ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೂರು ಸ್ವೀಕರಿಸದ ಮೂವರು ಪೊಲೀಸರ ಅಮಾನತು

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ, ಒಬ್ಬರು ಮೃತಪಟ್ಟ ಪ್ರಕರಣ
Published 9 ಜೂನ್ 2024, 17:05 IST
Last Updated 9 ಜೂನ್ 2024, 17:05 IST
ಅಕ್ಷರ ಗಾತ್ರ

ಸಾಲಿಗ್ರಾಮ (ಮೈಸೂರು ಜಿಲ್ಲೆ): ಕೆ.ಆರ್‌. ನಗರ ತಾಲ್ಲೂಕಿನ ಚಂದಗಾಲ ಗ್ರಾಮದ ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಒಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ದೂರು ಸ್ವೀಕರಿಸಲು ನಿರಾಕರಿಸಿದ ಕೆ.ಆರ್.ನಗರ ಠಾಣೆಯ ಸಿಪಿಐ ಸಂತೋಷ್, ಎಸ್‌ಐ ಗಿರೀಶ್‌ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ರಾಘವೇಂದ್ರ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.

ಮಹದೇವ ನಾಯಕ ಕುಟುಂಬದವರು ಚಾಮರಾಜನಗರ ಜಿಲ್ಲೆ ಮಹದೇಶ್ವರಬೆಟ್ಟ ಸಮೀಪದ ತಾಳಬೆಟ್ಟದಲ್ಲಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರಲ್ಲಿ ಮಹದೇವನಾಯ್ಕ ಮೃತಪಟ್ಟಿದ್ದಾರೆ.

‘ವ್ಯಕ್ತಿಯೊಬ್ಬ ಮಹದೇವನಾಯಕ ಅವರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದರು. ಇದರಿಂದ ಭೀತರಾದ ಕುಟುಂಬದವರು ದೂರು ನೀಡಲು ಹೋದಾಗ ‍ಪೊಲೀಸರು ಸ್ವೀಕರಿಸಿಲ್ಲ. ಇದರಿಂದಾಗಿ, ನೊಂದ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದರು’ ಎಂದು ಆರೋಪಿಸಲಾಗಿದೆ.

ಮಹದೇವ ನಾಯಕ ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ತಂದ ವೇಳೆ, ಸಂಬಂಧಿಕರು ಹಾಗೂ ಗ್ರಾಮಸ್ಥರು ಠಾಣೆ ಸಮೀಪದ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಕೆ.ಆರ್. ನಗರ ಶಾಸಕ ಡಿ. ರವಿಶಂಕರ್‌, ‘ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ. ಮೃತರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಚಾಮರಾಜನಗರ ವರದಿ: ಆತ್ಮಹತ್ಯಗೆ ಯತ್ನಿಸಿ ತೀವ್ರ ಅಸ್ವಸ್ಥರಾಗಿದ್ದ ಮೂವರ ಪೈಕಿ ಇಬ್ಬರು ಅಪಾಯದಿಂದ ಪಾರಾಗಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿಯೇ ಇದೆ.

ಮೃತಪಟ್ಟ ಮಹದೇ‌ವ ನಾಯಕ ಅವರ ಪತ್ನಿ ಗೌರಮ್ಮ ಮತ್ತು ಮೊಮ್ಮಗಳು ರಿಷಿಕಾ ಚೇತರಿಸಿಕೊಂಡಿದ್ದು, ಮಗಳು ಲೀಲಾವತಿ ವೆಂಟಿಲೇಟರ್‌ನಲ್ಲಿದ್ದಾರೆ. ಹನೂರು ಬಳಿಯ ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಿಕಾ ಅವರನ್ನು ಇಲ್ಲಿನ ಸಿಮ್ಸ್‌ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT