ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಮೋದಿ ಆಳ್ವಿಕೆ ವಿರುದ್ಧ ಜನತಾ ಆರೋಪ‌ ಪಟ್ಟಿ’ ಬಿಡುಗಡೆ

Published 19 ಏಪ್ರಿಲ್ 2024, 7:33 IST
Last Updated 19 ಏಪ್ರಿಲ್ 2024, 7:33 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನಾಂದೋಲನಗಳ ಮಹಾಮೈತ್ರಿ (ಜೆಎಂಎಂ) ಮತ್ತು ಇತರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ನಗರದಲ್ಲಿ ಗುರುವಾರ ‘ಮೋದಿ ಆಳ್ವಿಕೆಯ ವಿರುದ್ಧ ಜನತಾ ಆರೋಪ‌ ಪಟ್ಟಿ’ ಕಿರುಹೊತ್ತಗೆ ಬಿಡುಗಡೆ ಮಾಡಿದರು.

ಜನತಂತ್ರ ಪ್ರಯೋಗ ಶಾಲೆ (ಜಿಪಿಎಸ್‌), ಸಿಟಿಜನ್‌ ಫಾರ್‌ ಡೆಮಾಕ್ರಸಿ (ಸಿಎಫ್‌ಡಿ), ಕರ್ನಾಟಕ ರಾಜ್ಯ ರೈತ ಸಂಘ, ಎದ್ದೇಳು ಕರ್ನಾಟಕ, ಗ್ರಾಮೀಣ ಕೂಲಿಕಾರರ ಸಂಘ, ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆಗಳ ಸದಸ್ಯರು ಭಾಗಿಯಾಗಿ, ‘ಫ್ಯಾಸಿಸ್ಟ್, ಕೋಮುವಾದಿ, ಸರ್ವಾಧಿಕಾರಿ ಮೋದಿ ಸರ್ಕಾರವನ್ನು 2024ರ ಚುನಾವಣೆಯಲ್ಲಿ ಕಿತ್ತೊಗೆಯಲು 23 ಕಾರಣಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ’ ಎಂದು ತಿಳಿಸಿದರು.

ಜೆಎಂಎಂ ಸಂಘಟನಾ ಕಾರ್ಯದರ್ಶಿ ಉಗ್ರ ನರಸಿಂಹೇಗೌಡ ಮಾತನಾಡಿ, ‘ಕರಾಳ ಕೃಷಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ, ಕಾರ್ಮಿಕರ ಹಕ್ಕು ನಿರಾಕರಣೆಯ ಸಂಹಿತೆಗಳು, ಎಪಿಎಂಸಿ ಕಾಯ್ದೆ ತಿದ್ದುಪಡಿಯಂಥ ಜನ, ರೈತ, ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ. ಮತ್ತೊಮ್ಮೆ ಅವರಿಗೆ ಅಧಿಕಾರ ನೀಡದಂತೆ ಜನರು ಎಚ್ಚೆತ್ತುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ನಗರದಲ್ಲಿ ನಡೆದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಧರ್ಮ ರಕ್ಷಣೆಯೇ ಮೋದಿ ಗ್ಯಾರಂಟಿ ಎಂದಿದ್ದಾರೆ. ಇವರ ಬಲವರ್ಧನೆಯು ಸಂವಿಧಾನಕ್ಕೆ ಆಪತ್ತು. ಕೇಂದ್ರ ಸರ್ಕಾರವು ವಿವಿಧ ಕಾಯ್ದೆ, ಕಾನೂನುಗಳ ಮೂಲಕ ಈಗಾಗಲೇ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು, ಇದರ ತೀವ್ರತೆ ಮತ್ತಷ್ಟು ಹೆಚ್ಚಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತ ಜಿ.ಪಿ.ಬಸವರಾಜು ಮಾತನಾಡಿ, ‘ಇಲ್ಲಿ ನೀಡಿರುವ ಅಂಶಗಳು ಕೇವಲ ಆರೋಪಗಳಲ್ಲ. ಇವುಗಳ ಹಿಂದೆ ಅಂಕಿ– ಅಂಶಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ದುರ್ಬಲವಾಗಿದೆ, ನ್ಯಾಯಾಂಗದ ಮೇಲೆ ಹೇಗೆ ಪ್ರಭಾವ ಬೀರಲಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಹೇಗೆ ಆಡಳಿತ ಹೋಗುತ್ತಿದೆ ಎಂಬುದನ್ನು ವಿವರಿಸಲಾಗಿದೆ’ ಎಂದರು.

ಪ್ರೊ. ಕಾಳಚನ್ನೇಗೌಡ, ಹೊಸಕೋಟೆ ಬಸವರಾಜು, ವರದಯ್ಯ, ಪುಟ್ಟಮಾದಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT