ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ: ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಗುರುಗಳ ಸ್ಮರಣೆ

'ಸುಮಾರ್ಗ ತೋರಿದ ಗುರುವಿಗೆ ನಮನ'
Last Updated 5 ಸೆಪ್ಟೆಂಬರ್ 2022, 9:54 IST
ಅಕ್ಷರ ಗಾತ್ರ

ಮೈಸೂರು: ಜೀವನದಲ್ಲಿ ಸರಿ ದಾರಿ ಕಂಡುಕೊಳ್ಳುವಲ್ಲಿ ಗುರುವಿನ ಪಾತ್ರ ಮಹತ್ವದ್ದು. ಅವರ ಮಾತುಗಳು, ಮಾರ್ಗದರ್ಶನ, ನಡೆ–ನುಡಿಗಳು ಪ್ರಭಾವಿಸುತ್ತವೆ. ಬದುಕಿನಲ್ಲಿ ಸಕಾರಾತ್ಮಕ ತಿರುವುಗಳಿಗೂ ಕಾರಣವಾಗುತ್ತವೆ. ಹೀಗೆ, ಸುಮಾರ್ಗ ತೋರಿಸಿದ, ಕೈ ಹಿಡಿದು ನಡೆಸಿದ ತಮ್ಮ ಶಿಕ್ಷಕರನ್ನು ವಿವಿಧ ಕ್ಷೇತ್ರಗಳ ಗಣ್ಯರು ಇಲ್ಲಿ ನೆನೆದಿದ್ದಾರೆ. ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ಅವರಿಗೆ ‘ಗುರು ವಂದನೆ’ ಸಲ್ಲಿಸಿದ್ದಾರೆ.

***

ಆ ಶಿಕ್ಷಕರ ಮರೆಯಲಾರೆ
ಚಿಕ್ಕಂದಿನಲ್ಲಿ ನಾನು ಶಾಲೆಗೆ ಹೋಗಿರಲಿಲ್ಲ. ನಮ್ಮೂರು ಸಿದ್ದರಾಮನ ಹುಂಡಿಯಲ್ಲಿ ಶಿಕ್ಷಕ ನಂಜೇಗೌಡ ಮರಳಿನ ಮೇಲೆ ಬೆರಳುಗಳಿಂದ ಬರೆಸಿ ಕಾಗುಣಿತ, ಲೆಕ್ಕ ಮತ್ತು ಸಂಸ್ಕೃತ ಕಲಿಸಿದರು. 2 ವರ್ಷದಲ್ಲಿ ನಾಲ್ಕು ವರ್ಷದಷ್ಟು ಜ್ಞಾನ ನೀಡಿದರು. ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ರಾಜಪ್ಪ ನನ್ನನ್ನು ಪರೀಕ್ಷಿಸಿ, ಓದು–ಬರಹ ಕಲಿತಿರುವುದನ್ನು ಕಂಡು ನೇರವಾಗಿ 5ನೇ ತರಗತಿಗೆ ಸೇರಿಸಿಕೊಂಡರು. ಆ ಶಿಕ್ಷಕರನ್ನು ಮರೆಯಲು ಸಾಧ್ಯವಿಲ್ಲ. ಓದಿ ಜ್ಞಾನ ಸಂಪಾದಿಸದಿದ್ದಿದ್ದರೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ.


–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

***

ಸಾಹಿತ್ಯದ ಹುಚ್ಚು ಬೆಳೆಸಿದ ಸುಧಾಕರ್
ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗೂ ಒಳ್ಳೆಯ ಶಿಕ್ಷಕರು–ಉಪನ್ಯಾಸಕರೇ ಸಿಕ್ಕರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗವಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವ ನಾನು. ಮಂಡ್ಯದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯದ ಹುಚ್ಚು ಬೆಳೆಸಿದವರು ಕಥೆಗಾರರೂ ಆಗಿದ್ದ ಉಪನ್ಯಾಸಕ ಸುಧಾಕರ್. ಅವರ ಸಲಹೆಯಂತೆಯೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಲಾ ಪದವಿಗೆ ಸೇರಿದೆ. ಅಲ್ಲಿ ಬೋಧಕರಾಗಿದ್ದ ಕುವೆಂಪು ಶಿಷ್ಯರಾಗಿದ್ದ ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ಪ್ರಭುಶಂಕರ್, ಪ್ರೊ.ಸುಜನಾ ಮತ್ತು ಪ್ರೊ.ಕರೀಮುದ್ದೀನ್ ಬಹಳ ಪ್ರಭಾವ ಬೀರಿದರು.


–ಪ್ರೊ.ಕಾಳೇಗೌಡ ನಾಗವಾರ, ಸಾಹಿತಿ

***

ಸ್ಫೂರ್ತಿಯಾದವರು...
ಕೆ.ಆರ್.ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಯ್ಯಂಗಾರ್ ದೊರೆಸ್ವಾಮಿ ಎನ್ನುವ ಶಿಕ್ಷಕರು ಇಂಗ್ಲಿಷ್ ವಿಷಯವನ್ನು ಹಾಗೂ ಸರ್ಕಾರಿ ಪಿಯು ಕಾಲೇಜಿನಲ್ಲಿ ಶ್ರೀಹರಿ ಎನ್ನುವವರು ರಸಾಯನವಿಜ್ಞಾನ ಪಾಠವನ್ನು ಅರ್ಥವಾಗುವಂತೆ ಸರಳವಾಗಿ ತಿಳಿಸಿಕೊಡುತ್ತಿದ್ದರು. ದಾರಿದೀಪವೂ, ಸ್ಫೂರ್ತಿದಾಯಕರೂ ಆಗಿದ್ದರು. ಚೆನ್ನಾಗಿ ಪಾಠ ಮಾಡುವುದರೊಂದಿಗೆ ವಿದ್ಯಾರ್ಥಿಗಳನ್ನು ಪ್ರೀತಿ–ವಿಶ್ವಾಸದಿಂದ ಕಾಣುತ್ತಿದ್ದರು. ಈಗ, ಅವರಿಬ್ಬರೂ ಇಲ್ಲ. ಆದರೆ, ಅವರನ್ನು ಆಗಾಗ ಸ್ಮರಿಸುತ್ತಿರುತ್ತೇನೆ.


–ಸುನಂದಾ ಫಾಲನೇತ್ರ, ಮೇಯರ್‌

***

ಮಾದರಿಯಾಗಿ ಕಂಡರು
ನನ್ನ ಮೇಲೆ ಬಹಳ ಪ್ರಭಾವ ಬೀರಿದ ಶಿಕ್ಷಕರೆಂದರೆ ಡಾ.ಮಾರ್ಟಿನ್ ಜೆಬ್ಬ್ರಾಜ್‌. ಬೆಂಗಳೂರಿನ ರಾಮಯ್ಯ ತಾಂತ್ರಿಕ ಸಂಸ್ಥೆಯಲ್ಲಿ 1990ರಲ್ಲಿ ನಾನು ಎಂ.ಟೆಕ್‌. ವಿದ್ಯಾರ್ಥಿಯಾಗಿದ್ದಾಗ ‍ಪ್ರಾದ್ಯಾಪಕರಾಗಿದ್ದರು. ಬೆಂಗಳೂರಿನ ಡಾ.ಅಂಬೇಡ್ಕರ್‌ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲರಾಗಿದ್ದಾಗ ನನಗೆ ಪಿಎಚ್‌.ಡಿ ಗೈಡ್ ಕೂಡ ಆಗಿದ್ದರು. ಶಿಕ್ಷಕರು ಹೇಗಿರಬೇಕು ಎನ್ನುವುದಕ್ಕೆ ಅನರ್ಥವಾಗಿದ್ದರು. ಎಲ್ಲ ವಿದ್ಯಾರ್ಥಿಗಳಿಗೂ ಮಾದರಿಯಾಗಿ ಕಾಣಿಸಿಕೊಂಡರು. ಅವರ ಬಳಿ ಕಲಿತಿದ್ದಕ್ಕೆ ಜೀವನದಲ್ಲಿ ತತ್ವಗಳನ್ನು ಅಳವಡಿಸಿಕೊಂಡಿದ್ದೇನೆ. ಈ ಹಂತಕ್ಕೆ ಬಂದಿದ್ದೇನೆ.


–ಪ್ರೊ.ಎಸ್‌.ವಿದ್ಯಾಶಂಕರ್‌, ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ

***

ಆದರ್ಶ ವ್ಯಕ್ತಿತ್ವ ಕಲಿಸಿದ ಮಂಜುನಾಥ್
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ನನ್ನ ಮೇಲೆತುಂಬಾಪ್ರಭಾವಬೀರಿದಶಿಕ್ಷಕರು. ನನಗೆ ಪ್ರಾಧ್ಯಾಪಕರಾಗಿದ್ದರು. ಜಯದೇವ ಹ್ರದ್ರೋಗ ಸಂಸ್ಥೆಯಲ್ಲಿ ಓದುವಾಗ ಬಹಳ ಕಲಿಸಿದರು. ತುಂಬಾ ಜ್ಞಾನಿ. ವಿಷಯಗಳ ಬಗ್ಗೆ ಆಳವಾಗಿ ತಿಳಿಸಿದವರು. ರೋಗಿಗಳನ್ನು ನೋಡುವುದು, ಕಾಯಿಲೆ ಪತ್ತೆ ಮಾಡುವುದು, ಬಡವರಿಗೆ ಕಾಳಜಿ ತೋರುವುದು, ಮಾನವೀಯ ಗುಣಗಳನ್ನು ಅವರಿಂದ ಕಲಿತೆ. ಆದರ್ಶ ವ್ಯಕ್ತಿತ್ವಕ್ಕೆ ಮಾದರಿ ಅವರು.


–ಡಾ.ಕೆ.ಎಸ್.ಸದಾನಂದ, ಮೆಡಿಕಲ್ ಸೂಪರಿಂಟೆಂಡೆಂಟ್‌, ಜಯದೇವ ಹೃದ್ರೋಗ ಆಸ್ಪತ್ರೆ, ಮೈಸೂರು

***

ಪ್ರಭಾವ ಬೀರಿದ ಹಲವರು
ನನಗೆ ಪ್ರಾಥಮಿಕ ಶಾಲಾ ಹಂತದಿಂದ ಸ್ನಾತಕೋತ್ತರ ಪದವಿವರೆಗೂ ಹಲವು ಶಿಕ್ಷಕರು ಸ್ಫೂರ್ತಿ ನೀಡಿದ್ದಾರೆ. ಪಠ್ಯಕ್ರಮದ ಬೋಧನೆಯಿಂದಾಚೆಗೆ, ಬದುಕಿನಲ್ಲಿ ಹೇಗಿರಬೇಕು ಎನ್ನುವುದನ್ನು ಕಲಿಸಿದವರು ಸಾಕಷ್ಟು ಮಂದಿ. ತಂದೆ–ತಾಯಿಯೂ ಗುರುಗಳಾಗಿ ಪ್ರಭಾವ ಬೀರಿದ್ದಾರೆ. ನಾನು ಪಾಠ ಮಾಡಿದ ವಿದ್ಯಾರ್ಥಿಗಳಿಂದಲೂ ಬಹಳಷ್ಟು ಕಲಿತಿದ್ದೇನೆ. ಜೀವನದಲ್ಲಿ ಎದುರಾಗುವವರೆಲ್ಲರೂ ಗುರುಗಳೇ.


–ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್, ಪ್ರಾಂಶುಪಾಲರು, ಮಹಾರಾಜ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT