ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಸಾಯದ ಕೆಲಸದತ್ತ ಅಸಡ್ಡೆ ಸಲ್ಲದು: ಜಗದೀಶ ಶೆಟ್ಟರ್‌

Published 9 ಫೆಬ್ರುವರಿ 2024, 14:00 IST
Last Updated 9 ಫೆಬ್ರುವರಿ 2024, 14:00 IST
ಅಕ್ಷರ ಗಾತ್ರ

ಮೈಸೂರು: ‘ಕೃಷಿ ವೃತ್ತಿಯ ಬಗೆಗಿರುವ ಅಸಡ್ಡೆಯ ಮನೋಭಾವ ದೂರಾಗಬೇಕು’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ 4ನೇ ದಿನವಾದ ಶುಕ್ರವಾರ ಹಮ್ಮಿಕೊಂಡಿದ್ದ ‘ಕೃಷಿಯಲ್ಲಿ ನೀರಿನ ಸದ್ಬಳಕೆ’ ವಿಷಯದ ಕುರಿತ ಕೃಷಿ ವಿಚಾರ ಸಂಕಿರಣದ ಉದ್ಘಾಟನೆ ಮತ್ತು ಜೈವಿಕ ಪೀಡೆನಾಶಕಗಳ ಉತ್ಪಾದನಾ ಪ್ರಯೋಗಾಲಯದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

‘ಇತರ ವೃತ್ತಿಗಳಿಗೆ ಕೊಡುವಷ್ಟು ಮಹತ್ವವನ್ನು ರೈತರಿಗೆ ಕೊಡದಿರುವುದು ವಿಷಾದನೀಯ’ ಎಂದರು.

‘ಕ್ರಿಕೆಟ್‌ಗೆ ಸಿಗುತ್ತಿರುವಷ್ಟು ಮಹತ್ವ ನಮ್ಮ ದೇಸಿ ಆಟಗಳಿಗೆ ಸಿಗುತ್ತಿಲ್ಲ.‌ ಅವುಗಳಿಗೆ ಪ್ರಾಮುಖ್ಯತೆ ದೊರಕಿಸುವ ನಿಟ್ಟಿನಲ್ಲಿ ಸುತ್ತೂರು ಜಾತ್ರೆಯಲ್ಲಿ ಅಂತಹ ಆಟಗಳನ್ನು ಆಡಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಸುತ್ತೂರು ಮಠವು ಆರೋಗ್ಯ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರ ಮತ್ತು ಎಲ್ಲ ವರ್ಗದ ಜನರಿಗೆ ಸೇವಾ ಕಾರ್ಯವನ್ನು ಮಾಡುತ್ತಿದೆ. ಈ ಮಠದ ಬಗ್ಗೆ ಕೇಳದವರು ದೇಶದಲ್ಲಿ ಯಾರೂ ಇಲ್ಲವೆಂದೇ ಹೇಳಬಹುದು. ಧಾರ್ಮಿಕತೆಯ ಚಿಂತನೆಯನ್ನು ಪ್ರತಿಯೊಬ್ಬರಲ್ಲೂ ಮೂಡಿಸುವಲ್ಲಿ ಮಠದ ಕಾರ್ಯ ಅನನ್ಯವಾದುದು. ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮನಸ್ಸು ಮಾಡಿದರೆ ಇಡೀ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ಇದೆ’ ಎಂದರು.

ಉತ್ತಮ ಇಳುವರಿ: ಬೆಂಗಳೂರಿನ ಎಲ್‌ಸಾಲ್‌ ಇರಿಗೇಷನ್‌ ಸಲ್ಯೂಷನ್‌ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥ ಎ.ರಾಜಶೇಖರ್ ಮಾತನಾಡಿ, ‘ಬೇಡಿಕೆ ಹೆಚ್ಚುತ್ತಿರುವ ಕಾರಣ ನೀರಾವರಿ ವ್ಯವಸ್ಥೆಯ ಮೇಲೆ ಒತ್ತಡ ಜಾಸ್ತಿಯಾಗುತ್ತಿದೆ. ಆದ್ದರಿಂದ ಹನಿ ನೀರಾವರಿ ತಂತ್ರಜ್ಞಾನ‌ ಬಳಸಿಕೊಳ್ಳಬೇಕು. ಮಣ್ಣಿನ ತೇವಾಂಶದ ಮಟ್ಟ ತಿಳಿದು ನೀರಾವರಿ ಒದಗಿಸುವ ತಂತ್ರಜ್ಞಾನವೂ‌ ಬಂದಿದ್ದು ಅದನ್ನು ಬಳಸಬೇಕು. ಇದರಿಂದ ನೀರು ವ್ಯರ್ಥವಾಗುವುದು ತಪ್ಪಿಸಬಹುದು; ಉತ್ತಮ ಇಳುವರಿಯೂ ಸಾಧ್ಯವಿದೆ’ ಎಂದು ಮಾಹಿತಿ ನೀಡಿದರು.

ಅಮೆರಿಕದ ಕೃಷಿ ವಿಜ್ಞಾನದ ಸಂಶೋಧಕಿ ಮಮತಾ ಶೇಖರ್ ಮಾತನಾಡಿ, ‘ರಾಜ್ಯದಿಂದ ಗಾಣದ ಎಣ್ಣೆ, ಸಿರಿಧಾನ್ಯ ಹಾಗೂ ಅದರಿಂದ ಮಾಡಿದ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿ ಭತ್ತದ ಮಹದೇವ್ (ತಂದೆ ಭತ್ತದ ಮಹದೇವಪ್ಪ) ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದೇನೆ. ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಗಾಣದೆಣ್ಣೆ ತೆಗೆಯುತ್ತಿರುವುದು, ಜಮೀನಿನಲ್ಲಿ ಕೃಷಿ ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಗ್ರಾಹಕರಿಗೆ ತಿಳಿಸುವುದಕ್ಕಾಗಿ ವೆಬ್ ಕ್ಯಾಮೆರಾ ಅಳವಡಿಸುವ ಯೋಜನೆ ಇದೆ. ಇದಕ್ಕಾಗಿ ಕೆ.ಆರ್.ನಗರದ ಗಾಣದೆಣ್ಣೆ ತಯಾರಕರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದು ತಿಳಿಸಿದರು.

ನ್ಯಾಷನಲ್‌ ಫರ್ಟಿಲೈಸರ್ಸ್‌ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ವಿಠಲ್ ಮಾತನಾಡಿ, ‘ಇಲ್ಲಿ ನಿರ್ಮಿಸುತ್ತಿರುವ ಜೈವಿಕ ಪೀಡೆನಾಶಕಗಳ ಉತ್ಪಾದನಾ ಪ್ರಯೋಗಾಲಯದಲ್ಲಿ ರೈತರಿಗೆ ಜೆಎಸ್‌ಎಸ್‌ ಕೆವಿಕೆ ಸಹಯೋಗದಲ್ಲಿ ತರಬೇತಿ ನೀಡಲಾಗುವುದು’ ಎಂದು ಹೇಳಿದರು.

ನ್ಯಾಷನಲ್‌ ಫರ್ಟಿಲೈಸರ್ಸ್‌ ಲಿ. ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಯು. ಸರವಣನ್, ಊಟಿಯ ಚಹಾ ಬೋರ್ಡ್‌ ಸದಸ್ಯ ರಾಜೇಶ್, ಸಾನ್ನಿಧ್ಯ ವಹಿಸಿದ್ದ ಊಟಿಯ ಎಡಪಲ್ಲಿಯ ಸಿದ್ಧಗಿರಿ ಸಾಯಿ ಧರ್ಮಕ್ಷೇತ್ರದ ಮಾತಾಶಕ್ತಿ ಮಾಯಿ ಮಾತನಾಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಪಾಲ್ಗೊಂಡಿದ್ದರು.

‘ಭತ್ತ, ಕಬ್ಬಿನಿಂದ ಬದುಕು ಹಸನಾಗದು’

ಮಾಜಿ ಸಚಿವ ಸಿ‌.ಎಸ್. ಪುಟ್ಟರಾಜು ಮಾತನಾಡಿ, ‘ರೈತರು ದಿನೇ ದಿನೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರವೇ ಎಲ್ಲವನ್ನೂ ಮಾಡಲೆಂದು ಬಯಸಬಾರದು. ಯಾರ ಮೇಲೂ ಅವಲಂಬನೆ ಆಗದಂತೆ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ಇಸ್ರೇಲ್ ಮಾದರಿಯ ಕೃಷಿಯನ್ನು ಕರ್ನಾಟಕದಲ್ಲಿ ಅಳವಡಿಸಬೇಕು ಎಂಬ ಉದ್ದೇಶದಿಂದ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅಲ್ಲಿಗೆ ಪ್ರವಾಸ ಕೈಗೊಂಡಿದ್ದೆವು’ ಎಂದು ಹೇಳಿದರು.

‘ಭತ್ತ ಅಥವಾ ಕಬ್ಬು ಬೆಳೆದರೆ ನಮ್ಮ ಬದುಕು ಹಸನಾಗುತ್ತದೆ ಎಂಬ ಭಾವನೆಯನ್ನು ರೈತರು ಬಿಡಬೇಕು. ಬೆಳೆ ವೈವಿಧ್ಯದ ಮೂಲಕ ಲಾಭ ಕಾಣಬೇಕು’ ಎಂದು ಸಲಹೆ ನೀಡಿದರು.

‘ಹಿಂದೆ ನಾವೆಲ್ಲರೂ ಕಣದಲ್ಲಿ ಒಕ್ಕಣೆ ಮಾಡುತ್ತಿದ್ದೆವು. ಈಗ ರೈತರು ಡಾಂಬರು ರಸ್ತೆಯಲ್ಲೇ ಒಕ್ಕಣೆ ಮಾಡಬೇಕಾದ ಸ್ಥಿತಿ ಇದೆ. ಎಲ್ಲೆಲ್ಲೋ ಸುತ್ತಾಡಿದ ವಾಹನಗಳು ಹರಿದ ಆಹಾರ ಪದಾರ್ಥಗಳನ್ನು ನಾವು ಮನೆಗೆ ತೆಗೆದುಕೊಂಡು ಹೋಗಿ ತಿನ್ನುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠದ ಕೊಡುಗೆ ಅಪಾರವಾಗಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದೂರದೃಷ್ಟಿಯಿಂದಾಗಿ ಮಠಕ್ಕೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಬಂದಿದೆ’ ಎಂದು ಶ್ಲಾಘಿಸಿದರು.

‘ನಿರಂತರ ಹಸಿರು ಕ್ರಾಂತಿ ಅಗತ್ಯ’

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್ ಮಾತನಾಡಿ, ‘ಸ್ವಾತಂತ್ರ್ಯ ದೊರೆತಾಗ ಭಾರತವು ಹಸಿವಿನಿಂದ ಕೂಡಿದ ದೇಶವಾಗಿತ್ತು. ಈಗ ಆಹಾರ ಧಾನ್ಯಗಳನ್ನು ಹೊರ ದೇಶಗಳಿಗೆ ಕಳುಹಿಸುವ ಸಾಮರ್ಥ್ಯ ಬಂದಿರುವುದಕ್ಕೆ ರೈತರ ಹಾಗೂ ಶ್ರಮಿಕರ ಕೊಡುಗೆಯೇ ಕಾರಣ’ ಎಂದರು.

‘ಆಗ ಕರೆ ನೀಡಿದ್ದ ಹಸಿರು ಕ್ರಾಂತಿ ಯಶಸ್ವಿಯಾಗಿದೆ. ಆದರೆ, ಜನಸಂಖ್ಯೆ ಹೆಚ್ಚುತ್ತಿರುವುದರಿಂದ 2030ರ ವೇಳೆಗೆ ಆಹಾರ ಪದಾರ್ಥ ಶೇ 30ರಷ್ಟು ಜಾಸ್ತಿ ಬೇಕಾಗುತ್ತದೆ. ಇಲ್ಲದಿದ್ದರೆ ಆಹಾರದ ಕೊರತೆ ಎದುರಾಗಲಿದೆ. ಆದ್ದರಿಂದ ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕಾಗಿದೆ’ ಎಂದು ಪ್ರತಿಪಾದಿಸಿದರು.

‘ಕೃಷಿ ರಂಗ ಇಂದು ಕವಲು ದಾರಿಯಲ್ಲಿದೆ. ಯುವ ಜನರು ಈ ಕ್ಷೇತ್ರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳು ಮಾಡುತ್ತಿದ್ದೇವೆ. ಸಾವಯವ ಇಂಗಾಲದ ಅಂಶ ಬಹಳ ಕಡಿಮೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT