ಬೆಟ್ಟದಪುರ: ಹಲಗನಹಳ್ಳಿ ಹಾಗೂ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಸೋಮವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.
ಹಲಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಜಾಮಿಯ ಹಾಗೂ ನೂರುಲ್ ಹುದಾ ಮಸೀದಿ ಮತ್ತು ಗ್ರಾಮಸ್ಥರ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಸುಹೇಲ್ ಪಾಷಾ ಮಾತನಾಡಿ, ‘ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು, ನೂತನ ಬಸ್ ನಿಲ್ದಾಣ ನಿರ್ಮಾಣ ಮತ್ತು ಕಾವೇರಿ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೆ ಮಾರುಕಟ್ಟೆ ನಿರ್ಮಿಸಬೇಕು’ ಎಂದು ಮನವಿ ಮಾಡಿದರು.
ಸಚಿವ ವೆಂಕಟೇಶ್ ಮಾತನಾಡಿ, ‘ದಲಿತ ಜನಾಂಗದವರು ಸ್ಮಶಾನ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ನೀಡಿದರು. ಮೂಲಭೂತ ಸೌಕರ್ಯಕ್ಕಾಗಿ ಹಂತ ಹಂತವಾಗಿ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಮಂಟಿಬಿಳಗುಲಿ ಹಾಗೂ ದೇಪೂರ ಗ್ರಾಮದ ಸಾರ್ವಜನಿಕರು ‘ಕಲ್ಲು ಗಣಿಗಾರಿಕೆ ಹೆಚ್ಚುತ್ತಿದೆ. ಅವನ್ನು ತಡೆಯಬೇಕು’ ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸಚಿವರು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ನಡೆಸಿ ಅನುಮತಿ ನೀಡಲಾಗಿದೆ. ಅನಧಿಕೃತವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಹಶೀಲ್ದಾರ್ ಕುಂ ಇ ಅಹಮದ್, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್,ಗ್ರಾಮ ಪಂಚಾಯತಿ ಅಧ್ಯಕ್ಷೆ ವೀಣಾವೆಂಕಟೇಶ್, ಉಪಾಧ್ಯಕ್ಷೆ ಮೀನಾಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಮುಖಂಡರಾದ ಶಂಕರೇಗೌಡ, ಸುಹೇಲ್ ಪಾಷಾ, ಸೈಯದ್ ಸುಹೇಲ್, ದೇಪೂರುಕುಮಾರ್, ಪುಟ್ಟರಾಜು, ಬಿ.ಟಿ ಸಣ್ಣಸ್ವಾಮಿಗೌಡ, ಪಾಪಣ್ಣನಾಯಕ ಇದ್ದರು.
ಸಾರ್ವಜನಿಕರ ಅಹವಾಲು ಸ್ವೀಕಾರ ಸಮಸ್ಯೆ ಬಗೆಹರಿಸುವ ಭರವಸೆ ಸ್ಮಶಾನ ನಿರ್ಮಾನದ ಬೇಡಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.