ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮೈಸೂರು ವಿಭಾಗದ ಆದಾಯ ಶೇ 20ರಷ್ಟು ಹೆಚ್ಚಳ: ಡಿಆರ್‌ಎಂ

Published 26 ಜನವರಿ 2024, 7:34 IST
Last Updated 26 ಜನವರಿ 2024, 7:34 IST
ಅಕ್ಷರ ಗಾತ್ರ

ಮೈಸೂರು: ‘ನೈರುತ್ಯ ರೈಲ್ವೆ ಮೈಸೂರು ವಿಭಾಗದ ಆದಾಯವು ಶೇ 20.66ರಷ್ಟು ಹೆಚ್ಚಳವಾಗಿದೆ’ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್‌ ತಿಳಿಸಿದರು.

ವಿಭಾಗದಿಂದ ನಗರದ ರೈಲ್ವೆ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘2023ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು ₹ 1,069.34 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹ 886.24 ಕೋಟಿ ಇತ್ತು. ಸರಕು ಸಾಗಣೆ ಆದಾಯ ₹ 711.15 ಕೋಟಿಗೆ ತಲುಪಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 27.60ರಷ್ಟು ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸಿದೆ’ ಎಂದು ಹಂಚಿಕೊಂಡರು.

‘ವಿಭಾಗವು ಈ ವರ್ಷದಲ್ಲಿ ಡಿಸೆಂಬರ್‌ವರೆಗೆ 2,405 ರೇಕ್‌ಗಳೊಂದಿಗೆ 8.367 ದಶಲಕ್ಷ ಟನ್ ಲೋಡ್ ಮಾಡಿದೆ. ಇದು ಹಿಂದಿನ ವರ್ಷ (2022ರಲ್ಲಿ) 1,996 ರೇಕ್‌ಗಳೊಂದಿಗೆ 6.525 ದಶಲಕ್ಷ ಟನ್‌ ಇತ್ತು. ಅಂದರೆ ಶೇ 28.2ರಷ್ಟು ಹೆಚ್ಚಳವನ್ನು ಕಂಡಿದೆ. ಡಿಸೆಂಬರ್ ತಿಂಗಳೊಂದರಲ್ಲೇ 319 ರೇಕ್‌ಗಳೊಂದಿಗೆ 1.125 ದಶಲಕ್ಷ ಟನ್‌ ಅತ್ಯಧಿಕ ಮಾಸಿಕ ಲೋಡ್‌ಗಾಗಿ ಹೊಸ ದಾಖಲೆ ಸ್ಥಾಪನೆಯಾಗಿದೆ’ ಎಂದು ತಿಳಿಸಿದರು.

ವೇಗ ಹೆಚ್ಚಳ:

‘ಕಾರ್ಯಾಚರಣೆಯಲ್ಲಿ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಸುರಕ್ಷತಾ ಜಾಥಾಗಳು, ಅಣಕು ಕವಾಯತುಗಳು, ವಿಚಾರಸಂಕಿರಣ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಜೊತೆಗೆ ನಡೆಸಿದ ತಪಾಸಣೆಗ ಮೊದಲಾದ ಕಾರ್ಯಕ್ರಮಗಳಿಗೆ ಒತ್ತು ಕೊಡಲಾಗಿದೆ. ಈ ವಿತ್ತೀಯ ವರ್ಷದಲ್ಲಿ 111 ಟ್ರ್ಯಾಕ್ ಕಿ.ಮೀ.ಗಳಿಗೆ ವಿಭಾಗದ ವೇಗವನ್ನು 100 ಕಿ.ಮೀ.ನಿಂದ 110 ಕಿ.ಮೀ.ಗೆ ಹೆಚ್ಚಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಬಿಸಿನೆಸ್ ಡೆವಲಪ್‌ಮೆಂಟ್ ಯುನಿಟ್‌ (ವ್ಯಾಪಾರ ಅಭಿವೃಧಿ ಘಟಕ)ದ ಪ್ರಯತ್ನದಿಂದ ವಿಭಾಗವು ಹಾವೇರಿಯಿಂದ ಹೊಸ ಸರಕು (ಮೇವು) ಲೋಡ್ ಮಾಡಿದೆ ಮತ್ತು ಹೊಸ ತಾಣವಾದ ಈಶಾನ್ಯ ಗಡಿ ರೈಲ್ವೆಯ ಲುಮ್ಡಿಂಗ್ ವಿಭಾಗದ ಭಂಗಾಗೆ ಹಾವೇರಿಯಿಂದ ಸಕ್ಕರೆಯನ್ನು ಲೋಡ್ ಮಾಡಿ ಕಳುಹಿಸಿದೆ’ ಎಂದು ತಿಳಿಸಿದರು.

‘ಡಿಸೆಂಬರ್‌ವರೆಗೆ 25.28 ದಶಲಕ್ಷ ಪ್ರಯಾಣಿಕರನ್ನು ಸಾಗಿಸಲಾಗಿದೆ. ವಿಭಾಗದ ಮೇಲ್, ಎಕ್ಸ್‌ಪ್ರೆಸ್ ರೈಲುಗಳು ಶೇ 98ರಷ್ಟು ಸಮಯಪಾಲಿಸಿವೆ. ಸಿಬ್ಬಂದಿಯ ಸಂಘಟಿತ ಪ್ರಯತ್ನಗಳಿಂದಾಗಿ ದಸರಾ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಉತ್ತಮವಾಗಿ ನಿಭಾಯಿಸಲಾಯಿತು’ ಎಂದರು.

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು:

‘ಹೊಸ ಲಿಫ್ಟ್‌ಗಳು, 2ನೇ ಪ್ರವೇಶ ದ್ವಾರಗಳು ಮತ್ತು ವಿಸ್ತರಿಸಿದ ಪಾದಚಾರಿ ಮೇಲ್ಸೇತುವೆಗಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ನಿಲ್ದಾಣಗಳಲ್ಲಿ ಒದಗಿಸಲಾಗಿದೆ. ಹೆಚ್ಚುವರಿ ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಕಾರ್ಯಾಚರಣೆ ಸೌಲಭ್ಯಗಳೊಂದಿಗೆ ಮೈಸೂರು ನಿಲ್ದಾಣಕ್ಕೆ ಪರ್ಯಾಯ ಟರ್ಮಿನಲ್ ಆಗಿ ಕಾರ್ಯನಿರ್ವಹಿಸಲು ಮೈಸೂರಿನ ಅಶೋಕಪುರಂ ಯಾರ್ಡ್‌ ನವೀಕರಿಸಲಾಗಿದೆ’ ಎಂದು ಹೇಳಿದರು.

‘ಕಡಕೊಳದಲ್ಲಿ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ‘ಗತಿ ಶಕ್ತಿ-ಮಲ್ಟಿ-ಮಾಡೆಲ್ ಕಾರ್ಗೋ ಟರ್ಮಿನಲ್’ ನಿರ್ಮಿಸಲಾಗಿದೆ. ಅಲ್ಲಿನ ಮೊದಲ ಸರಕು ರೇಕ್ ಅನ್ನು ನವೆಂಬರ್‌ನಲ್ಲಿ ಸ್ವೀಕರಿಸಲಾಯಿತು. ಹಾಸನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಕಾರ್ಯಸಾಧ್ಯತೆ ಹೆಚ್ಚಿಸಲು ಉನ್ನತೀಕರಿಸಿದ ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಪ್ರಮುಖ ಯಾರ್ಡ್ ಮರು ನಿರ್ಮಾಣ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.

ಬಡ್ತಿ, ವೇತನ ಹೆಚ್ಚಳ:

‘ಒಟ್ಟು 814 ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದೆ. 46 ಮಂದಿಗೆ ವೇತನ ಹೆಚ್ಚಿಸಲಾಗಿದೆ ಹಾಗೂ 986 ಹೊಸ ನೇಮಕಾತಿಗಳನ್ನು ಆರ್‌ಆರ್‌ಬಿ, ಆರ್‌ಆರ್‌ಸಿ ಹಾಗೂ ಸಿಜಿಎ ಮೂಲಕ ಮಾಡಲಾಗಿದೆ. ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿಯುತ ಉಪಕ್ರಮಗಳಲ್ಲಿ 12 ನಿಲ್ದಾಣಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಕಾರ್ಯಾಚರಣೆಗೆ ಅನುಮತಿ ಪಡೆಯಲಾಗಿದೆ. 89 ರೈಲು ನಿಲ್ದಾಣಗಳಲ್ಲಿ ‘ಸ್ವಚ್ಛತಾ ಪಾಕ್ಷಿಕ’ ಚಟುವಟಿಕೆಗಳನ್ನು ನಡೆಸಲಾಗಿದ್ದು, 3ಸಾವಿರ ನೌಕರರು ಭಾಗವಹಿಸಿದ್ದರು. ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ ಮತ್ತು ನೀರಿನ ಸಂರಕ್ಷಣೆ ಕುರಿತು ಜಾಗೃತಿ ಆಂದೋಲನ ನಡೆಸಲಾಯಿತು’ ಎಂದು ತಿಳಿಸಿದರು.

‘ರೈಲು ಭದ್ರತಾ ವ್ಯವಸ್ಥೆಯ ನೇರ ಉಸ್ತುವಾರಿಯನ್ನು ಮೈಸೂರು ವಿಭಾಗದಲ್ಲಿ ಪರಿಚಯಿಸಲಾಗಿದೆ. ಅಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಆರ್‌ಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ. ₹ 27.09 ಲಕ್ಷ ದಂಡವನ್ನು ಅನಧಿಕೃತ ಟಿಕೆಟ್‌ ಹಸ್ತಾಂತರ ಮತ್ತು ಇತರ ಪ್ರಕರಣಗಳಿಂದ ವಸೂಲಿ ಮಾಡಲಾಗಿದೆ. 45 ಹುಡುಗರು ಹಾಗೂ 6 ಹುಡುಗಿಯರನ್ನು ರೈಲ್ವೆ ಸುರಕ್ಷತಾ ಸಿಬ್ಬಂದಿ ರಕ್ಷಿಸಿದ್ದಾರೆ ಮತ್ತು ನಿಯಮಾನುಸಾರ ಸಂಬಂಧಿಸಿದ ಸಂಸ್ಥೆ, ಎನ್‌ಜಿಒ ಅಥವಾ ಪೋಷಕರಿಗೆ ಹಸ್ತಾಂತರಿಸಿದ್ದಾರೆ’ ಎಂದರು.

ಅಧಿಕಾರಿಗಳು, ನೌಕರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT