ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳಿನ ಸಿನಿಮಾ ಬಾಕಿ ಇರಬಹುದು: ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆ

Published 1 ಏಪ್ರಿಲ್ 2024, 8:24 IST
Last Updated 1 ಏಪ್ರಿಲ್ 2024, 8:24 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ ಸರ್ಕಾರದಲ್ಲಿ ದೇಶದಲ್ಲಿ ಅಭಿವೃದ್ಧಿ ಆಗಿದ್ದರೆ ತಾನೇ ಟ್ರೇಲರ್ ತೋರಿಸುವುದು? ಮುಂದೆ ಬರಲಿರುವುದು ನರೇಂದ್ರ ಮೋದಿ ಅವರ ಸುಳ್ಳಿನ ಸಿನಿಮಾ ಇರಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಮೈಸೂರು–ಕೊಡಗು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಸೋಮವಾರ ಬಂದಿಳಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು 200 ಕ್ಷೇತ್ರಗಳಲ್ಲಿ ಮಾತ್ರ. ಇದು ಅವರ ಸಮೀಕ್ಷೆಯಿಂದಲೇ ಗೊತ್ತಾಗಿದೆ. ಕಡಿಮೆ ಸ್ಥಾನ ಬರುತ್ತದೆ ಎಂದು ತಿಳಿದ ಮೇಲೆಯೇ ಹೆಚ್ಚು ಸ್ಥಾನ ಬರುತ್ತೇವೆಂದು ಬಿಂಬಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ನಾಯಕರು ಮಾಡುತ್ತಿದ್ದಾರೆ. ಇದು ಕೂಡ ಅವರ ತಂತ್ರಗಾರಿಕೆ’ ಎಂದು ಹೇಳಿದರು. 

‘ರಾಜ್ಯದಲ್ಲಿ 18ರಿಂದ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಬಿಜೆಪಿಯ ಸುಳ್ಳಿಗೆ ಯಾರೂ ಮರುಳಾಗುವುದಿಲ್ಲ. ಮೋದಿಯೂ ಬಂದು ಕರ್ನಾಟಕದಲ್ಲಿ ಪ್ರಚಾರ ಮಾಡಲಿ. ವಿಧಾನಸಭೆ ಚುನಾವಣೆಯಲ್ಲಿ ಅವರು ಹಲವೆಡೆ ಬಂದು ಪ್ರಚಾರ ಮಾಡಿದ್ದರು; ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಬರಲಿ ಬಿಡಿ’ ಎಂದು ಪ್ರತಿಕ್ರಿಯಿಸಿದರು. 

‘ಕಾಂಗ್ರೆಸ್‌ಗೆ ಅನೇಕರು ಬರಲಿದ್ದಾರೆ. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು. ‘ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನ ಭೇಟಿಯಾಗಿಲ್ಲ; ಭೇಟಿಯಾಗುವುದಿಲ್ಲ. ದೂರವಾಣಿಯಲ್ಲೂ ಮಾತನಾಡಿಲ್ಲ. ಸಚಿವ ಮಹದೇವಪ್ಪ ಭೇಟಿಯಾಗಿ ಚರ್ಚಿಸಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಗರ್ವ ಭಂಗವಾಗಬೇಕು’ ಎಂಬ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಹೇಳಿಕೆಗೆ ಕಿಡಿಕಾರಿದ ಅವರು, ‘ನನಗೆ ಗರ್ವ ಇದ್ದಾರೆ ತಾನೇ ಭಂಗ ಆಗುವುದು? ದೇವೇಗೌಡರು ಹೇಳಿದ್ದನ್ನೇ ನಾನೂ ಹೇಳಿದ್ದೇನೆ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದವರು ಯಾರು? ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗುತ್ತೇನೆ ಎಂದಿದ್ದವರು ಯಾರು?’ ಎಂದು ಕೇಳಿದರು. ‘ನನಗೆ ಗರ್ವ ಇಲ್ಲ’ ಎಂದರು. ‘ನಿಜ ಹೇಳಿದರೆ ತಪ್ಪಾ? ಮೋದಿ ಅವರೊಂದಿಗೆ ಚೆನ್ನಾಗಿದ್ದೇನೆ ಎಂದು ಹೇಳುವ ಅವರು ಮೇಕೆದಾಟು ಯೋಜನೆಗೆ ಈಗಲೇ ಅನುಮೋದನೆ ಕೊಡಿಸಲಿ. ಇದನ್ನು ಕೇಳುವುದು ಗರ್ವನಾ? ಸತ್ಯ ಹೇಳಿದರೆ ಅವರ ದೃಷ್ಟಿಯಲ್ಲಿ ಗರ್ವ. ಸುಳ್ಳು ಹೇಳಿದವರು ಅವರು. ನಾನು ಸತ್ಯ ಹೇಳುತ್ತಿದ್ದೇನೆ; ಅದನ್ನು ಗರ್ವ ಎನ್ನುತ್ತಾರೆ, ಏನು ಮಾಡುವುದು?’ ಎಂದು ಕೇಳಿದರು.

‘ಬಹಳ ವರ್ಷ ಜತೆಯಲ್ಲಿದ್ದಿದ್ದರಿಂದಾಗಿ ಎಲ್ಲ ಕಡೆಯೂ ನನ್ನ ಬಗ್ಗೆಯೇ ಮಾತನಾಡುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಮತ್ತು ನಮ್ಮ ಸರ್ಕಾರದ ಜನಪರ ಆಡಳಿತ, ಸಾಧನೆ ಮತ್ತು ಗ್ಯಾರಂಟಿ ಕಾರ್ಯಕ್ರಮಗಳು ನಮ್ಮ ಕೈ ಹಿಡಿಯುತ್ತವೆ. ಪೆಟ್ರೋಲ್, ಡೀಸೆಲ್‌ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಎಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದು ಜನರಿಗೆ ಗೊತ್ತು. ಒಳ್ಳೆಯ ದಿನಗಳು ಬರಲೇ ಇಲ್ಲ. ಹೀಗಾಗಿ ಜನ ನಮ್ಮ ಪರವಾಗಿ ಮತ ಹಾಕುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

‘ಈಗ ಚುನಾವಣೆ ದೃಷ್ಟಿ ಇಟ್ಟುಕೊಂಡು ಇಂಧನ ಬೆಲೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮೈಸೂರು–ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರಗಳೆರಡರಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಮೈಸೂರು ಮಾತ್ರವೇ ನನಗೆ ಮುಖ್ಯವಲ್ಲ. ಎಲ್ಲ ಕ್ಷೇತ್ರಗಳೂ ಬಹಳ ಮುಖ್ಯ’ ಎಂದರು.

‘ಅಮಿತ್ ಶಾ ಗೂಂಡಾ’ ಎಂಬ ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ‘ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಅದು ಅವನು ಬಳಸಿರುವ ಪದ ಅಲ್ಲ. ಸಿಬಿಐ ವರದಿಯಲ್ಲೇ ಇದೆ. ಅದನ್ನೇ ಉಲ್ಲೇಖಿಸಿದ್ದಾನೆ. ಬಿಜೆಪಿಯವರಿಗೆ ಸಂಸ್ಕಾರವೇ ಗೊತ್ತಿಲ್ಲ. ಅವರು ಯತೀಂದ್ರಗೆ ಹೇಳಿಕೊಡಲು ಬಂದಿದ್ದಾರೆ’ ಎಂದು ಹೇಳಿದರು. 

ಜೆಡಿಎಸ್– ಬಿಜೆಪಿ ಮೈತ್ರಿ ಉತ್ತಮವಾಗಿರುತ್ತದೆ ಎಂಬ ದೇವೇಗೌಡರ ಹೇಳಿಕೆಗೆ ‍ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್ ಜೊತೆ ಮೈತ್ರಿ ಹೇಗಿರುತ್ತದೆ ಎಂಬುದು ಗೊತ್ತಿದೆ. ಕಳೆದ ಬಾರಿಯೇ ಅದನ್ನು ನಮಗೆ ತೋರಿಸಿದ್ದಾರೆ. ಇವರಿಬ್ಬರ ಮೈತ್ರಿಯೂ ಹೇಗಿರುತ್ತದೆ ಎಂಬುದೂ ಗೊತ್ತಿದೆ’ ಎಂದು ವ್ಯಂಗ್ಯವಾಗಿ ಟೀಕಿಸಿದರು.

ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಹಾಗೂ ಕೆ.ವೆಂಕಟೇಶ್, ಗ್ಯಾಂರಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮುಡಾ ಅಧ್ಯಕ್ಷ ಕೆ.ಮರೀಗೌಡ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT