ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | KR ಆಸ್ಪತ್ರೆ ಹಳೆಯ ಕಟ್ಟಡದಲ್ಲೇ ಚಿಕಿತ್ಸೆ: ಆವರಣದಲ್ಲಿ ಕುಡುಕರ ಕಾಟ

Published 23 ಆಗಸ್ಟ್ 2024, 5:12 IST
Last Updated 23 ಆಗಸ್ಟ್ 2024, 5:12 IST
ಅಕ್ಷರ ಗಾತ್ರ

ಮೈಸೂರು: ಶತಮಾನೋತ್ಸವದ ಸಂಭ್ರಮದಲ್ಲಿರುವ ಕೆ.ಆರ್‌.ಆಸ್ಪತ್ರೆಯಲ್ಲಿ ಬಿರುಕು ಬಿಟ್ಟ ಗೋಡೆಗಳ ನಡುವೆಯೇ ರೋಗಿಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಅನೇಕ ಕಡೆಗಳಲ್ಲಿ ಸಿಮೆಂಟ್‌ ಎದ್ದು ಬಂದಿದ್ದು, ಗೋಡೆಗಳು ದುರಸ್ತಿಗಾಗಿ ಕಾಯುತ್ತಿವೆ.

ಈಚೆಗೆ ಆಸ್ಪತ್ರೆಯಲ್ಲಿರುವ ಕಟ್ಟಡಗಳ ಅವ್ಯವಸ್ಥೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದು, ಅದರಲ್ಲಿ, ಅಪಘಾತವಾದವರಿಗೆ ಚಿಕಿತ್ಸೆ ನೀಡುವ ಕೊಠಡಿ ಚಿತ್ರೀಕರಿಸಿ, ‘ಇದು ಶತಮಾನೋತ್ಸವ ಆಚರಿಸುತ್ತಿರುವ ಆಸ್ಪತ್ರೆ’ ಎಂದು ವ್ಯಂಗ್ಯವಾಗಿ ಬರೆಯಲಾಗಿತ್ತು. ಇದೇ ರೀತಿ ಗೋಡೆಗೆ ಬಳಿದ ಬಣ್ಣದ ಪದರುಗಳು ಕೂಡ ಉದುರುತ್ತಿವೆ.

ಕಣ್ಣಿನ ತಪಾಸಣೆ ನಡೆಸುವ ಕೊಠಡಿಯು ಹಳೆಯ ಕಟ್ಟಡದಲ್ಲಿದೆ. ಗೋಡೆಯ ಕಾಂಕ್ರಿಟ್ ಕಳಚಿ ಬಿದ್ದಿದೆ. ಅದರ ನಡುವೆಯೇ ರೋಗಿಗಳು ಚಿಕಿತ್ಸೆ ಪಡೆಯಬೇಕು. ಕರ್ತವ್ಯ ನಿರತ ವೈದ್ಯರ ಕೊಠಡಿಗಳಲ್ಲೂ ಸ್ವಚ್ಛತೆ ಇಲ್ಲ. ಗೋಡೆಗಳೂ ಬಿರುಕು ಬಿಟ್ಟಿವೆ.

ಆಡಳಿತ ಮಂಡಳಿಯು ಸರ್ಕಾರದ ಅನುದಾನದಲ್ಲಿ ಆಸ್ಪತ್ರೆ ನವೀಕರಣದ ಕೆಲಸಗಳನ್ನು ಮಾಡಿಸುತ್ತಿದ್ದು, ‘ಸೆಪ್ಟೆಂಬರ್‌ನಲ್ಲಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮದ ಮೊದಲು ಗೋಡೆಗಳು ಮೊದಲಿನ ಸ್ಥಿತಿಗೆ ತಲುಪಬಹುದೇ’ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಶೌಚಾಲಯ ಸ್ವಚ್ಛವಿಲ್ಲ: ‘ಆಸ್ಪತ್ರೆಯ ಪ್ರತಿ ವಾರ್ಡ್‌ನಲ್ಲೂ ಶೌಚಾಲಯಗಳಿದ್ದು, ದುರ್ನಾತ ಬೀರುತ್ತಿವೆ. ಅನೇಕ ಬಾರಿ ರೋಗಿಗಳು ಸಾಧ್ಯವಾದಷ್ಟು ಶೌಚಾಲಯದಿಂದ ದೂರವಿರುವ ಬೆಡ್‌ಗಳಿಗೆ ಬೇಡಿಕೆ ಇಡುತ್ತಾರೆ’ ಎಂದು ವೈದ್ಯಕೀಯ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಪತ್ನಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ್ದೇನೆ. ಸಿಬ್ಬಂದಿ ನೆಪ ಮಾತ್ರಕ್ಕೆ ಶೌಚಾಲಯ ಸ್ವಚ್ಛಗೊಳಿಸಿ ತೆರಳುತ್ತಾರೆ. ದುರ್ವಾಸನೆಯ ನಡುವೆಯೇ ದಿನ ಕಳೆಯಬೇಕು’ ಎಂದು ರೋಗಿಯೊಬ್ಬರ ಸಹಾಯಕರು ಅಸಹಾಯಕತೆ ವ್ಯಕ್ತಪಡಿಸಿದರು.

ಕುಡುಕರ ಉಪಟಳ: ಆಸ್ಪತ್ರೆ ಆವರಣದಲ್ಲಿ ಕುಡುಕರು ಹಾಗೂ ಧೂಮಪಾನಿಗಳ ಉಪಟಳ ಹೆಚ್ಚಿದೆ. ರಾತ್ರಿ ವೇಳೆ ಹೊರಗೆ ಮದ್ಯ ಸೇವಿಸಿ ಬಂದು ಆಸ್ಪತ್ರೆ ಆವರಣ ಸೇರಿಕೊಳ್ಳುತ್ತಾರೆ. ಜನರ ಓಡಾಟ ಕಡಿಮೆ ಇರುವ ಪ್ರದೇಶದಲ್ಲಿ ಮಲಗುತ್ತಾರೆ. ತೃತೀಯ ಲಿಂಗಿಗಳೂ ಇಲ್ಲಿಗೇ ಬಂದಿರುತ್ತಾರೆ.

ಈಚೆಗೆ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಅವರನ್ನು ನೋಡಿ ಭಯದಿಂದ ಓಡಿ ಹೋದ ಪ್ರಸಂಗವೂ ನಡೆದಿದೆ. ‘ಪ್ರಜಾವಾಣಿ’ ಸರಣಿ ಬಳಿಕ ಇಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆ ಮಾಡಲಾಗಿದೆ. ಆದರೆ, ‘ಪ್ರವೇಶ ದ್ವಾರದಲ್ಲೇ ಅವರನ್ನು ತಡೆದು ಹೊರಗೆ ಕಳಿಸುವ ವ್ಯವಸ್ಥೆ ಆಗಬೇಕು’ ಎಂಬುದು ಸಾರ್ವಜನಿಕರ ಆಗ್ರಹ.

ರೈಲು ನಿಲ್ದಾಣಕ್ಕೆ ಬರುವವರಿಗೂ ಇದು ಅತಿಥಿ ಗೃಹದಂತಾಗಿದೆ. ರೈಲು ನಿಲ್ದಾಣದಿಂದ ಮುಖ್ಯರಸ್ತೆಯಲ್ಲಿ ನೇರವಾಗಿ ಬಂದಾಗ ಆಸ್ಪತ್ರೆ ದೊರೆಯುವುದರಿಂದ ಅನೇಕರು ಇದೇ ಆವರಣದಲ್ಲಿ ರಾತ್ರಿ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ರೋಗಿಗಳಿಗೆ ಚಿಕಿತ್ಸೆಗಾಗಿ ಇರುವ ಆಸ್ಪತ್ರೆ ಇತರರ ವಿಶ್ರಾಂತಿ ತಾಣವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವೂ ಗಮನಹರಿಸಬೇಕು ಎನ್ನುವುದು ಇಲ್ಲಿನ ಅಧಿಕಾರಿಗಳ ಮಾತು.

- ಆಸ್ಪತ್ರೆಯ ನವೀಕರಣ ಕೆಲಸಗಳು ಭರದಿಂದ ಸಾಗುತ್ತಿವೆ. ಗೋಡೆಗಳ ದುರಸ್ತಿ ಮಾಡಲಾಗುತ್ತಿದೆ. ಎಲ್ಲಾ ಕೊಠಡಿಗಳಿಗೂ ಸುಣ್ಣ–ಬಣ್ಣ ಬಳಿಯಲಾಗುವುದು ತಿಂಗಳ ಒಳಗಾಗಿ ಈ ಕೆಲಸ ಪೂರ್ಣಗೊಳ್ಳಲಿದೆ.
ಶೋಭಾ ಕೆ.ಆರ್‌.ಆಸ್ಪತ್ರೆ ಸೂಪರಿಂಟೆಂಡೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT