳೆದಿದ್ದಾರೆ.

ಅವರು ಮುಧೋಳ ತಾಲ್ಲೂಕು ಚಿಕ್ಕೂರು ಗ್ರಾಮದವರು. ಅವರಿಗೆ ತಾಯಿ ರೇಣುಕಾ ಮಾತ್ರವೇ ಇದ್ದು, ಹಿಂದೂ ಸೇವಾ ಪ್ರತಿಷ್ಠಾನದಿಂದ ನಡೆಯುತ್ತಿರುವ ‘ನೆಲೆ’ ಫೌಂಡೇಶನ್‌ನ ‘ಶಾರದಾ ನೆಲೆ’ ಉಚಿತ ವಿದ್ಯಾರ್ಥಿನಿ ನಿಲಯದಲ್ಲಿದ್ದುಕೊಂಡು ಲಕ್ಷ್ಮೀಪುರಂನ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಕಾಲೇಜಿನ ಟಾಪರ್‌ ಕೂಡ ಎನಿಸಿದ್ದಾರೆ. ಬಡತನವು ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಲಾರದು ಎಂದು ನಿರೂಪಿಸಿದ್ದಾರೆ.

ಕನ್ನಡದಲ್ಲಿ 99, ಇಂಗ್ಲಿಷ್‌ನಲ್ಲಿ 84, ಇತಿಹಾಸದಲ್ಲಿ 96, ಅರ್ಥಶಾಸ್ತ್ರದಲ್ಲಿ 98, ಸಮಾಜಶಾಸ್ತ್ರದಲ್ಲಿ 98, ರಾಜಕೀಯ ವಿಜ್ಞಾನದಲ್ಲಿ 94 ಅಂಕಗಳನ್ನು ಗಳಿಸಿ ಸಾಧನೆ ತೋರಿದ್ದಾರೆ. ವಿದ್ಯಾರ್ಥಿನಿಯು ದೂರದ ಬಾಗಲಕೋಟೆಯಿಂದ ಬಂದು ಮೈಸೂರಿನಲ್ಲಿದ್ದುಕೊಂಡು ಉತ್ತಮ ಸಾಧನೆ ತೋರಿರುವುದು ನೆಲೆ ಫೌಂಡೇಶನ್‌ ಹಾಗೂ ಶಾರದಾ ನೆಲೆ ಹಾಸ್ಟೆಲ್‌ನವರಿಗೆ ಹೆಮ್ಮೆಯ ಭಾವ ಮೂಡಿಸಿದೆ.

3ನೇ ತರಗತಿಯಲ್ಲಿದ್ದಾಗಲೇ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡ ತಾಯವ್ವ ಅವರ ತಾಯಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದಾರೆ. ಪರಿಚಯಸ್ಥರ ಮೂಲಕ ತಮ್ಮ ಮಗಳನ್ನು ಶಾರದಾ ನೆಲೆಗೆ ಸೇರಿಸಿದ್ದರು. ತಾಯವ್ವ ಅವರ ತಂಗಿ ಗೀತಾ ಇದೇ ಫೌಂಢೇಶನ್‌ ನಡೆಸುತ್ತಿರುವ ಶಾರದಾ ನೆಲೆಯಲ್ಲೇ ಇದ್ದುಕೊಂಡು ಓದುತ್ತಿದ್ದಾರೆ. ತಮ್ಮ ಸಿದ್ಧಾರ್ಥ ಇದೇ ಪ್ರತಿಷ್ಠಾನದ ಗಂಡು ಮಕ್ಕಳ ‘ಅಜಿತ ನೆಲೆ’ ಹಾಸ್ಟೆಲ್‌ನಲ್ಲಿ ಕಲಿಯುತ್ತಿದ್ದಾರೆ.

1ರಿಂದ 8ನೇ ತರಗತಿವರೆಗೆ ಚಿಕ್ಕೂರು ಗ್ರಾಮದಲ್ಲೇ ಓದಿದ ತಾಯವ್ವ, 10ನೇ ತರಗತಿವರೆಗೆ ಬಾದಾಮಿ ತಾಲ್ಲೂಕಿನ ನೀರಬೂದಿಹಾಳದಲ್ಲಿ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲಿತಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಶೇ 94.88 ಅಂಕ ಗಳಿಸಿ ಶಾಲೆಯ ಟಾಪರ್‌ ಎನಿಸಿದ್ದರು.

‘ಶಾರದಾ ನೆಲೆ ಹಾಸ್ಟೆಲ್‌ನಲ್ಲಿ ಮನೆಯವರಿಗಿಂತಲೂ ಚೆನ್ನಾಗಿ ನೋಡಿಕೊಂಡರು. ಸ್ಪೋಕನ್‌ ಇಂಗ್ಲಿಷ್‌ ಮೊದಲಾದ ತರಬೇತಿಯನ್ನೂ ನೀಡುತ್ತಿದ್ದರು. ಅವರ ನೆರವಿನಿಂದ ನಾನು ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯವಾಯಿತು. ಬಿಎ ವ್ಯಾಸಂಗ ಮಾಡಬೇಕು. ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು ಐಎಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇದೆ’ ಎಂದು ತಾಯವ್ವ ಪ್ರತಿಕ್ರಿಯಿಸಿದರು.

‘ತಾಯವ್ವ ಸಾಧನೆ ಮಾದರಿಯಾಗಿದೆ. ಅವರನ್ನು ನಾವೇ ಬೆಂಗಳೂರಿನಲ್ಲಿ ಅಬಲಾಶ್ರಮಕ್ಕೆ ಸೇರಿಸುತ್ತೇವೆ. ಅಲ್ಲಿ ಯುಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನೂ ನೀಡುತ್ತಾರೆ. ಉತ್ತಮ ಶಿಕ್ಷಣ ದೊರೆಯಲೆಂಬ ಉದ್ದೇಶದಿಂದ ಬೆಂಗಳೂರಿನ ಸರ್ಕಾರಿ ಪದವಿ ಕಾಲೇಜಿಗೆ ಸೇರಿಸಲಾಗುವುದು’ ಎಂದು ನೆಲೆ ಫೌಂಡೇಶನ್‌ನವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT