ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಸಂಪೂರ್ಣ ದೊರೆಯದ ಸಾಮಾಜಿಕ ನ್ಯಾಯ: ನ್ಯಾ.ಎಲ್.ನಾರಾಯಣಸ್ವಾಮಿ ವಿಷಾದ

Published 9 ಡಿಸೆಂಬರ್ 2023, 11:07 IST
Last Updated 9 ಡಿಸೆಂಬರ್ 2023, 11:07 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಸಾಮಾಜಿಕ ನ್ಯಾಯ ಇನ್ನೂ ಸಂಪೂರ್ಣವಾಗಿ ದೊರೆತಿಲ್ಲ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಲ್.ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಒಡಲು ಟ್ರಸ್ಟ್‌’ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ನ್ಯಾಯ ಪಡೆದುಕೊಳ್ಳಲು ಸಂವಿಧಾನವನ್ನು ನಾವು ಸ್ವೀಕರಿಸಿದ್ದೇವೆ.‌ ಆದರೆ, ಅದು ಅಂದಿನಿಂದಲೂ ಪ್ರಯತ್ನ ಪಡುತ್ತಲೇ ಇದೆ. ಏಕೆ ಎಂಬುದನ್ನು ನಾವು ಅವಲೋಕನ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಸಾಮಾಜಿಕ ಹಾಗೂ ರಾಜಕೀಯ ಪ್ರಜಾಪ್ರಭುತ್ವ ಇಂದಿಗೂ ಸಿಕ್ಕಿಲ್ಲ. ಅನಿಷ್ಟ ಪದ್ಧತಿಗಳು ನಡೆಯುತ್ತಲೇ ಇವೆ. ಸದ್ಯದ ಸ್ಥಿತಿಯಲ್ಲಿ ಜಾತಿಯನ್ನು ಸಡಿಲಗೊಳಿಸಲು ಆಗುತ್ತಿಲ್ಲ. ಜಾತಿ ಹೋಗದಿದ್ದರೆ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಸಿಗುವುದಿಲ್ಲ’ ಎಂದು ವಿಶ್ಲೇಷಿಸಿದರು.

ಜಾತಿ ಜನಗಣತಿ ಅಗತ್ಯ:

‘ದೇಶದಲ್ಲಿ ಇಂದಿಗೂ ಬಡವರು ದೊಡ್ಡ ಪ್ರಮಾಣದಲ್ಲಿದ್ದಾರೆ. ಆರ್ಥಿಕ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿದೆ. ಆದ್ದರಿಂದ, ಸಾಮಾಜಿಕ ನ್ಯಾಯ ಕಲ್ಪಿಸಲು ಯಾರ‍್ಯಾರು ಎಷ್ಟಿದ್ದಾರೆ ಎಂಬ ಅಂಕಿ–ಅಂಶ ಅಗತ್ಯ. ಅದಿಲ್ಲದಿದ್ದರೆ ಸಮಾನ ಹಂಚಿಕೆ ಸಾಧ್ಯವಾಗದು. ಕಡಿಮೆ ಪ್ರಮಾಣದಲ್ಲಿ ಕೊಟ್ಟು ಹೆಚ್ಚು ಜನರು ಹಂಚಿಕೊಳ್ಳಿ ಎಂದರೆ ಆಗುತ್ತದೆಯೇ? ಮಹಿಳೆಯರ ಸಂಖ್ಯೆಗೆ ತಕ್ಕಂತೆ ಮೀಸಲಾತಿ ದೊರೆಯಬೇಕು’ ಎಂದರು.

‘ಜಾತಿ ಜನ ಗಣತಿಯಾಗದೇ ಸೌಲಭ್ಯ ಕಲ್ಪಿಸುತ್ತೇವೆ ಎನ್ನುವುದು ಕತ್ತಲ ಕೊಠಡಿಯಲ್ಲಿ ಕಪ್ಪು ಬೆಕ್ಕು ಹುಡುಕಿದಂತೆ ಆಗುತ್ತದೆ’ ಎಂದು ಪ್ರತಿಪಾದಿಸಿದರು.

‘ಬಹಳಷ್ಟು ಮಂದಿ ಅಕ್ಕಿಗೆ ಕೈ ಒಡ್ಡುವಂತಹ ಸ್ಥಿತಿ ಇಂದಿಗೂ ಇದೆ ಎಂದಾದರೆ ನಾವು ಸಾಧಿಸಿರುವುದೇನು ಎಂಬುದನ್ನು ನೋಡಬೇಕಾಗುತ್ತದೆ’ ಎಂದರು.

ಭಾಗಿಗಳೂ, ಬಲಿಯೂ ಹೌದು:

ನಂತರ ನಡೆದ ‘ವಿಚಾರ ಮಂಥನ’ದಲ್ಲಿ ‘ಮಹಿಳಾ ಮೀಸಲಾತಿ: ಸವಾಲು ಹಾಗೂ ಸಾಧ್ಯತೆಗಳು’ ವಿಷಯದ ಕುರಿತು ಮಾತನಾಡಿದ ಕೆಎಸ್‌ಒಯು ಪ್ರಾಧ್ಯಾಪಕಿ ಕವಿತಾ ರೈ, ‘ರಾಜಕೀಯ ಪರಿಸ್ಥಿತಿಯಲ್ಲಿ ಮಹಿಳೆಯರು ಭಾಗಿಗಳು ಹಾಗೂ ಬಲಿಗಳೂ ಹೌದು’ ಎಂದು ವಿಷಾದದಿಂದ ಹೇಳಿದರು.

‘ಮಹಿಳಾ ಮೀಸಲಾತಿ‌ ಮಸೂದೆಯನ್ನು ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಬಹಳಷ್ಟು ಅವಮಾನಕ್ಕೆ, ವಿವಾದಕ್ಕೆ ಒಳಗಾದ ಮಸೂದೆ ಇದ್ದರೆ ಇದು ಮಾತ್ರವೇ. ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆಯಿಂದ ನಿರಂತರವಾಗಿ ನಲುಗುತ್ತಾ ಬಂದಿದೆ’ ಎಂದರು.

‘ಇತ್ತೀಚೆಗೆ ಕಾನೂನು ಸಚಿವರು ಮಸೂದೆ ಮಂಡಿಸಿದ್ದು, ಸುದೀರ್ಘ ಚರ್ಚೆಯ ನಂತರ ಅಂಗೀಕಾರಗೊಂಡಿದೆ. ಅದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ನೀಡಿದಂತೆ ಒಬಿಸಿ ಮಹಿಳೆಯರಿಗೆ ಸ್ಥಾನವನ್ನು ನಿಗದಿಗೊಳಿಸಿಲ್ಲ. ಇದೆಲ್ಲವೂ ಸ್ಪಷ್ಟವಾಗಬೇಕಾಗುತ್ತದೆ. ಈ ನಡುವೆ, 2024ರ ಚುನಾವಣೆಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ. ಜನಗಣತಿ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಯಾದ ನಂತರ ಜಾರಿಯಾಗಲಿದೆ ಎಂದೂ ತಿಳಿಸಿದ್ದಾರೆ. 2029ರ ಚುನಾವಣೆ ವೇಳೆಗಾದರೂ ಜಾರಿಯಾಗುವುದೇ?’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಒಡಲು’ ಟ್ರಸ್ಟ್‌ ಧರ್ಮದರ್ಶಿ ಎಸ್. ನರೇಂದ್ರಕುಮಾರ್ ಮಾತನಾಡಿದರು. ಅಧ್ಯಕ್ಷ ಆರ್‌.ಎಸ್. ದೊಡ್ಡಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಎನ್. ಶಿವಲಿಂಗಯ್ಯ ಹಾಜರಿದ್ದರು.

ದೇವಾನಂದ ವರಪ್ರಸಾದ್ ತಂಡದವರು ಆಶಯ ಗೀತೆಗಳನ್ನು ಹಾಡಿದರು.

ಮನಸ್ಸು ಮಾಡಿದರೆ...

‘ಮನಸ್ಸು ‌ಮಾಡಿದರೆ ಮಹಿಳಾ ಮೀಸಲಾತಿಯನ್ನು ನಾಳೆಯೇ ಜಾರಿಗೊಳಿಸಬಹುದು. ಆದರೆ, ರಾಜಕೀಯದಲ್ಲಿರುವ ಎಲ್ಲ ಪುರುಷರೂ ಹೆದರಿದ್ದಾರೆ. ಪರ್ಯಾಯ ರಾಜಕಾರಣ ಬಂದುಬಿಡುತ್ತದೆ ಎಂಬ ಆತಂಕ ಅವರಿಗಿದೆ. ಆದ್ದರಿಂದ, ಮಹಿಳೆಯರಿಗೆ ರಾಜಕೀಯದ ದಾರಿ ಸುಗಮವಾಗಿದೆ ಎಂದು ತೋರುತ್ತದೆ; ಆದರೆ ಹೋಗಲಾಗುವುದಿಲ್ಲ. ಹಲವು ಸವಾಲುಗಳಿವೆ’ ಎಂದು ಕವಿತಾ ರೈ ಹೇಳಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆ.ಎನ್. ಲಿಂಗಪ್ಪ ಅವರು ‘ಜಾತಿ ಜನಗಣತಿ: ಅನಿವಾರ್ಯತೆ ಹಾಗೂ ಸಾಮಾಜಿಕ ನ್ಯಾಯ’ ವಿಷಯದ ಬಗ್ಗೆ ಮಾತನಾಡಿದರು. ‘ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಜಾತಿ ಜನಗಣತಿ ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT