ಮೈಸೂರು: ‘ಕಾನೂನುಗಳನ್ನು ಜನರ ಪರವಾಗಿ ರೂಪಿಸುವ ಬದಲಿಗೆ, ಜನಪ್ರತಿನಿಧಿ ಪರವಾಗಿ ಇರುವಂತೆ ನೋಡಿಕೊಳ್ಳುವ ಕೆಲಸವನ್ನು ನಮ್ಮನ್ನಾಳುವ ಸರ್ಕಾರಗಳು ಮಾಡುತ್ತಿವೆ’ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆರೋಪಿಸಿದರು.
ಕಾರ್ಮಿಕ ಚಳವಳಿಯ ನಾಯಕ ಎಸ್.ಸೂರ್ಯನಾರಾಯಣರಾವ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಸಿಐಟಿಯು ಜಿಲ್ಲಾ ಸಮಿತಿಯಿಂದ ಇಲ್ಲಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ‘ಪ್ರಸ್ತುತ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಇರುವ ಸವಾಲುಗಳು’ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
‘ಇಡೀ ದೇಶದಲ್ಲಿನ ಸಂಪತ್ತು ಕೇವಲ ಐದು ಕುಟುಂಬಗಳಿಗೆ ಮಾತ್ರ ಸೇರುತ್ತಿದ್ದು, ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಆಗಿಲ್ಲ ಎಂಬ ತಪ್ಪು ಅಂಕಿ–ಅಂಶಗಳನ್ನು ನೀಡಿ ಬಡವರು ಹಾಗೂ ಜನಸಾಮಾನ್ಯರನ್ನು ವಂಚಿಸುತ್ತಿದೆ’ ದೂರಿದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಯಾವ ಪಕ್ಷದ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎನ್ನುವುದಕ್ಕಿಂತಲೂ ಆಳುವಂಥವರ ತತ್ವ ಯಾವುದು ಎಂಬುದನ್ನು ಅರಿತುಕೊಂಡು ಆರಿಸಿಕೊಳ್ಳುವ ಸಾಮರ್ಥ್ಯ ನಮಗೆ ಬರಬೇಕಿದೆ’ ಎಂದು ಆಶಿಸಿದರು.
ಬಡವರು ಗೆಲ್ಲಲಾಗದ ಸ್ಥಿತಿ: ‘ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸತ್ತಿಗೆ ಆಯ್ಕೆಯಾದವರಲ್ಲಿ ಕೆಲವರನ್ನು ಹೊರತುಪಡಿಸಿದರೆ ಉಳಿದವರು ಕೋಟ್ಯಂತರ ರೂಪಾಯಿ ಹಣವಂತರೇ ಆಗಿದ್ದಾರೆ. ಬಡವರು ಆಯ್ಕೆ ಆಗುವುದಕ್ಕೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ಆ ಮಟ್ಟಿಗೆ ಪ್ರಜಾಪ್ರಭುತ್ವ ಕುಸಿದಿರುವುದಕ್ಕೆ ನಾವೇ ಕಾರಣರಾಗಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಸಮತಾವಾದದ ಚಳವಳಿಯಲ್ಲಿ ಸೂರ್ಯನಾರಾಯಣ ರಾವ್ ಕೊಡುಗೆ ಅನನ್ಯವಾದುದು. ಕೆಂಬಾವುಟದ ಚಳವಳಿ ಸುಲಭವಲ್ಲ. ಪ್ರಗತಿಪರ ಚಳವಳಿಯ ಕೆಲಸವು ಮೈಸೂರು ದಸರಾ ಮೆರವಣಿಗೆ ರೀತಿ ಸರಳವಾಗಿರುವುದಿಲ್ಲ. ಅದು ಆತ್ಮವಿಶ್ವಾಸವನ್ನು ಕುಗ್ಗಿಸುವಂತಹ ಏರು ನಡೆ. ಅದಕ್ಕೆ ದೃಢವಿಶ್ವಾಸ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಚಳವಳಿಯ ಕೊಡುಗೆ ದೊಡ್ಡದು. ಸಮಾಜದ ಸುಧಾರಣೆಯಲ್ಲಿ ಎಡಪಂಥೀಯರ ಭಾಗವಹಿಸುವಿಕೆ ಮರೆಯುವಂತಿಲ್ಲ’ ಎಂದರು.
‘ಸರ್ಕಾರಗಳು ಯಾರ ಪರ ಇವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗ್ರಾಹಕ ಬೆಲೆ ಸೂಚ್ಯಂಕ ಹೆಚ್ಚಾಗದಿದ್ದರೆ ನೌಕರರ ವೇತನ ಅಥವಾ ದುಡಿಯುವ ವರ್ಗದವರ ಕೂಲಿ ಜಾಸ್ತಿ ಆಗುವುದಿಲ್ಲ. ಇದಕ್ಕಾಗಿಯೇ ಸರ್ಕಾರ ಆಂಕಿ–ಅಂಶಗಳನ್ನು ವ್ಯವಸ್ಥಿತವಾಗಿ ಮುಚ್ಚಿಟ್ಟು ಜನರಿಗೆ ಕೊಡಬೇಕಾದ ಹಣವನ್ನು ಬೇರೆಡೆಗೆ ಬಳಸಿಕೊಳ್ಳುತ್ತಿದೆ’ ಎಂದು ವಿಶ್ಲೇಷಿಸಿದರು.
ನಾಟಕ ಪ್ರದರ್ಶನ: ಸಿಐಟಿಯು ಜಿಲ್ಲಾ ಸಮಿತಿಯ ಅಧ್ಯಕ್ಷ ಜಿ.ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿರಾವ್, ರಾಜ್ಯ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಷ್ಪಾವತಿ, ಜಗದೀಶ್ ಸೂರ್ಯ ಪಾಲ್ಗೊಂಡಿದ್ದರು.
ನಂತರ, ಮಂಡ್ಯದ ವಿಮಲಾರಣದಿವೆ ಮಹಿಳಾ ತಂಡದಿಂದ ರಾಜಪ್ಪ ದಳವಾಯಿ ರಚನೆಯ, ಕೆ.ಆರ್.ಸುಮತಿ ನಿರ್ದೇಶನದ ‘ನ್ಯಾಯ ಕೇಳಿದ ನಿಂಗವ್ವ’ ಹಾಗೂ ರಾಜಪ್ಪ ದಳವಾಯಿ ರಚನೆಯ ಮಾಲತೇಶ ಬಡಿಗೇರ ನಿರ್ದೇಶನದಲ್ಲಿ ಸೂರ್ಯನಾರಾಯಣ ರಾವ್ ಜೀವನಚರಿತ್ರೆ ಆಧಾರಿತ ‘ಕಾಮ್ರೇಡ್ ಸೂರಿ’ ನಾಟಕಗಳನ್ನು ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.