ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣ– ತಿ.ನರಸೀಪುರದಲ್ಲಿ ಬಿಜೆಪಿ ಗೆದ್ದಿರುವುದು ಒಮ್ಮೆಯಷ್ಟೆ! ವಿಶೇಷ ವರದಿ

1952ರಿಂದಲೂ ಅಸ್ತಿತ್ವದಲ್ಲಿದೆ, 1972ರವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು
Last Updated 1 ಏಪ್ರಿಲ್ 2023, 10:50 IST
ಅಕ್ಷರ ಗಾತ್ರ

ಮೈಸೂರು: ಹಲವು ಕಾರಣಗಳಿಂದಾಗಿ ಗಮನಸೆಳೆದಿರುವ ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯು ಈವರೆಗೆ ಒಂದು ಸಲ ಮಾತ್ರವೇ ಗೆದ್ದಿದೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದಾಗ, ಬನ್ನೂರು ಸಾಮಾನ್ಯ ಕ್ಷೇತ್ರ ರದ್ದಾದ್ದರಿಂದ ಇಡೀ ಕ್ಷೇತ್ರವನ್ನು ಹಾಗೂ ತಿ.ನರಸೀಪುರ ಪಟ್ಟಣದ ಭಾಗಶಃ ಪ್ರದೇಶಗಳನ್ನು ಇದಕ್ಕೆ ಸೇರಿಸಲಾಗಿದೆ.

ಮೊದಲ ಚುನಾವಣೆ ನಡೆದ 1952ರಿಂದಲೂ ಅಸ್ತಿತ್ವದಲ್ಲಿರುವ ಕ್ಷೇತ್ರವಿದು. 1972ರವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. 1978ರಿಂದ ಮೀಸಲು ಕ್ಷೇತ್ರ (ಪರಿಶಿಷ್ಟ ಜಾತಿ)ವಾಗಿ ಬದಲಾಗಿದೆ.

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕೆಎಂಪಿಸಿ (ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ)ಯ ಅಭ್ಯರ್ಥಿ ಎಸ್.ಶ್ರೀನಿವಾಸ ಅಯ್ಯಂಗಾರ್ ಗೆದ್ದಿದ್ದರು. ಆಗ ಕಾಂಗ್ರೆಸ್‌ನಿಂದ ಟಿ.ಪಿ.ಬೋರಯ್ಯ ಪರಾಭವಗೊಂಡಿದ್ದರು. 1957ರಲ್ಲಿ ನಡೆದ 2ನೇ ಚುನಾವಣೆಯಲ್ಲಿ ಶ್ರೀನಿವಾಸ ಅಯ್ಯಂಗಾರ್‌ ಅವರನ್ನು ಮಣಿಸಿದ ಕಾಂಗ್ರೆಸ್‌ನ ಎಂ.ರಾಜಶೇಖರ್‌ ಮೂರ್ತಿ, ಗೆಲುವಿನ ಓಟವನ್ನು ಮುಂದುವರಿಸಿದ್ದರು. 1957, 1962, 1967ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತ ಮೂರು ಬಾರಿಗೆ ಹಾಗೂ 1972ರಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಕ್ಷೇತ್ರದಲ್ಲಿ ಸತತ 4 ಬಾರಿ ಗೆಲುವು ಕಂಡ ದಾಖಲೆ ಇಂದಿಗೂ ಅವರ ಹೆಸರಿನಲ್ಲಿದೆ.

1978ರಿಂದ ಮೀಸಲು ಕ್ಷೇತ್ರವಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್‌ನ ಪಿ.ವೆಂಕಟರಮಣ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಗೆದ್ದಿದ್ದರು. ದಲಿತ ನಾಯಕ ಎನ್.ರಾಚಯ್ಯ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಿಗೆ ಮತದಾರರ ಒಲವು ದೊರೆತಿರಲಿಲ್ಲ. 1983ರಲ್ಲಿ ಜನತಾ ಪಕ್ಷದ ವಿ.ವಾಸುದೇವ್ ಗೆದ್ದರು. 1985ರಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿಸಿದ್ದ ಡಾ.ಎಚ್‌.ಸಿ.ಮಹದೇವಪ್ಪ ಗೆಲುವಿನ ‘ಸಂಗಮ’ದಲ್ಲಿ ಮಿಂದೆದ್ದರು. 1989ರಲ್ಲಿ ಕಾಂಗ್ರೆಸ್‌ನ ಎಂ.ಶ್ರೀನಿವಾಸಯ್ಯ ವಿರುದ್ಧ ಸೋತರು. ನಂತರ 1994ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಜನತಾ ದಳದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಎಂ.ಶ್ರೀನಿವಾಸಯ್ಯ ಅವರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದರು.

ಇಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆದದ್ದು 1999ರಲ್ಲಿ. ಆಗ, ಡಾ.ಎನ್.ಎಲ್.ಭಾರತೀಶಂಕರ್ ಬಿಜೆಪಿಯಿಂದ ಗೆದ್ದಿದ್ದರು. ಆಗ ಮಾಜಿ ಸಚಿವ ಟಿ.ಎನ್.ನರಸಿಂಹಮೂರ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಹಾಗೂ ಡಾ.ಎಚ್‌.ಸಿ.ಮಹದೇವಪ್ಪ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು.

ಬಳಿಕ ನಡೆದ ಚುನಾವಣೆಯಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಮತದಾರರು ಸತತ ಮೂರು ಬಾರಿ ಬೆಂಬಲಿಸಿದರು. ಅವರು 2004ರಲ್ಲಿ ಜೆಡಿಎಸ್‌ನಿಂದ, 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಇದರೊಂದಿಗೆ ಕ್ಷೇತ್ರದಲ್ಲಿ ಒಟ್ಟು ನಾಲ್ಕು ಬಾರಿ ಗೆದ್ದ ಕೀರ್ತಿಯೂ ಅವರದು. ಅವರು ಕ್ರಮವಾಗಿ ಬಿಜೆಪಿಯ ಟಿ.ಗೋಪಾಲ್, ಡಾ.ಸುಭಾಷ್ ಭರಣಿ ಹಾಗೂ ಸಿ.ರಮೇಶ್ ಅವರನ್ನು ಸೋಲಿಸಿದ್ದರು. ಆದರೆ, 2018ರಲ್ಲಿ ಜೆಡಿಎಸ್‌ನ ಎಂ.ಅಶ್ವಿನ್‌ಕುಮಾರ್‌ ಜಯಭೇರಿ ಬಾರಿಸಿದರೆ, ಮಹದೇವಪ್ಪ ಸೋಲಿನ ಕಹಿ ಅನುಭವಿಸಿದರು. ಆಗ ಬಿಜೆಪಿಯಿಂದ ಎಸ್‌.ಶಂಕರ್‌ ಕಣಕ್ಕಿಳಿದಿದ್ದರು.

ಕ್ಷೇತ್ರದಲ್ಲಿ ಒಟ್ಟು 8 ಬಾರಿ ಸ್ಪರ್ಧಿಸಿ ಐದು ಬಾರಿ ಗೆದ್ದಿರುವ ಹಾಗೂ ಮೂರು ಬಾರಿ ಸಚಿವ ಸ್ಥಾನವನ್ನೂ ನಿರ್ವಹಿಸಿರುವ ಮಹದೇವಪ್ಪ ಅವರು ಈ ಬಾರಿ ಪುತ್ರ ಸುನೀಲ್ ಬೋಸ್‌ಗೆ ರಾಜಕೀಯ ಭವಿಷ್ಯ ಕಲ್ಪಿಸಲು ಕ್ಷೇತ್ರ ಬಿಟ್ಟುಕೊಟ್ಟು ನಂಜನಗೂಡಿನಿಂದ ಸ್ಪರ್ಧಿಸಲು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಮತ್ತೊಬ್ಬ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ಅವರ ಅಕಾಲಿಕ ನಿಧನದ ನಂತರ ನಡೆದ ಬೆಳವಣಿಗೆಗಳಲ್ಲಿ ಅವರು ಕಣಕ್ಕಿಳಿಯುವ ಕ್ಷೇತ್ರವನ್ನು ಬದಲಿಸಿದರು. ನಂಜನಗೂಡಿನಲ್ಲಿ ಧ್ರುವ ಅವರ ಪುತ್ರ ದರ್ಶನ್‌ಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದಾರೆ. ತಿ.ನರಸೀಪುರ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗಿ ಓಡಾಡುತ್ತಿದ್ದಾರೆ.

ಹಾಲಿ ಜೆಡಿಎಸ್‌ನ ಎಂ. ಅಶ್ವಿನ್‌ಕುಮಾರ್‌ ಪ್ರತಿನಿಧಿಸುತ್ತಿದ್ದಾರೆ. ಅವರಿಗೇ ಮತ್ತೊಮ್ಮೆ ಟಿಕೆಟ್‌ ಘೋಷಣೆಯಾಗಿದೆ. ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದೆ. ಆಮ್‌ ಆದ್ಮಿ ಪಕ್ಷ (ಎಎಪಿ)ದಿಂದ ಸೋಸಲೆ ಸಿದ್ದರಾಜು ಹಾಗೂ ಬಿಎಸ್ಪಿಯಿಂದ ಬಿ.ಆರ್‌.ಪುಟ್ಟಸ್ವಾಮಿ ಟಿಕೆಟ್‌ ಪಡೆದುಕೊಂಡಿದ್ದಾರೆ. ಬಿಜೆಪಿಯಿಂದ ಟಿಕೆಟ್‌ ಪ್ರಕಟವಾಗಿಲ್ಲ. ಡಾ.ಎನ್.ಎಲ್. ಭಾರತೀಶಂಕರ್, ಡಾ.ರೇವಣ್ಣ, ಸಾಮ್ರಾಟ್ ಸುಂದರೇಶನ್ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ. ಈ ಪಕ್ಷದ ಟಿಕೆಟ್‌ ಘೋಷಣೆ ನಂತರ ಕಣ ಮತ್ತಷ್ಟು ರಂಗೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT