ಬುಧವಾರ, ಮಾರ್ಚ್ 22, 2023
33 °C

ನಾಗರಹೊಳೆ: ಉರುಳಿಗೆ ಸಿಲುಕಿ ಹತ್ಯೆಯಾಗಿದ್ದ ಹೆಣ್ಣು ಹುಲಿಯ 3 ಮರಿಗಳಿಂದ ಬೇಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ಹತ್ಯೆಯಾದ ಹೆಣ್ಣು ಹುಲಿಯ ಮೂರು ಮರಿಗಳು ಬೇಟೆಯಾಡಿ ಒಟ್ಟಿಗೆ ಆಹಾರ ಸೇವಿಸುತ್ತಿರುವ ದೃಶ್ಯ ಟ್ರ್ಯಾಪಿಂಗ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಜಿಂಕೆಯನ್ನು ಯಾವುದೋ ಮಾಂಸಹಾರಿ ಪ್ರಾಣಿ ದಾಳಿ ಮಾಡಿ ಕೊಂದು ಸ್ವಲ್ಪ ಮಾಂಸವನ್ನು ತಿಂದಿರುವುದು ಮಂಗಳವಾರ ಕಂಡುಬಂದಿ‌ತ್ತು. ಹೀಗಾಗಿ, ಆ ಕಳೇಬರದ ಸುತ್ತ ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಸೆರೆಯಾದ ದೃಶ್ಯಗಳನ್ನು ಗಮನಿಸಿದಾಗ, ಮೂರು ಹುಲಿ ಮರಿಗಳು ಬಂದು ಜಿಂಕೆಯನ್ನು ತಿಂದಿರುವುದು ಕಂಡುಬಂದಿದೆ. ಅವು ಆರೋಗ್ಯವಾಗಿರುವುದನ್ನೂ ಗುರುತಿಸಲಾಗಿದೆ’ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಡಿಸಿಎಫ್‌ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

‘ಆ ಹುಲಿ ಮರಿಗಳು 10ರಿಂದ 11 ತಿಂಗಳ ಪ್ರಾಯದವಾಗಿವೆ. ಸ್ವತಃ ಬೇಟೆಯಾಡಿ ತಿಂದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅವು ಬೇಟೆಯಾಡುವ ಕಲೆ ಕಲಿತಿರುವುದರಿಂದ ತಾವಾಗಿಯೇ ಬದುಕಬಲ್ಲವು. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲೇ ತಾಯಿ ಹುಲಿಯ ಓಡಾಡುತ್ತಿದ್ದ ಕಡೆಯಲ್ಲೇ ಕಂಡುಬರುತ್ತಿವೆ. ಅವುಗಳ ಚಲನವಲನದ ಮೇಲೆ ನಿರಂತರ ನಿಗಾ ವಹಿಸಿ, ಅವುಗಳನ್ನು ರಕ್ಷಿಸಲು ಇಲಾಖೆಯಿಂದ ಕ್ರಮ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಅಂತರಸಂತೆ ವನ್ಯಜೀವಿ ವಲಯದ ಸರಹದ್ದಿನಿಂದ ಸುಮಾರು 300 ಮೀಟರ್ ಅಂತರದ ಖಾಸಗಿ ಜಮೀನಿನ ಬಳಿ ಉರುಳಿಗೆ ಸಿಲುಕಿ ತಾಯಿ ಹುಲಿ ನ.12ರಂದು ಮೃತಪಟ್ಟಿ‌ತ್ತು. ಇದರಿಂದ ಅನಾಥವಾಗಿದ್ದ 3 ಹುಲಿ ಮರಿಗಳ ರಕ್ಷಣೆಗೆ ನ.13ರಂದು ಆನೆಗಳು, ಡ್ರೋನ್ ಬಳಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ಆಗ ಹೆಜ್ಜೆ ಗುರುತುಗಳು ಕಂಡುಬಂದಿದ್ದವು. ಅವುಗಳನ್ನು ಸೆರೆ ಹಿಡಿದು ರಕ್ಷಿಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು