ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ₹ 50 ಕೊಟ್ಟರಷ್ಟೇ ‘ಉಚಿತ’ ಸಿಮ್‌ ಅಪ್‌ಗ್ರೇಡ್‌!

ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರದಲ್ಲಿ ಹಣ ವಸೂಲಿ: ಆರೋಪ
Published 29 ಆಗಸ್ಟ್ 2024, 7:26 IST
Last Updated 29 ಆಗಸ್ಟ್ 2024, 7:26 IST
ಅಕ್ಷರ ಗಾತ್ರ

ಮೈಸೂರು: ‘ಆತ್ಮೀಯ ಗ್ರಾಹಕರೇ, ಸದ್ಯದಲ್ಲೇ ಪ್ರಾರಂಭವಾಗಲಿರುವ ಬಿಎಸ್ಎನ್‌ಎಲ್ 4 ಜಿ ಸೇವೆಗಳು ನಿಮ್ಮ 2ಜಿ ಅಥವಾ 3ಜಿ ಸಿಮ್‌ಗಳಲ್ಲಿ ಲಭ್ಯವಿರುವುದಿಲ್ಲ. ಆದ್ದರಿಂದ ಈ ಕೂಡಲೇ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರ ಅಥವಾ ರಿಟೈಲರ್‌ ಅನ್ನು ಸಂಪರ್ಕಿಸಿ ಉಚಿತವಾಗಿ 4ಜಿ ಸಿಮ್‌ಗೆ ಅಪ್‌ಗ್ರೇಡಾಗಿ ಹಾಗೂ 4ಜಿ ಸೇವೆ ಪಡೆಯಲು ಸನ್ನದ್ಧರಾಗಿ’ ...

ಇದು ಬಿಎಸ್‌ಎನ್ಎಲ್ ಬಳಕೆದಾರರು ಕರೆ ಮಾಡುವಾಗ ಕೇಳಿ ಬರುವ ಸಂದೇಶ.

‘ಈ ಮಾತನ್ನು ನಂಬಿ ಬಿಎಸ್ಎನ್ಎಲ್ ಸೇವಾ ಕೇಂದ್ರಕ್ಕೆ ತೆರಳುವವರು ಖಾಲಿ ಕೈಯಲ್ಲಿ ಹೋಗದೇ ₹50 ತೆಗೆದುಕೊಂಡು ಹೋಗಿ’ ಎಂಬುದು ಗ್ರಾಹಕರ ಅಸಮಾಧಾನದ ಸಲಹೆ. ಏಕೆಂದರೆ, ‘ಹಣ ಕೊಡದೇ ಸಿಮ್‌ ಅಪ್‌ಗ್ರೇಡ್‌ ಆಗುವುದಿಲ್ಲ’ ಎಂಬುದು ಅವರ ಆರೋಪ.

‘ಸಿಮ್ ಅಪ್‌ಗ್ರೇಡ್‌ಗೆಂದು ಕುಳಿತ ಸಿಬ್ಬಂದಿ ಆಧಾರ್‌ ದಾಖಲೆ ಮತ್ತು ₹50 ನೀಡಿ ಎಂದು ಕೇಳುತ್ತಾರೆ. ಉಚಿತವಲ್ಲವೇ ಎಂದು ಪ್ರಶ್ನಿಸಿದರೆ, ‘ನೀವೇ ಮಾಡಿಕೊಳ್ಳುವುದಾದರೆ ಉಚಿತ. ಆದರೆ, ಅಪ್‌ಗ್ರೇಡ್ ಯಾವಾಗ ಆಗುತ್ತೆ ಎಂಬುದು ಗೊತ್ತಿಲ್ಲ. ನಾವೇ ಮಾಡಿದರೆ 5 ಗಂಟೆಯಲ್ಲಿ ಆಗುತ್ತದೆ. ಸಮಸ್ಯೆಯಾದರೂ ಪರಿಹರಿಸುತ್ತೇವೆ ಎನ್ನುತ್ತಿದ್ದಾರೆ’ ಎಂದು ಗ್ರಾಹಕರು ದೂರುತ್ತಿದ್ದಾರೆ.

ನಗರದ ಜಯಲಕ್ಷ್ಮಿಪುರಂನಲ್ಲಿನ ಬಿಎಸ್ಎನ್ಎಲ್ ಮುಖ್ಯ ಕಚೇರಿ ಹಾಗೂ ಆರ್‌ಟಿಟಿಸಿಯಲ್ಲಿನ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ತೆರಳುವ ಗ್ರಾಹಕರು ಈ ಮಾತುಗಳನ್ನು ಕೇಳಿ ವಿಧಿಯಿಲ್ಲದೆ ಹಣ ತೆರುತ್ತಿದ್ದಾರೆ.

ಖಾಸಗಿ ಫ್ರಾಂಚೈಸಿಗಳ ಮೂಲಕ ಗ್ರಾಹಕ ಸೇವೆಯ ವಿಭಾಗವನ್ನು ನಡೆಸುತ್ತಿರುವ ಬಿಎಸ್ಎನ್ಎಲ್ ಸಂಸ್ಥೆಯು ಈ ವ್ಯವಹಾರಕ್ಕೆ ತನ್ನ ಕಚೇರಿಯಲ್ಲಿಯೇ ಸ್ಥಳ ನೀಡಿದೆ‌!

‘ಪ್ರತಿ ಬಾರಿ ಯಾರಿಗೆ ಫೋನ್ ಮಾಡಲೂ ತೆರಳಿದರೂ ಉಚಿತವಾಗಿ 4 ಜಿಗೆ ಅಪ್‌ಗ್ರೇಡ್ ಆಗಿ ಎಂಬ ಸಂದೇಶ ಕೇಳುತ್ತದೆ. ಆದರೆ, ಇಲ್ಲಿನ ಗ್ರಾಹಕ ಸೇವಾ ಕೇಂದ್ರಕ್ಕೆ ತೆರಳಿದರೆ ₹50 ಕೇಳುತ್ತಾರೆ. ಉಚಿತವಾಗಿ ಮಾಡಿ ಎಂದರೆ ಗೋಡೆಗೆ ಅಂಟಿಸಿರುವ ಇಂಗ್ಲಿಷ್‌ನಲ್ಲಿ ಬರೆದ ಅಪ್‌ಗ್ರೇಡ್‌ಗೆ ಅನುಸರಿಸಬೇಕಾದ ಕ್ರಮಗಳ ಪಟ್ಟಿಯನ್ನು ತೋರುತ್ತಾರೆ. ಅಲ್ಲಿಯೂ ಹಣದ ಬಗ್ಗೆ ಮಾಹಿತಿಯಿಲ್ಲ. ಸುಮ್ಮನೆ ಗೊಂದಲವೇಕೆ ಎಂದು ಹಣ ನೀಡಿ ಮಾಡಿಸಿದ್ದೇನೆ. ಒಂದು ವೇಳೆ ಸಿಮ್ ದಿಢಿರನೇ ಕೆಲಸ ನಿಲ್ಲಿಸಿದರೆ ಗ್ಯಾಸ್ ಬುಕಿಂಗ್, ಬ್ಯಾಂಕ್ ವ್ಯವಹಾರಕ್ಕೆ ಸಮಸ್ಯೆಯಲ್ಲವೇ’ ಎಂದು ಸರಸ್ವತಿಪುರಂನ ಕೆ.ಬಿ.ಜಯಕುಮಾರ್ ಆತಂಕ ವ್ಯಕ್ತಪಡಿಸಿದರು.

‘ಜನರ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸುತ್ತಿರುವ ಫ್ರಾಂಚೈಸಿ ಸಿಬ್ಬಂದಿ ಉಚಿತವಾಗಿ ಸಿಮ್‌ ನೀಡುತ್ತೇವೆ. ಆದರೆ ಸಿಮ್ ಅಪ್‌ಗ್ರೇಡ್‌ ಆಗದಿದ್ದರೆ ನಾವು ಹೊಣೆಯಲ್ಲ. ನಮ್ಮನ್ನು ಕೇಳಬೇಡಿ’ ಎನ್ನುತ್ತಾರೆ.

ಲಕ್ಷ್ಮಿಪುರಂ ಕೇಂದ್ರದ ಸಿಬ್ಬಂದಿ, ‘ಅಪ್‌ಗ್ರೇಡ್‌ ಉಚಿತವಾಗಿದೆ. ಆದರೆ 4ಜಿ ಟವರ್‌ಗಳು ಇನ್ನೂ ಎಲ್ಲೆಡೆ ಕಾರ್ಯನಿರ್ವಹಿಸುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಸೇವೆ ಲಭಿಸುವುದು ಸೆ.15 ಅಥವಾ ಅ.2ರ ಬಳಿಕ, ಆಗಲೇ ಬದಲಾಯಿಸುವುದು ಒಳಿತು’ ಎಂದು ಸಲಹೆ ನೀಡಿದರು.

‘ಹಣ ವಾಪಸ್ ನೀಡಲಿ’

‘ಗುತ್ತಿಗೆ ಪಡೆದ ಫ್ರಾಂಚೈಸಿಗಳು ಬಿಎಸ್‌ಎನ್‌ಎಲ್‌ ಕಚೇರಿಯನ್ನೆ ಬಳಸಿಕೊಂಡು ಗ್ರಾಹಕರಿಂದ ಹಣ ವಸೂಲಿ ಮಾಡಲು ಮುಂದಾಗಿವೆ. ಉಚಿತವಾಗಿ ವಿತರಿಸಿದ ಸಿಮ್‌ಗಳು ಕೆಲಸ ಮಾಡದಂತೆ ನೋಡಿಕೊಳ್ಳುತ್ತಿದ್ದು ದುಡ್ಡು ನೀಡಿಯೇ ಸಿಮ್‌ ಅಪ್‌ಗ್ರೇಡ್‌ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಿದ್ದಾರೆ’ ಎಂದು ವಿವೇಕಾನಂದ ನಗರದ ಸಿ.ಆರ್.ಗುರುರಾಜ ಆರೋಪಿಸಿದರು.

‘ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ನಮ್ಮಿಂದ ಅಪ್‌ಗ್ರೇಡ್‌ ಹೆಸರಿನಲ್ಲಿ ಪಡೆದಿಕೊಂಡಿರುವ ಹಣವನ್ನು ಮೊಬೈಲ್‌ ಕರೆನ್ಸಿ ರೂಪದಲ್ಲಿ ವಾಪಸ್‌ ನೀಡಬೇಕು’ ಎಂದು ಆಗ್ರಹಿಸಿದರು.

‘ಸಿಮ್ ಅಪ್‌ಗ್ರೇಡ್‌ಗೆ ಹಣ ಕೇಳುತ್ತಿಲ್ಲ’

ಸಿಮ್ ಬದಲಾವಣೆಗೆ ₹50 ಶುಲ್ಕವಿದೆ. ಆದರೆ ಸಿಮ್ ಅಪ್‌ಗ್ರೇಡ್‌ಗೆ ಯಾವುದೇ ಶುಲ್ಕವಿಲ್ಲ. ಇಲ್ಲಿನ ಸಿಬ್ಬಂದಿಯೂ ಶುಲ್ಕ ತೆಗೆದುಕೊಳ್ಳುತ್ತಿಲ್ಲ ಎಂದು ಜಯಲಕ್ಷ್ಮಿಪುರಂ ಬಿಎಸ್ಎನ್‌ಎಲ್ ಮುಖ್ಯ ಕಚೇರಿಯ ಜೂನಿಯರ್ ಟೆಲಿಕಾಂ ಆಫಿಸರ್ ರಶ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಮ್ಮ ಕಚೇರಿಯಲ್ಲಿರುವ ಸೇವಾ ಕೇಂದ್ರದಲ್ಲಿಯೇ ಅಪ್‌ಗ್ರೇಡ್‌ಗೆ ₹50 ಕೇಳುತ್ತಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಆ ಬಗ್ಗೆ ತಿಳಿದಿಲ್ಲ. ಎಜಿಎಂ ಅವರನ್ನು ಸಂಪರ್ಕಿಸಿ ಎಂದರು. ಎಜಿಎಂ ರಾಜೇಂದ್ರ ಹೊನ್ನಪ್ಪನವರ್‌ ಸಂಪರ್ಕಕ್ಕೆ ಸಿಗಲಿಲ್ಲ.

ಕೇಂದ್ರ ಹೇಗೆ ಕಾರ್ಯನಿರ್ವಹಿಸಬೇಕು

ಗ್ರಾಹಕ ಸೇವಾ ಕೇಂದ್ರಕ್ಕೆ ಬರುವ ಗ್ರಾಹಕರಿಗೆ ಕೇಂದ್ರದ ಸಿಬ್ಬಂದಿ ಉಚಿತವಾಗಿ ಸಿಮ್ ಅಪ್‌ಗ್ರೇಡ್ ಮಾಡಲು ಸಹಕರಿಸಬೇಕು. ಗ್ರಾಹಕರ ಮೊಬೈಲ್ ಮೂಲಕ ಸೇವೆ ಪಡೆಯುವ ಉದ್ದೇಶದ ಎಸ್ಎಮ್ಎಸ್ ಅನ್ನು 53734 ಗೆ ಕಳುಹಿಸಬೇಕು. ಬಳಿಕ ಸೇವೆ ಚಾಲನೆಗಾಗಿ ಗ್ರಾಹಕರೇ ಕಳಿಸಬೇಕಾದ ಎಸ್‌ಎಂಎಸ್‌ ಬಗ್ಗೆಯೂ ಮಾಹಿತಿ ನೀಡಬೇಕು.

ಎಸ್ಎಂಎಸ್ ಮೂಲಕ ಅಪ್‌ಗ್ರೇಡ್ ಮಾಡಲು ಹೊರಟವರು ತಾವು ಪಡೆದ ಒಟಿಪಿಯೊಂದಿಗೆ ಕೇಂದ್ರಕ್ಕೆ ಬಂದರೆ ಅವರಿಗೂ ಉಚಿತವಾಗಿಯೇ ಒಟಿಪಿ ಬಳಸಿ ಅಪ್‌ಗ್ರೇಡ್ ಮಾಡಲು ಸಹಕರಿಸಬೇಕು. ಎಸ್ಎಂಎಸ್ ಕಳುಹಿಸುವುದು. ನಂತರ ಸೇವೆ ಪ್ರಾರಂಭಕ್ಕೆ ಎಸ್ಎಂಎಸ್ ಮಾಡುವ ವಿಧಾನವನ್ನೂ ತಿಳಿಸಬೇಕು ಎಂಬ ಸೂಚನೆಯನ್ನು ಕೇಂದ್ರದ ಗೋಡೆಯಲ್ಲಿ ಅಂಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT