ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಅನುದಾನ ಎಂಸಿಎಗೆ: ಆಕ್ಷೇಪ

ಮೂಲ ಆದಿವಾಸಿಗಳ ಪ್ರತಿರೋಧದ ನಡುವೆಯೂ ಕಾರ್ಯಾದೇಶ
Published 1 ಜೂನ್ 2024, 7:39 IST
Last Updated 1 ಜೂನ್ 2024, 7:39 IST
ಅಕ್ಷರ ಗಾತ್ರ

ಮೈಸೂರು: ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಮಾಹಿತಿ, ಜಾಗೃತಿ, ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ₹ 6.90 ಕೋಟಿ ಅನುದಾನವನ್ನು ಎಂಎಎ (ಮಾರ್ಕೆಟಿಂಗ್, ಕಮ್ಯುನಿಕೇಶನ್ ಅಂಡ್ ಅಡ್ವಟೈಸಿಂಗ್ ಲಿಮಿಟೆಡ್)ಗೆ ಕೊಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇಲ್ಲಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆಎಸ್‌ಟಿಆರ್‌ಐ)ಗೆ 2021–22ನೇ ಸಾಲಿನಲ್ಲಿ ಅನುದಾನ ದೊರೆತಿದೆ. ಸ್ವಂತ ಕಟ್ಟಡ, ಸಿಬ್ಬಂದಿ ಸೌಲಭ್ಯಗಳಿದ್ದರೂ ಸಂಸ್ಥೆಯಿಂದಲೇ ಚಟುವಟಿಕೆಗಳನ್ನು ಕೈಗೊಳ್ಳದೇ ಎಂಸಿಎ ‘ಮೊರೆ’ ಹೋಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ‘ಸ್ವಹಿತಾಸಕ್ತಿಯೇ ಇದಕ್ಕೆ ಕಾರಣ’ ಎಂಬ ಆರೋಪವೂ ಕೇಳಿಬಂದಿದೆ.

ಈ ಸಂಬಂಧ, ರಾಜ್ಯ ಮೂಲ ಆದಿವಾಸಿ ವೇದಿಕೆಯು ಮುಖ್ಯಮಂತ್ರಿ ಕಚೇರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಪತ್ರ ಬರೆದಿದ್ದು, ಸ್ಪಂದನೆ ಸಿಗದಿರುವುದು ಮುಖಂಡರ ಅಸಮಾಧಾನಕ್ಕೆ  ಕಾರಣವಾಗಿದೆ.

ಸ್ವ ಹಿತಾಸಕ್ತಿಗಾಗಿ

‘ಹಿಂದೆ ₹ 1 ಕೋಟಿ ವೆಚ್ಚದಲ್ಲಿ ಫೋಟೊ ಗ್ಯಾಲರಿಗಾಗಿ ಎಂಸಿಎಗೇ ನೀಡಿದ್ದ ಅನುದಾನದಲ್ಲಿ ಗುಣಮಟ್ಟದ ಕೆಲಸವಾಗಿಲ್ಲ. ಮತ್ತೆ ದೊಡ್ಡ ಮೊತ್ತದ ಯೋಜನೆಯನ್ನು ಕೊಡುತ್ತಿರುವುದು ಎಷ್ಟು ಸರಿ?’ ಎಂಬುದು ಮುಖಂಡರ ಪ್ರಶ್ನೆ. ‘ಖಾಸಗಿಯವರಿಗೆ ಅಥವಾ ತಮ್ಮವರ ಟ್ರಸ್ಟ್‌ಗಳಿಗೆ ವಹಿಸುವ ಪ್ರಯತ್ನವೂ ನಡೆಯುತ್ತಿದೆ’ ಎಂಬ ದೂರಿದೆ.

‘ಸಂಸ್ಥೆ ಉಳಿಯಬೇಕಾದರೆ ಹಾಗೂ ಸ್ಥಾಪನೆಯ ಆಶಯ ಈಡೇರಬೇಕಾದರೆ ಅಲ್ಲಿಂದಲೇ ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕು. ಬೇರೆಯವರಿಗೆ ಕೊಡಬಾರದು. ಈ ಕುರಿತು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದಿದ್ದರೂ ಕ್ರಮವಾಗಿಲ್ಲ. ಹೀಗಾಗಿ ಸಂಸ್ಥೆಯ ‌ವಿರುದ್ಧ ಧರಣಿ ನಡೆಸಲಾಗುವುದು’ ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ-ಕರ್ನಾಟಕ ಅಧ್ಯಕ್ಷ ಕೆ.ಎನ್. ವಿಠ್ಠಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಸ್ಥೆಯ ಎಲ್ಲಾ ಹಣಕಾಸು ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಗೂ ಆಗ್ರಹಿಸಿದ್ದೇವೆ’ ಎಂದರು.

ಅನುದಾನ ದೊರೆತಿದ್ದೇಕೆ?

ರಾಜ್ಯದಲ್ಲಿರುವ ಅರಣ್ಯಾಧಾರಿತ ಮೂಲ ಆದಿವಾಸಿಗಳಾದಿಯಾಗಿ 50 ಬುಡಕಟ್ಟುಗಳ ಜನರಿಗೆ ಸರ್ಕಾರದ ಯೋಜನೆಗಳ ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸಲು, ಉದ್ಯೋಗ ಖಾತ್ರಿ, ಶಿಕ್ಷಣದ ಮಹತ್ವ ತಿಳಿಸಲು, ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಲು ಅನುದಾನ ಒದಗಿಸಲಾಗಿದೆ. ಬುಡಕಟ್ಟು ಸಮುದಾಯದ ಜನಪ್ರತಿನಿಧಿಗಳು, ಅರಣ್ಯ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಶಿಬಿರಗಳನ್ನು ಆಯೋಜಿಸಿ ಅಗತ್ಯ ದಾಖಲೆಗಳನ್ನು ಕೊಡಿಸಬೇಕು. ‘ಇವನ್ನೆಲ್ಲ ಸಂಸ್ಥೆಯಿಂದಲೇ ಅನುಷ್ಠಾನಕ್ಕೆ ತಂದರೆ ನಮಗೂ ಕೆಲಸ ಸಿಕ್ಕಂತಾಗುತ್ತದೆ’ ಎಂಬುದು ಅಲ್ಲಿನ ಸಿಬ್ಬಂದಿಯ ಮನವಿ.

ಸಂಶೋಧನೆ, ತರಬೇತಿ, ಮೌಲ್ಯಮಾಪನ, ಕುಲಶಾಸ್ತ್ರೀಯ ಅಧ್ಯಯನ, ಅರಿವು ಮೂಡಿಸುವ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರ ನಿರ್ಮಾಣ, ಗ್ರಂಥಾಲಯ ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆ ಮೊದಲಾದ ಹಲವು ಉದ್ದೇಶಗಳೊಂದಿಗೆ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ‘ಹೀಗಿರುವಾಗ, ಸರ್ಕಾರವೇ ಕೆಲಸವನ್ನು ಬೇರೆಯವರಿಗೆ ಕೊಡಲು ಆದೇಶಿಸಿರುವುದು ಆಶಯಕ್ಕೆ ಕೊಳ್ಳಿ ಇಟ್ಟಂತಾಗಿದೆ. ಪರಿಣತರಿದ್ದರೂ ಬಳಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಬೇಕು’ ಎಂದು ಮುಖಂಡರು ಒತ್ತಾಯಿಸಿದ್ದಾರೆ.

‘ಸರ್ಕಾರದಿಂದ ಆದೇಶ ಬಂದಿದೆ’

‘ಅನುದಾನ ಖರ್ಚಾಗಿಲ್ಲ. ಎಂಸಿಎ ಮೂಲಕ ಯೋಜನೆ ಜಾರಿಗೊಳಿಸುವಂತೆ ಸಚಿವರು ಸರ್ಕಾರದಿಂದ ಆದೇಶವಾಗಿರುವುದರಿಂದ ಪ್ರಸ್ತಾವ ಪಡೆದು ಕಾರ್ಯಾದೇಶ ನೀಡಲಾಗಿದೆ. ಲೋಕಸಭೆ ಚುನಾವಣೆ ನೀತಿಸಂಹಿತೆ ಮುಕ್ತಾಯವಾದ ಬಳಿಕ ಎಂಸಿಎ ಕೆಲಸ ಮಾಡಲಿದೆ. ಒಂದು ವೇಳೆ ಸಂಸ್ಥೆಯಿಂದಲೇ ಕೈಗೊಳ್ಳುವಂತೆ ಸರ್ಕಾರದಿಂದ ಆದೇಶ ಬಂದರೆ ಪಾಲಿಸಲಾಗುವುದು’ ಎಂದು ಸಂಸ್ಥೆಯ ನಿರ್ದೇಶಕ ಎಲ್.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT